
ಜಾರ್ಜ್ ಫರ್ನಾಂಡಿಸ್
ಕಾರವಾರ: ‘ಕಡಲತೀರ, ಜಲಪಾತ ಸೇರಿದಂತೆ ಪ್ರಾಕೃತಿಕ ಸೌಂದರ್ಯಗಳ ತಾಣಗಳಿದ್ದರೂ ಸರ್ಕಾರದ ನಿರ್ಲಕ್ಷ, ಇಚ್ಛಾಶಕ್ತಿಯ ಕೊರತೆಯಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ನಿರೀಕ್ಷಿತ ಅಭಿವೃದ್ಧಿ ಕಾಣುತ್ತಿಲ್ಲ’ ಎಂದು ಉತ್ತರ ಕನ್ನಡ ಜಿಲ್ಲಾ ನಾಗರಿಕ ಸಂಘ ಸಂಸ್ಥೆಗಳ ಒಕ್ಕೂಟದ ಗೌರವಾಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಬೇಸರ ವ್ಯಕ್ತಪಡಿಸಿದರು.
‘ಜಿಲ್ಲಾಕೇಂದ್ರದಲ್ಲೇ ಪ್ರವಾಸೋದ್ಯಮಕ್ಕೆ ಪೂರಕ ಸೌಲಭ್ಯ ಕಲ್ಪಿಸದೆ ತಾಣಗಳನ್ನು ಹಾಳುಗೆಡವಲಾಗಿದೆ. ರಾಕ್ ಗಾರ್ಡನ್, ಸಂಗೀತ ಕಾರಂಜಿ, ಸಾಗರ ಮತ್ಸ್ಯಾಲಯಗಳು ಪ್ರವಾಸಿಗರ ವೀಕ್ಷಣೆಗೆ ಲಭ್ಯವಿಲ್ಲದಂತಾಗಿದೆ. ಟ್ಯಾಗೋರ್ ಕಡಲತೀರದ ನಿರ್ವಹಣೆಗೂ ನಿರ್ಲಕ್ಷಿಸಲಾಗಿದೆ. ಪ್ರವಾಸಿಗರನ್ನು ಸೆಳೆಯುವ ಅವಕಾಶವನ್ನು ಕೈಚೆಲ್ಲಿದ್ದಾರೆ’ ಎಂದು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಪ್ರಸಿದ್ಧ ತೀಳ್ ಮಾತಿ ಕಡಲತೀರಕ್ಕೆ ತೆರಳಲು ಕನಿಷ್ಠ ರಸ್ತೆಯ ಸೌಕರ್ಯವೂ ಇಲ್ಲದಂತಾಗಿದೆ. ಕಾಳಿ ನದಿ ತೀರದಲ್ಲಿ ರಸ್ತೆ ನಿರ್ಮಿಸುವ ಭರವಸೆ ನನೆಗುದಿಗೆ ಬಿದ್ದಿದೆ. ಗೋಕರ್ಣ ಸೇರಿದಂತೆ ವಿವಿಧೆಡೆ ರೆಸಾರ್ಟ್, ಹೋಮ್ ಸ್ಟೇಗಳಿದ್ದರೂ ಅವುಗಳಿಗೆ ಪರವಾನಗಿ ನೀಡದ ಪರಿಣಾಮ ಪ್ರವಾಸೋದ್ಯಮ ಹಿನ್ನಡೆ ಅನುಭವಿಸಿದೆ. ಶರಾವತಿ, ಕಾಳಿ ನದಿಯಲ್ಲಿ ಹೌಸ್ ಬೋಟ್, ಯಾಣದಂತಹ ತಾಣಕ್ಕೆ ರೋಪ್ ವೆ ನಿರ್ಮಿಸಿದ್ದರೆ ಜಾಗತಿಕಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯಲು ಅವಕಾಶವಿತ್ತು. ಕೇರಳ, ಗೋವಾ ಮಾದರಿಯ ಪ್ರವಾಸೋದ್ಯಮ ಅಭಿವೃದ್ಧಿ ಜಿಲ್ಲೆಗೆ ಅಗತ್ಯವಿದೆ’ ಎಂದರು.
ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ‘ಮಂಗಳೂರಿನಲ್ಲಿ ಜ.10ರಂದು ನಡೆಯಲಿರುವ ಸಭೆಯಲ್ಲಿ ಜಿಲ್ಲೆಯ ಕರಾವಳಿ ಅಭಿವೃದ್ಧಿಗೆ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು, ಶಾಸಕರಿಗೆ ಮನವಿ ಸಲ್ಲಿಸಲಿದ್ದೇವೆ. ಜಿಲ್ಲೆಯಲ್ಲಿ ಉತ್ತಮ ಕಡಲತೀರ, ವಿವಿಧ ಪ್ರವಾಸಿತಾಣಗಳಿದ್ದರೂ ಜನರ ಬರುತ್ತಿಲ್ಲ. ಆದರೆ ಹೆಚ್ಚಿನ ಪ್ರವಾಸಿಗರು ಗೋವಾಕ್ಕೆ ತೆರಳುತ್ತಿದ್ದಾರೆ. ಇಲ್ಲಿ ಅಭಿವೃದ್ಧಿ ಆಗದೆ ಇರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಸರಕಾರ ಕ್ರಮಕೈಗೊಳ್ಳಬೇಕು’ ಎಂದರು.
ಗಣಪತಿ ಮಾಂಗ್ರೆ ಮಾತನಾಡಿ, ಸುನೀಲ್ ಸೋನಿ, ವಿನೋದ ನಾಯ್ಕ, ಮಾರುತಿ ನಾಯ್ಕ, ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.