ADVERTISEMENT

ಕಾಸರಕೋಡು, ಪಡುಬಿದ್ರಿ ಕಡಲತೀರಗಳು 'ಬ್ಲೂ ಫ್ಲ್ಯಾಗ್' ಪ್ರಮಾಣ ಪತ್ರಕ್ಕೆ ಶಿಫಾರಸು

ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 8:26 IST
Last Updated 19 ಸೆಪ್ಟೆಂಬರ್ 2020, 8:26 IST
ಸಚಿವ ಪ್ರಕಾಶ ಜಾವಡೇಕರ್
ಸಚಿವ ಪ್ರಕಾಶ ಜಾವಡೇಕರ್    

ಕಾರವಾರ: ಉತ್ತರ ಕನ್ನಡ ಹೊನ್ನಾವರದ 'ಇಕೋ ಬೀಚ್' ಹಾಗೂ ಉಡುಪಿಯ ಪಡುಬಿದ್ರಿಯ ಕಡಲತೀರ ಸೇರಿದಂತೆ ದೇಶದ ಎಂಟು ಕಡಲ ತೀರಗಳನ್ನು ಪ್ರತಿಷ್ಠಿತ 'ಬ್ಲೂ ಫ್ಲ್ಯಾಗ್' ಪ್ರಮಾಣ ಪತ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ ಜಾವಡೇಕರ್ ತಿಳಿಸಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಣೆಯನ್ನು ಹಂಚಿಕೊಂಡಿದ್ದು, ಬ್ಲೂ ಫ್ಲ್ಯಾಗ್ ಪ್ರಮಾಣಪತ್ರ ಪಡೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ನಮ್ಮ ದೇಶದ ಪರಿಣತರನ್ನು ಒಳಗೊಂಡ ಸ್ವತಂತ್ರ ತಂಡವು ಪರಿಶೀಲಿಸಲಿದೆ. ಇದರಲ್ಲಿ ದೇಶದ ಪ್ರಸಿದ್ಧ ಪರಿಸರ ತಜ್ಞರು, ವಿಜ್ಞಾನಿಗಳು ಸೇರಿದ್ದಾರೆ ಎಂದಿದ್ದಾರೆ.

ಗುಜರಾತ್ ರಾಜ್ಯದ ಶಿವರಾಜಪುರ, ದಿಯು ಮತ್ತು ದಾಮನ್‌ನ ಘೋಗ್ಲಾ, ಕೇರಳದ ಕಪ್ಪದ್, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್ ಬೀಚ್, ಅಂಡಮಾನ್ ಮತ್ತು ನಿಕೋಬಾರ್‌ನ ರಾಧಾನಗರ ಕಡಲತೀರಗಳು ಶಿಫಾರಸಿಗೆ ಗುರುತಿಸಲಾಗಿರುವ ಇತರ ಕಡಲ ತೀರಗಳಾಗಿವೆ.

ADVERTISEMENT

ಶಿಫಾರಸು ಪ್ರಕ್ರಿಯೆಯ ಭಾಗವಾಗಿ ಸೆ.18ರಂದು ಈ ಎಂಟೂ ಕಡಲತೀರಗಳಲ್ಲಿ ಏಕಕಾಲಕ್ಕೆ 'ನಾನು ಕಡಲತೀರವನ್ನು ರಕ್ಷಿಸುತ್ತೇನೆ' (ಐ ಆ್ಯಮ್ ಸೇವಿಂಗ್ ಮೈ ಬೀಚ್) ಎಂಬ ಧ್ವಜಾರೋಹಣ ಮಾಡಲಾಗಿತ್ತು.

ಕಡಲತೀರದ ಸ್ವಚ್ಛತೆ, ನೀರಿನ ಗುಣಮಟ್ಟ, ಪರಿಸರ ಸ್ನೇಹಿ ವಾತಾವರಣ, ಸುರಕ್ಷತೆ ಮುಂತಾದ ಅಂಶಗಳನ್ನು ಪರಿಗಣಿಸಿ 'ಬ್ಲೂ ಫ್ಲ್ಯಾಗ್' ಪ್ರಮಾಣಪತ್ರವನ್ನು 'ಪರಿಸರ ಶಿಕ್ಷಣಕ್ಕಾಗಿ ವೇದಿಕೆ' (ಎಫ್‌ಇಇ) ನೀಡುತ್ತದೆ. ಅದರ ಕಚೇರಿಯು ಡೆನ್ಮಾರ್ಕ್‌‌ನಲ್ಲಿರುವ ಕೋಪನ್ ಹೆಗೆನ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.