ADVERTISEMENT

ಬದ್ಧತೆ ಇದ್ದರೆ ಹತ್ತು ದಿನದಲ್ಲಿ ಆರೋಗ್ಯ ಕ್ಷೇತ್ರ ಸುಧಾರಿಸಬಹುದು: ಐವನ್ ಡಿಸೋಜಾ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 6:07 IST
Last Updated 21 ಸೆಪ್ಟೆಂಬರ್ 2022, 6:07 IST
ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಐವನ್ ಡಿಸೋಜಾ
ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಐವನ್ ಡಿಸೋಜಾ   

ಶಿರಸಿ: ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ ಸಂಬಂಧ ಬಿಜೆಪಿ ನಾಟಕ ಮಾಡುತ್ತಿದೆ. ಸರ್ಕಾರಕ್ಕೆ ಬದ್ದತೆ ಇದ್ದರೆ ಹತ್ತು ದಿನದಲ್ಲಿ ಜಿಲ್ಲೆಯ ಆರೋಗ್ಯ ಕ್ಷೇತ್ರ ಸುಧಾರಿಸಲು ಸಾಧ್ಯವಿದೆ' ಎಂದು ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಐವನ್ ಡಿಸೋಜಾ ಹೇಳಿದರು.

'ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಉತ್ತರ ಕನ್ನಡದಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಬಿಜೆಪಿ ಶಾಸಕರು ಪ್ರಯತ್ನಿಸಿಲ್ಲ. ಚುನಾವಣೆಗೆ 180 ದಿನ ಉಳಿದಾಗ ಸಭೆ, ಹೇಳಿಕೆ ನಾಟಕ ಆಡುತ್ತಿದ್ದಾರೆ' ಎಂದು ಇಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

'ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರನ್ನು ನೇಮಕ ಮಾಡಲು. ಆರೋಗ್ಯ ಸೌಲಭ್ಯಗಳನ್ನು ಮೇಲ್ದರ್ಜೇಗೇರಿಸುವ ಕೆಲಸ‌ ಮಾಡಲಿ' ಎಂದರು.

ADVERTISEMENT

'ಭಾರತ್ ಜೋಡೊ ಯಾತ್ರೆ ಅ.15, 16ಕ್ಕೆ ಚಿತ್ರದುರ್ಗ ಜಿಲ್ಲೆಗೆ ತಲುಪಲಿದ್ದು ಅಲ್ಲಿಉತ್ತರ ಕನ್ನಡದ 30 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ' ಎಂದರು.

'ಅ.15ಕ್ಕೆ ಚಳ್ಳಕೆರೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದವರು, 16ಕ್ಕೆ ಮೊಳಕಾಲ್ಮೂರಿನಲ್ಲಿ ಯಲ್ಲಾಪುರ ಕ್ಷೇತ್ರದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ ಐದು ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ' ಎಂದರು.

'ಯಾತ್ರೆಯ ಪೂರ್ವ ಸಿದ್ಧತೆಯಾಗಿ ಬೂತ್ ಮಟ್ಟದಲ್ಲಿ ಸಮಿತಿಗಳ ರಚನೆಯಾಗಿದೆ. ಕಾರ್ಯಕರ್ತರ ಜತೆ ಸಭೆ ನಡೆಸಿ ರೂಪುರೇಷೆ ಸಿದ್ದಪಡಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ, ಪ್ರಚಾರ ಸಮಿತಿ, ಸಂಪರ್ಕ ಸಮಿತಿ, ಸಾರಿಗೆ ಸಮಿತಿ, ಸಂಯೋಜನೆ ಸಮಿತಿ ರಚಿಸಲಾಗಿದೆ' ಎಂದು ತಿಳಿಸಿದರು.

'ಸೆ.27 ರಿಂದ 29ರವರೆಗೆ ನಾಯಕರು ಸೇರಿ ಜಿಲ್ಲೆಯಲ್ಲಿ ಎರಡನೇ ಹಂತದ ಪ್ರವಾಸ ಕೈಗೊಂಡು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದ್ದೇವೆ' ಎಂದರು.

'ಜನರು ಬಿಜೆಪಿ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದು ಜನರ ಭಾವನೆಯಾಗಿದೆ. ಈ ಭಾವನೆಗೆ ಸ್ಪಂದಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ' ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಜಗದೀಶ ಗೌಡ, ಶ್ರೀನಿವಾಸ ನಾಯ್ಕ, ಬಸವರಾಜ ದೊಡ್ಮನಿ, ಅಬ್ದುಲ್ ಮಜೀದ್, ಸಂತೋಷ ಶೆಟ್ಟಿ, ಜ್ಯೋತಿ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.