ADVERTISEMENT

ಮುಂಡಗೋಡ | ವಾಹನಗಳ ಕೊರತೆ: ಕಸ ಸಂಗ್ರಹಣೆಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 1 ಮೇ 2025, 14:27 IST
Last Updated 1 ಮೇ 2025, 14:27 IST
ಮುಂಡಗೋಡ ಪಟ್ಟಣ ಪಂಚಾಯಿತಿ ಆವರಣದಲ್ಲಿ ನಿರುಪಯುಕ್ತವಾಗಿ ನಿಂತಿರುವ ಕಸ ಸಂಗ್ರಹಣೆಯ ಟ್ರ್ಯಾಕ್ಟರ್
ಮುಂಡಗೋಡ ಪಟ್ಟಣ ಪಂಚಾಯಿತಿ ಆವರಣದಲ್ಲಿ ನಿರುಪಯುಕ್ತವಾಗಿ ನಿಂತಿರುವ ಕಸ ಸಂಗ್ರಹಣೆಯ ಟ್ರ್ಯಾಕ್ಟರ್   

ಮುಂಡಗೋಡ: ಪಟ್ಟಣದಲ್ಲಿ ಮನೆ ಮನೆ ಕಸ ಸಂಗ್ರಹಣೆಗೆ ವಾಹನಗಳು ನಿತ್ಯವೂ ಬಾರದಿರುವುದರಿಂದ, ಹಲವರು ತ್ಯಾಜ್ಯವನ್ನು ಗಟಾರನಲ್ಲಿ ಸುರಿಯುತ್ತಿದ್ದಾರೆ. ಇದರಿಂದ, ವಾರ್ಡ್‌ಗಳ ಓಣಿಗಳಲ್ಲಿ ಸ್ವಚ್ಛತೆ ಮಾಯವಾಗುತ್ತಿದ್ದು, ಚರಂಡಿಯಲ್ಲಿ ಸುರಿಯುವ ತ್ಯಾಜ್ಯವು ದುರ್ನಾತಕ್ಕೆ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಈ ಹಿಂದೆ ಮನೆ ಮುಂದೆ ರಂಗೋಲಿ ಹಾಕುತ್ತಿರುವಾಗಲೇ, ಕಸ ಸಂಗ್ರಹಣೆಯ ವಾಹನಗಳು ಬರುತ್ತಿದ್ದವು. ಜನರೂ , ಹಸಿ ಕಸ, ಒಣ ಕಸ ಎಂದು ವಿಂಗಡಿಸಿ, ವಾಹನಗಳಿಗೆ ನೀಡುತ್ತಿದ್ದರು. ಹಸಿ ಕಸ, ಮುಸುರಿಯನ್ನು ಗಟಾರನಲ್ಲಿ ಚೆಲ್ಲದಂತೆ ಪಟ್ಟಣ ಪಂಚಾಯಿತಿಯವರು ಕರಪತ್ರದ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದರು. ಆದರೆ, ಕೆಲವು ತಿಂಗಳಿಂದ ನಿತ್ಯ ಬರುತ್ತಿದ್ದ ಕಸ ಸಂಗ್ರಹಣೆಯ ವಾಹನಗಳು, ಎರಡು ದಿನ, ಮೂರು ದಿನಕ್ಕೊಮ್ಮೆ ಓಣಿಗಳಿಗೆ ಬರುತ್ತಿವೆ. ಸಮಯದಲ್ಲಿಯೂ ವ್ಯತ್ಯಾಸವಾಗುತ್ತಿದೆ. ಇದರಿಂದ ಜನರು, ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ಅನಿವಾರ್ಯವಾಗಿ, ಚರಂಡಿ, ಬಯಲು ಪ್ರದೇಶಗಳಲ್ಲಿ ಚೆಲ್ಲುವುದನ್ನು ರೂಢಿಸಿಕೊಂಡಿದ್ದಾರೆ.

‘ನಿತ್ಯ ಕಸ ಸಂಗ್ರಹಣೆಯ ವಾಹನಗಳು ಬರುವುದಿಲ್ಲ. ಒಣ ಕಸ ಆದರೆ, ಮನೆಗಳಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ, ಹಸಿ ಕಸ, ಆಹಾರ ಪದಾರ್ಥದ ತ್ಯಾಜ್ಯವನ್ನು ಎರಡು ದಿನ ಸಂಗ್ರಹಿಸಿಡಲು ಆಗದು. ಇದರಿಂದ ಅನಿವಾರ್ಯವಾಗಿ ಚರಂಡಿಯಲ್ಲಿ ಸುರಿಯುತ್ತಾರೆ. ಮಳೆ ನೀರು ಹರಿದರೆ, ಚರಂಡಿಯ ತ್ಯಾಜ್ಯ ಸ್ವಚ್ಛವಾಗುತ್ತದೆ. ಇಲ್ಲವಾದರೆ, ಅಲ್ಲಿಯೇ ಕೊಳೆತು ದುರ್ನಾತ ಬೀರುತ್ತದೆ. ಕಸ ಪ್ರತ್ಯೇಕಿಸಿ ಕೊಡಲೇಬೇಕು. ಇಲ್ಲದಿದ್ದರೆ, ವಾಹನಕ್ಕೆ ಹಾಕಿಸಿಕೊಳ್ಳುವುದಿಲ್ಲ. ಗಟಾರಗಳು ಸಹ ಹೂಳು, ತ್ಯಾಜ್ಯದಿಂದ ತುಂಬಿವೆʼ ಎಂದು ಹಳೂರು ಓಣಿಯ ನಿವಾಸಿ ಪರುಶುರಾಮ ದೂರಿದರು.

ADVERTISEMENT

‘ಕಳೆದ ಕೆಲ ತಿಂಗಳಿಂದ ಕಸ ಸಂಗ್ರಹಣೆಯಲ್ಲಿ ಸಮಸ್ಯೆ ಆಗಿದೆ. ಮೊದಲು ನಿತ್ಯ ವಾಹನಗಳು ಓಡಾಡುತ್ತಿದ್ದವು. ಆದರೆ, ಕಸ ಸಂಗ್ರಹಣೆಯ ಮೂರು ವಾಹನಗಳು ದುರಸ್ತಿ ಆಗಿಲ್ಲ. ದುರಸ್ತಿ ಆಗುವ ಹಂತದಲ್ಲಿಯೂ ಅವುಗಳಿಲ್ಲ. ಹೊಸ ವಾಹನಗಳನ್ನು ಖರೀದಿಸಲು ಅನುದಾನವೂ ಇಲ್ಲ. ಇದರಿಂದ, ಎರಡು ದಿನಕ್ಕೊಮ್ಮೆ ವಾರ್ಡ್‌ಗಳಲ್ಲಿ ಕಸ ಸಂಗ್ರಹಣೆಯ ವಾಹನಗಳು ಸಂಚರಿಸುತ್ತಿವೆʼ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಫಣಿರಾಜ ಹದಳಗಿ ಹೇಳಿದರು.

‘ಕಸ ಸಂಗ್ರಹಣೆಯ ಒಂದು ಟ್ರ್ಯಾಕ್ಟರ್‌, ಒಂದು ಟಾಟಾ ಏಸ್‌ ವಾಹನ ದುರಸ್ತಿ ಆಗದಿರುವುದರಿಂದ, ಇನ್ನುಳಿದ ನಾಲ್ಕು ವಾಹನಗಳನ್ನೇ ಬಳಸಿಕೊಂಡು, ಎಲ್ಲ ವಾರ್ಡ್‌ಗಳ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಕಸ ಸಂಗ್ರಹಣೆಗೆ ಈ ಹಿಂದೆ ಬಳಕೆಯಾಗುತ್ತಿದ್ದ ಎರಡು ಟ್ರ್ಯಾಕ್ಟರ್‌, ಒಂದು ಟಾಟಾ ಏಸ್‌ ನಿರುಪಯುಕ್ತವಾಗಿದ್ದು, ಹರಾಜು ಮಾಡುವ ಪ್ರಕ್ರಿಯೆಯಲ್ಲಿವೆʼ ಎಂದು ಕಸ ವಿಲೇವಾರಿಯ ಸಹಾಯಕ ಸಿಬ್ಬಂದಿ ವಿವೇಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.