ಕಾರವಾರ: 'ಕೊಂಕಣಿ ಸಾಹಿತಿ ಮಹಾಬಳೇಶ್ವರ ಸೈಲ್ ಅವರ 'ಯುಗ ಸಂಹಾರ' ಕಾದಂಬರಿಯ ಕನ್ನಡ ಅನುವಾದ 'ಚಂಡಮಾರುತ' ಮತ್ತು ಇತರ ಕೃತಿಗಳು ಮೇ 26ರಂದು ಬಿಡುಗಡೆಯಾಗಲಿವೆ. ಅಂದು ಬೆಳಿಗ್ಗೆ 11ಕ್ಕೆ ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಸಿದ್ಧ ವಿಮರ್ಶಕ ಡಾ.ಎಂ.ಜಿ.ಹೆಗಡೆ ಕೃತಿಯನ್ನು ಅನಾವರಣಗೊಳಿಸಲಿದ್ದಾರೆ' ಎಂದು 'ಅಭಿಮಾನಿ ಕಾರವಾರ'ದ ಕೃಷ್ಣಾನಂದ ಬಾಂದೇಕರ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮೂಲ ಕೊಂಕಣಿ ಕೃತಿಯನ್ನು ಶಾ.ಮಂ.ಕೃಷ್ಣರಾಯ ಅವರು ಕನ್ನಡಕ್ಕೆ ಅನುವಾದ ಮಾಡಿದ‌್ದು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷಾ ವಿಭಾಗದ ಸಂಚಾಲಕ ಡಾ.ಭೂಷಣ ಭಾವೆ ವೇದಿಕೆಯಲ್ಲಿ ಇರಲಿದ್ದಾರೆ' ಎಂದು ತಿಳಿಸಿದರು.
'ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪುರಸ್ಕೃತ ಮಹಾಬಳೇಶ್ವರ ಸೈಲ್ ಅವರು ಕಾರವಾರದ ಮಾಜಾಳಿಯ ಮೂಲದವರು. ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತ ಕೊಂಕಣಿ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರ ಬಗ್ಗೆ ಯುವಕರಿಗೆ ಹೆಚ್ಚು ಪರಿಚಯವಾಗಲಿ ಎಂಬುದು ಕಾರ್ಯಕ್ರಮದ ಆಶಯವಾಗಿದೆ. ಕೃತಿಯನ್ನು ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಶಾ.ಮಂ.ಕೃಷ್ಣರಾಯ ಅವರು ಅನುವಾದ ಮಾಡಿದ್ದಾರೆ. ಕುವೆಂಪು ಭಾಷಾ ಭಾರತಿ ಪ್ರಕಾಶನವು ಪ್ರಕಟಿಸಿದೆ. 16ನೇ ಶತಮಾನದಲ್ಲಿ ಪೋರ್ಚುಗೀಸರ ಧರ್ಮಾಂಧತೆಯ ಕುರಿತಾದ ಕೃತಿ ಇದಾಗಿದೆ' ಎಂದು ಹೇಳಿದರು.
ಪ್ರಮುಖ ಮಂಜುನಾಥ ಪವಾರ್ ಮಾತನಾಡಿ, 'ಕನ್ನಡ ಮತ್ತು ಕೊಂಕಣಿ ಸಾಹಿತ್ಯದ ನಡುವೆ ಕೊಂಡಿಯಾಗುವ ಕೆಲಸ ಮಾಡುತ್ತಿದ್ದೇವೆ. ಎರಡೂ ಭಾಷಿಕರ ನಡುವೆ ಬಾಂಧವ್ಯ ಹೆಚ್ಚಾಗಲಿ' ಎಂದು ಆಶಿಸಿದರು.
ಗಣಪತಿ ಬಾಡ್ಕರ್, ಅಮನ್ ಶೇಖ್, ನಾಗಭೂಷಣ್, ವಿನೋದ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.