ADVERTISEMENT

ಗೋಕರ್ಣ: ಹರ ಹರ ಮಹಾದೇವ ಘೋಷಣೆ, ಬ್ರಹ್ಮರಥೋತ್ಸವದೊಂದಿಗೆ ಶಿವರಾತ್ರಿ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 13:35 IST
Last Updated 21 ಫೆಬ್ರುವರಿ 2023, 13:35 IST
ಪುರಾಣ ಪ್ರಸಿದ್ಧ ಗೋಕರ್ಣ ಮಹಾಶಿವರಾತ್ರಿಯ ಅಂಗವಾಗಿ ಮಹಾಬಲೇಶ್ವರನ ಬ್ರಹ್ಮರಥೋತ್ಸವ ನಡೆಯಿತು.
ಪುರಾಣ ಪ್ರಸಿದ್ಧ ಗೋಕರ್ಣ ಮಹಾಶಿವರಾತ್ರಿಯ ಅಂಗವಾಗಿ ಮಹಾಬಲೇಶ್ವರನ ಬ್ರಹ್ಮರಥೋತ್ಸವ ನಡೆಯಿತು.   

ಗೋಕರ್ಣ: ಪುರಾಣ ಪ್ರಸಿದ್ಧ ಗೋಕರ್ಣ ಮಹಾಶಿವರಾತ್ರಿಯ ಅಂಗವಾಗಿ ಮಹಾಬಲೇಶ್ವರನ ಬ್ರಹ್ಮರಥೋತ್ಸವ ಮಂಗಳವಾರ ರಾಜ ಗಾಂಭೀರ್ಯದೊಂದಿಗೆ ಶಿವನ ಸ್ತುತಿ, ಸಂತೋಷ, ಉಲ್ಲಾಸ, ಹರ ಹರ ಮಹಾದೇವ ಘೋಷಣೆಯೊಂದಿಗೆ ವಿಜ್ರಂಭಣೆಯಿಂದ ಮುಕ್ತಾಯವಾಯಿತು.

ರಥಬೀದಿಯಲ್ಲಿ ನಡೆದ ಈ ಆಕರ್ಷಕ ರಥೋತ್ಸವ ಮುಖ್ಯ ದೇವರಾದ ಮಹಾಬಲೇಶ್ವರನ ಮೂರ್ತಿಯನ್ನು ಹೊತ್ತು ವೆಂಕಟ್ರಮಣ ದೇವಸ್ಥಾನದವರೆಗೆ ಸಾಗಿ ತಿರುಗಿ ಮೂಲಸ್ಥಾನಕ್ಕೆ ಬಂದು ನಿಂತಿತು. ಅತಿ ಎತ್ತರದ ರಥ ಎಂದೇ ಪ್ರಸಿದ್ಧಿ ಪಡೆದ, ಅತಿ ಪುರಾತನವಾದ ಈ ರಥವನ್ನು ಬಣ್ಣ-ಬಣ್ಣದ ಬಾವುಟಗಳಿಂದ, ತಳಿರು-ತೋರಣಗಳಿಂದ ಶೃಂಗರಿಸಲಾಗಿತ್ತು. ರಥವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಸ್ಥಳೀಯರ ಸಂಗಡ ಅನೇಕ ವಿದೇಶಿಯರೂ ರಥೋತ್ಸವದಲ್ಲಿ ಪಾಲ್ಗೊಂಡು ಸಂತೋಷಪಟ್ಟರು.

ಸಹಸ್ರಾರು ಜನ ಸುತ್ತಮುತ್ತಲು ನಿಂತು ರಥೋತ್ಸವವನ್ನು ನೋಡಿ ಆನಂದಿಸಿದರು. ರಥೋತ್ಸವದ ಉದ್ದಕ್ಕೂ ಹರ ಹರ ಮಹಾದೇವ, ಜಯ ಜಯ ಶಂಕರ, ಹರ ಹರ ಶಂಕರ ಎಂಬ ಶಿವ ಸ್ತುತಿಗಳು ಭಕ್ತರ ಬಾಯಲ್ಲಿ ಕೇಳಿ ಬಂದಿತು. ರಸ್ತೆಯ ಎರಡು ಪಕ್ಕದಲ್ಲಿಯ ಮನೆಯ ಮಹಡಿಗಳ ಮೇಲೆ ವಿದೇಶಿಗರು ಸೇರಿದಂತೆ ಭಕ್ತರು ನಿಂತು ಪೋಟೊ ತೆಗೆಯುವುದು ರೋಚಕವಾಗಿ ಕಂಡು ಬಂದಿತು.

ADVERTISEMENT

ಗೋಕರ್ಣದ ರಥಬೀದಿ ಜನರಿಂದ ತುಂಬಿ ತುಳಕಿದ್ದು ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಈ ರಥೋತ್ಸವಕ್ಕೆ ಸಾಕ್ಷಿಯಾದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ, ಕುಮಟಾ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ, ಮತ್ತು ಸಮಿತಿಯ ಉಳಿದ ಸದಸ್ಯರು ರಥಕಾಣಿಕೆ ಸಲ್ಲಿಸಿದರು.

ಕವಳೆ ಮಠದ ಕೈವಲ್ಯ ಮಠಾಧೀಶರಾದ ಶಿವಾನಂದ ಸರಸ್ವತಿ ಸ್ವಾಮೀಜಿ ರಥಕಾಣಿಕೆ ನೆರವೇರಿಸಿದರು. ಭಟ್ಕಳ್ ಡಿ.ಎಸ್.ಪಿ., ಗೋಕರ್ಣ ಠಾಣಾ ನಿರೀಕ್ಷಕ ಮಂಜುನಾಥ ಗೌಡ ಸ್ಥಳದಲ್ಲಿ ಉಪಸ್ಥಿತರಿದ್ದು, ಇವರ ನೇತೃತ್ವದಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸೂಕ್ತ ಬಂದವಸ್ತ ಏರ್ಪಡಿಸಿ ಯಾವುದೇ ಅವಘಡ ಆಗದಂತೆ ನೋಡಿಕೊಂಡರು.

ರಾರಾಜಿಸಿದ ಸಿಮೆಂಟ್ ರಸ್ತೆ ಫಲಕ: ರಥಬೀದಿಯಲ್ಲಿ ಸಿಮೆಂಟ್ ರಸ್ತೆ ಮಾಡುವುದನ್ನು ವಿರೋಧಿಸಿ, ಮಹಾರಥದ ಅಂತರಂಗ ಎಂಬ ಹೆಸರಿನಲ್ಲಿ ರಥದ ಸುತ್ತಮುತ್ತಲೂ ಫಲಕ ಅಳವಡಿಸಿದ್ದು ಎಲ್ಲರ ಗಮನ ಸೆಳೆಯಿತು. ಈಗಾಗಲೇ ನನಗೆ ವಯಸ್ಸಾಗಿದೆ. ಕಾಂಕ್ರೀಟ್ ರಸ್ತೆಯಾಗಲಿದೆಯಂತೆ. ಈ ಕಾಂಕ್ರೀಟ್ ರಸ್ತೆಯಿಂದ ನನ್ನನ್ನು ರಕ್ಷಿಸಿ ಎಂದು ರಥದ ಚಿತ್ರದೊಂದಿಗೆ ಫಲಕದಲ್ಲಿ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.