ADVERTISEMENT

ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಗೆ ತಿದ್ದುಪಡಿ ಬೇಡ: ವಿಶ್ವ ಹಿಂದೂ ಪರಿಷತ್

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:31 IST
Last Updated 10 ಡಿಸೆಂಬರ್ 2025, 4:31 IST
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಪ್ರಸ್ತಾವಿತ ತಿದ್ದುಪಡಿಯು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶಿರಸಿಯಲ್ಲಿ ಪ್ರತಿಭಟಿಸಿದರು
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಪ್ರಸ್ತಾವಿತ ತಿದ್ದುಪಡಿಯು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶಿರಸಿಯಲ್ಲಿ ಪ್ರತಿಭಟಿಸಿದರು   

ಶಿರಸಿ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020ರ ಪ್ರಸ್ತಾವಿತ ತಿದ್ದುಪಡಿಯು ಸಂವಿಧಾನದ ಆಶಯಕ್ಕೆ ಹಾಗೂ ರಾಜ್ಯದ ಮತ್ತು ಹಿಂದೂ ಸಮಾಜದ ಹಿತಾಸಕ್ತಿಗೆ ವಿರೋಧಿ ಆಗಿರುವುದರಿಂದ ಅದನ್ನು ವಿಧಾನ ಸಭೆಯಲ್ಲಿ ಮಂಡಿಸದಂತೆ ಕ್ರಮ ಕೈಗೊಳ್ಳಲು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟಿಸಿ ಮನವಿ ಸಲ್ಲಿಸಿದರು.

ಮಂಗಳವಾರ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿದ ಸಂಘಟನೆಯ ಕಾರ್ಯಕರ್ತರು, 
‘ವಿಧಾನಸಭೆಯಲ್ಲಿ ಕರ್ನಾಟಕ ಜಾನುವಾರು 2020ರ ಸೆಕ್ಷನ್ 8(4)ಕ್ಕೆ ತಿದ್ದುಪಡಿ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಂಡಿದೆ. ಇದರಿಂದ ಜಾನುವಾರುಗಳ ರಕ್ಷಣೆ ಸವಾಲಾಗಲಿದೆ. ಹಾಗಾಗಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆಯನ್ನು ತಿದ್ದುಪಡಿ ಮಾಡುವುದನ್ನು ತಕ್ಷಣ ಕೈಬಿಡಬೇಕು. ಜತೆಗೆ, ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

‘ರಾಜ್ಯದಲ್ಲಿ ಗೋವುಗಳ ಹಿಂಸಾತ್ಮಕ ಸಾಗಣೆ ಮಾಡುತ್ತಿರುವುದು ಕಂಡುಬರುತ್ತಿತ್ತು. ಕಾಯ್ದೆ 2021ರಲ್ಲಿ ಜಾರಿಯಾದ ನಂತರ ಈ ಕ್ರೂರತೆ ಒಂದಷ್ಟು ಕಡಿಮೆ ಆದದ್ದು ಕಂಡುಬಂದಿದೆ. ಆದರೆ ಇನ್ನೂ ಕೂಡ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡದ ಕಾರಣ ಹಲವು ಕಡೆ ಹಣದ ಆಸೆಗಾಗಿ ವಾಹನದ ಮಾಲಕರು ಕ್ರೂರವಾಗಿ ಜಾನುವಾರುಗಳನ್ನು ಸಾಗಿಸುವುದು ಕಂಡುಬಂದಿದೆ. ಇದನ್ನು ನಿಯಂತ್ರಿಸಬೇಕಾದರೆ ಈ ಕಾಯಿದೆ ಬಿಗಿಯಾಗಿ ಜಾರಿಗೊಳಿಸಬೇಕಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಟುಕರಿಗೆ ಹಾಗೂ ಗೋ ಕಳ್ಳರಿಗೆ ಸುಲಭವಾಗಿ ಸಾಗಣೆ ಮಾಡಲು ಅನುಕೂಲವಾಗುವಂತೆ ವಶಪಡಿಸಿದ ವಾಹನ ತಾತ್ಕಾಲಿಕ ಹಸ್ತಾಂತರಕ್ಕೆ ಬ್ಯಾಂಕ್ ಗ್ಯಾರಂಟಿ ಕೊಡುವುದನ್ನು ಕೈ ಬಿಡುವ ಬಗ್ಗೆ ಕಾಯ್ದೆಯನ್ನು ತಿದ್ದುಪಡಿ ಮಾಡದಂತೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಾನೂನು ರೀತಿಯಲ್ಲಿ ಮಾತ್ರ ಜಾನುವಾರು ಸಾಗಣೆ ಮಾಡುವಂತೆ ಕಾನೂನು ಜಾಗೃತಿ ಮಾಡಬೇಕು’ ಎಂದು ಆಗ್ರಹಿಸಿದರು. 

ADVERTISEMENT

ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು. ಈ ವೇಳೆ ಸಂಘಟನೆಯ ಪ್ರಮುಖರಾದ ಗಂಗಾಧರ ಹೆಗಡೆ, ಮಂಜುನಾಥ ಭಟ್, ಅಮಿತ್ ಶೇಟ್, ಗಣಪತಿ ಭಟ್, ಪ್ರತಿಭಾ ಪುರುಷೋತ್ತಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.