ಕಾರವಾರ: ತಾಲ್ಲೂಕಿನ ಕೈಗಾದಲ್ಲಿರುವ ಅಣು ವಿದ್ಯುತ್ ಉತ್ಪಾದನಾ ಸ್ಥಾವರಗಳ ಪೈಕಿ 1ನೇ ಘಟಕದ ಕಾರ್ಯ ಚಟುವಟಿಕೆ ಸ್ಥಗಿತಗೊಂಡಿದೆ. ಘಟಕದ ಕೂಲಂಟ್ ಚಾನೆಲ್‍ಗಳನ್ನು (ಶೀತಕ ಕೊಳವೆ) ಮರು ಅಳವಡಿಸಬೇಕಿದೆ.
ನಿರ್ವಹಣೆ ಕಾರಣಕ್ಕೆ ಕೈಗಾದಲ್ಲಿನ ನಾಲ್ಕು ಅಣು ವಿದ್ಯುತ್ ಉತ್ಪಾದನೆ ಸ್ಥಾವರಗಳನ್ನು ಆಗಾಗ್ಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಆದರೆ, ರಿಯಾಕ್ಟರ್‌ನ ಶೀತಕ ಕೊಳವೆಗಳನ್ನು ಹೊಸದಾಗಿ ಜೋಡಿಸಬೇಕಿದ್ದು, ಮೊದಲ ಘಟಕದ ಕಾರ್ಯವನ್ನು ಇದೇ ಮೊದಲ ಬಾರಿಗೆ ಸ್ಥಗಿತಗೊಳಿಸಲಾಗಿದೆ.
1989ರಲ್ಲಿ ಭಾರಜಲ ಮಾದರಿಯ ರಿಯಾಕ್ಟರ್ ಒಳಗೊಂಡ ಅಣು ವಿದ್ಯುತ್ ಉತ್ಪಾದನಾ ಸ್ಥಾವರ ನಿರ್ಮಿಸುವ ಪ್ರಕ್ರಿಯೆ ಆರಂಭಗೊಂಡಿತು. 1998ರಲ್ಲಿ ಕಾರ್ಯಾರಂಭಿಸಿದ ಮೊದಲ ಘಟಕವು 220 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಸತತ 27 ವರ್ಷಗಳಿಂದ ವಿದ್ಯುತ್ ಉತ್ಪಾದಿಸುತ್ತಿದ್ದ ಘಟಕದ ಚಟುವಟಿಕೆ ಮೊದಲ ಬಾರಿ ಸ್ಥಗಿತಗೊಂಡಿದೆ.
ಇದೇ ಘಟಕವು 2018ರ ಡಿಸೆಂಬರ್ 10 ರಂದು ಸತತ 962 ದಿನ ವಿದ್ಯುತ್ ಉತ್ಪಾದಿಸುವ ಮೂಲಕ ಇಂಗ್ಲೆಂಡ್‍ನ ಹೇಶಮ್ ಅಣುಸ್ಥಾವರದ ದಾಖಲೆಯನ್ನು ಅಳಿಸಿ, ವಿಶ್ವ ದಾಖಲೆ ಬರೆದಿತ್ತು.
‘ಅಣು ವಿದ್ಯುತ್ ಉತ್ಪಾದನೆ ಸ್ಥಾವರದ ಮೊದಲ ಘಟಕದಲ್ಲಿ ಅಣು ಶಕ್ತಿ ಉತ್ಪಾದನೆಗೆ ಯುರೇನಿಯಂ ಬಂಡಲ್‌ಗಳನ್ನು ರವಾನಿಸುವ ಮತ್ತು ಸ್ಥಾವರದಲ್ಲಿ ತಾಪಮಾನ ನಿಯಂತ್ರಿಸುವ 306 ಕೊಳವೆಗಳಿವೆ. ಅಧಿಕ ತಾಪಮಾನದಿಂದ ಅವು ಬಾಗುವ ಸಾಧ್ಯತೆ ಇರುತ್ತದೆ. ಅದಕ್ಕೆ ನಿಗದಿತ ಅವಧಿಗೆ ಅವುಗಳನ್ನು ಬದಲಿಸಿ, ಹೊಸದು ಅಳವಡಿಸಬೇಕು. ಪ್ರತಿ 25 ರಿಂದ 30 ವರ್ಷಕ್ಕೊಮ್ಮೆ ಈ ಪ್ರಕ್ರಿಯೆ ನಡೆಯುವುದು ಸಹಜ’ ಎಂದು ಕೈಗಾದ ಭಾರತೀಯ ಅಣು ವಿದ್ಯುತ್ ಉತ್ಪಾದನಾ ನಿಗಮ ಲಿಮಿಟೆಡ್‌ನ (ಎನ್‌ಪಿಸಿಐಎಲ್) ನಿರ್ದೇಶಕ ಬಿ.ವಿನೋದ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸ್ಥಾವರವು ಸ್ಥಗಿತಗೊಂಡಾಗ, ಶೀತಕ ಕೊಳವೆಗಳ ಜೊತೆಗೆ ಅದರಲ್ಲಿನ ಇನ್ನಿತರ ಯಂತ್ರೋಪಕರಣ ಪರಿಶೀಲಿಸಿ ದುರಸ್ತಿ ಪಡಿಸಲಾಗುತ್ತದೆ. ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿ ತಗುಲಬಹುದು’ ಎಂದರು.
ಅಣು ಸ್ಥಾವರದ ಶೀತಕ ಕೊಳವೆಗಳನ್ನು ಹೊಸದಾಗಿ ಜೋಡಿಸಲು ಹೆಚ್ಚು ಸಮಯ ಬೇಕು. ಒಂದು ವಾರದಿಂದ ಘಟಕ ಸ್ಥಗಿತಗೊಂಡಿದೆಬಿ.ವಿನೋದ ಕುಮಾರ್, ನಿರ್ದೇಶಕ ಕೈಗಾ ಎನ್‌ಪಿಸಿಐಎಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.