ADVERTISEMENT

ಆಗಸ್ಟ್ 18ರಿಂದಲೇ ಬೆಳೆ ವಿಮೆ ವಿತರಣೆ ಆರಂಭ: ಸಚಿವ ಬಿ.ಸಿ.ಪಾಟೀಲ್

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 9:16 IST
Last Updated 17 ಆಗಸ್ಟ್ 2020, 9:16 IST
ಕೃಷಿ ವಿಜ್ಞಾನ ಕೆಂದ್ರದ ನೂತನ ಆಡಳಿತ ಭವನ ಕಟ್ಟಡ ಉದ್ಘಾಟಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್
ಕೃಷಿ ವಿಜ್ಞಾನ ಕೆಂದ್ರದ ನೂತನ ಆಡಳಿತ ಭವನ ಕಟ್ಟಡ ಉದ್ಘಾಟಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್    

ಶಿರಸಿ: ಕಾರಣಾಂತರದಿಂದ ವಿಳಂಬವಾಗಿದ್ದ 2019–20ನೇ ಸಾಲಿನ ಬೆಳೆ ವಿಮೆ ವಿತರಣೆ ಕಾರ್ಯ ಆಗಸ್ಟ್‌ 18 ರಿಂದಲೇ ರಾಜ್ಯಾದ್ಯಂತ ಆರಂಭವಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ನಗರದ ಕೃಷಿ ವಿಜ್ಞಾನ ಕೆಂದ್ರದ ನೂತನ ಆಡಳಿತ ಭವನ ಕಟ್ಟಡ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ಬೆಳೆ ಸಮೀಕ್ಷೆಯಲ್ಲಿ ಶೇ.40ರಷ್ಟು ವ್ಯತ್ಯಾಸವಾಗಿದ್ದ ಕಾರಣಕ್ಕೆ ಕಳೆದ ಸಾಲಿನ ಬೆಳೆ ವಿಮೆ ವಿತರಣೆಯಾಗಿರಲಿಲ್ಲ. ಈಗಾಗಲೇ ಸಮಸ್ಯೆ ಕುರಿತು ಕೇಂದ್ರ ಸರ್ಕಾರ ಮತ್ತು ವಿಮಾ ಕಂಪನಿಗಳ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸಿದ್ದೇವೆ. ಹೀಗಾಗಿ ಮುಂಗಾರು ಮತ್ತು ಹಿಂಗಾರು ಬೆಳೆ ವಿಮೆಯನ್ನು ಆಗಸ್ಟ್ 18ರಿಂದಲೇ ವಿತರಿಸುವ ಕಾರ್ಯ ನಡೆಯಲಿದೆ ಎಂದರು.

ರಾಜ್ಯದಲ್ಲೆಡೆ ಮಳೆ ಉತ್ತಮವಾಗುತ್ತಿದ್ದು ಕೃಷಿ ಚಟುವಟಿಕೆ ಹೆಚ್ಚಿದೆ. ಅಧಿಕಾರಿಗಳು ರೈತ ಸ್ನೇಹಿಯಾಗಬೇಕು. ಕೃಷಿ ವಿಜ್ಞಾನಿಗಳು ಅಧಿಕಾರಿಗಳು ಸಮನ್ವಯತೆಯೊಂದಿಗೆ ರೈತರಿಗೆ ನೆರವಾಗಬೇಕು. ಉದ್ಯೋಗಕ್ಕೆ ಯುವಕರು ಕೆಲಸಕ್ಕೆ ಹೋದವರು ಹಳ್ಳಿಗೆ ಮರಳಿದ್ದಾರೆ. ಅವರೆಲ್ಲ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಳ್ಳಿಯ ವೃದ್ಧಾಶ್ರಮ ವಾತಾವರಣ ಮರೆಯಾಗಿ, ಕೃಷಿ ಚಟುವಟಿಕೆಯ ವಾತಾವರಣ ಅಧಿಕವಾಗಿದೆ. ಯುವಕರು ಆಧುನಿಕ ಕೃಷಿ ಚಟುವಟಿಕೆಯತ್ತ ಹೊರಳುತ್ತಿದ್ದಾರೆ. ಅವರಿಗೆ ಕೃಷಿ ಚಟುವಟಿಕೆಯಲ್ಲಿ ಸ್ಥಿರವಾಗಲು ಇಲಾಖೆ ಮುಂದಾಗಬೇಕಿದೆ ಎಂದು ಹೇಳಿದರು.

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೃಷಿ ವಿಜ್ಞಾನ ಕೇಂದ್ರ ರೈತರಿಂದ ದೂರವಾಗಿಲ್ಲ. ರೈತರ ಕೃಷಿಗೆ ಆಧುನಿಕತೆಯ ಸ್ಪರ್ಶ ನೀಡಲು ನೆರವಾಗುತ್ತಿದೆ. ಯುವ ಪೀಳಿಗೆಗೆ ಕೃಷಿ ಚಟುವಟಿಕೆಗೆ ವೈಜ್ಞಾನಿಕತೆ ರೂಢಿಸಿಕೊಳ್ಳುವಂತೆ ಮಾಡಬೇಕು, ಅದರ ಜವಾಬ್ದಾರಿ ಕೃಷಿ ವಿಜ್ಞಾನ ಕೇಂದ್ರದ್ದು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ ಕೃಷಿಕರೇ ದೇಶ ಬದುಕಿಸುವವರು ಎಂದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಕೃಷಿ ವಿಶ್ವ ವಿದ್ಯಾಲಯದ ಕುಲಪತಿಡಾ.ಮಹಾದೇವ ಚೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT