ADVERTISEMENT

ಕಾರವಾರ: ವಾಣಿಜ್ಯ ಬಂದರು ವಿರೋಧಿಸಿ ಸಮುದ್ರದಲ್ಲಿ ಪ್ರತಿಭಟನೆ

ನಾಲ್ಕು ತಾಸಿಗೂ ಹೆಚ್ಚು ಹೊತ್ತು ಗುಂಪಾಗಿ ನಿಂತ ದೋಣಿಗಳು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 0:10 IST
Last Updated 13 ಮಾರ್ಚ್ 2025, 0:10 IST
ಅಂಕೋಲಾ ತಾಲ್ಲೂಕಿನ ಕೇಣಿಯಲ್ಲಿ ಗ್ರೀನ್‍ಫೀಲ್ಡ್ ಯೋಜನೆ ವಿರೋಧಿಸಿ ಬೇಲೆಕೇರಿ ಸಮೀಪ ಸಮುದ್ರದಲ್ಲಿ ಮೀನುಗಾರರು ನಾಡದೋಣಿ, ಪರ್ಸಿನ್ ದೋಣಿಗಳನ್ನು ಲಂಗರು ಹಾಕಿ ಪ್ರತಿಭಟಿಸಿದರು.
ಪ್ರಜಾವಾಣಿ ಚಿತ್ರಗಳು: ದಿಲೀಪ್ ರೇವಣಕರ್
ಅಂಕೋಲಾ ತಾಲ್ಲೂಕಿನ ಕೇಣಿಯಲ್ಲಿ ಗ್ರೀನ್‍ಫೀಲ್ಡ್ ಯೋಜನೆ ವಿರೋಧಿಸಿ ಬೇಲೆಕೇರಿ ಸಮೀಪ ಸಮುದ್ರದಲ್ಲಿ ಮೀನುಗಾರರು ನಾಡದೋಣಿ, ಪರ್ಸಿನ್ ದೋಣಿಗಳನ್ನು ಲಂಗರು ಹಾಕಿ ಪ್ರತಿಭಟಿಸಿದರು. ಪ್ರಜಾವಾಣಿ ಚಿತ್ರಗಳು: ದಿಲೀಪ್ ರೇವಣಕರ್   

ಕಾರವಾರ: ಅಂಕೋಲಾ ತಾಲ್ಲೂಕಿನ ಕೇಣಿಯಲ್ಲಿ ಗ್ರೀನ್‍ಫೀಲ್ಡ್ ವಾಣಿಜ್ಯ ಬಂದರು ನಿರ್ಮಾಣ ಯೋಜನೆ ವಿರೋಧಿಸಿ ಸತತ ಪ್ರತಿಭಟನೆಯಲ್ಲಿ ನಿರತರಾಗಿರುವ ಮೀನುಗಾರರು ಬುಧವಾರ ಸಮುದ್ರದಲ್ಲಿ ದೋಣಿಗಳಲ್ಲಿ ಗುಂಪುಗುಂಪಾಗಿ ಸಾಗಿ, ಪ್ರತಿಭಟನೆ ನಡೆಸಿದರು.

‘ಯೋಜನೆ ವಿರೋಧಿಸಿ ಪ್ರತಿಭಟಿಸುವ ಹಕ್ಕು ಕಸಿಯಲು ಉತ್ತರ ಕನ್ನಡ ಜಿಲ್ಲಾಡಳಿತ ಭಾವಿಕೇರಿ ಗ್ರಾಮ ಪಂಚಾಯಿತಿ ಮತ್ತು ಕೇಣಿ ಗ್ರಾಮದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಮೀನುಗಾರಿಕೆ ಚಟುವಟಿಕೆ ನಡೆಸಲು ಅಡ್ಡಿಪಡಿಸಿದೆ. ನೆಲದ ಮೇಲೆ ನಿಷೇಧಾಜ್ಞೆ ವಿಧಿಸಿದ್ದಕ್ಕೆ ಸಮುದ್ರದಲ್ಲಿ ಪ್ರತಿಭಟಿಸಿದ್ದೇವೆ’ ಎಂದು ಹೋರಾಟಗಾರರಾದ ಶ್ರೀಕಾಂತ ದುರ್ಗೇಕರ ಮತ್ತು ಹುವಾ ಖಂಡೇಕರ ಹೇಳಿದರು.

‘ಯೋಜನೆಯೊಂದನ್ನು ವಿರೋಧಿಸಿ ಸಮುದ್ರದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಿದ ಉದಾಹರಣೆ ರಾಜ್ಯದಲ್ಲಿ ಇಲ್ಲ. ಸರ್ಕಾರ ಈ ಪ್ರತಿಭಟನೆಯಿಂದಾದರೂ ಎಚ್ಚೆತ್ತು, ಮೀನುಗಾರರ ಸಂಕಷ್ಟ ಆಲಿಸಲಿ’ ಎಂದರು.

ADVERTISEMENT

ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಕೇಣಿ ಗ್ರಾಮದಿಂದ 3 ಕಿ.ಮೀ ದೂರದ ಬೇಲೆಕೇರಿ ಸಮೀಪ ಸಮುದ್ರದಲ್ಲಿ ಪ್ರತಿಭಟಿಸಿದರು. 40ಕ್ಕೂ ಹೆಚ್ಚು ಪರ್ಸಿನ್, ನೂರಾರು ನಾಡದೋಣಿಗಳಲ್ಲಿ ಸಾಗಿದ್ದ ಮೀನುಗಾರರು ಸಮುದ್ರದಲ್ಲಿ 4 ಗಂಟೆ ಲಂಗರು ಹಾಕಿದರು. ಇದಕ್ಕೆ ಮುನ್ನ ಬೇಲೆಕೇರಿಯ ಸಮುದ್ರ ತೀರದಲ್ಲಿ ಮಹಿಳೆಯರು ಮಾನವ ಸರಪಳಿ ರಚಿಸಿದರು.

‘ವಾಣಿಜ್ಯ ಬಂದರು ಯೋಜನೆ ಕೈಬಿಡಬೇಕು. ಸಮೀಕ್ಷೆ ಸ್ಥಗಿತಗೊಳಿಸಲು ಜೆಎಸ್‍ಡಬ್ಲ್ಯೂ ಕಂಪನಿಗೆ ಸೂಚಿಸಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಮೀನುಗಾರ ಸಂಘಟನೆಗಳ ಬೆಂಬಲ ಪಡೆದು ಪ್ರತಿಭಟನೆ ತೀವ್ರಗೊಳಿಸುತ್ತೇವೆ’ ಎಂದರು.

ಪ್ರತಿಭಟನಕಾರರ ಮನವೊಲಿಸಲು ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರು ದೋಣಿಯಲ್ಲಿ ಸಾಗಿ ಸಮುದ್ರದಲ್ಲೇ ಮನವಿಪತ್ರ ಸ್ವೀಕರಿಸಿದರು. ಬೇಲೆಕೇರಿ ವ್ಯಾಪ್ತಿಯಿಂದ ಮೀನುಗಾರರು ಹೊರಹೋಗದಂತೆ ಪೊಲೀಸರು ದೋಣಿಗಳಲ್ಲಿ ಕಾವಲು ಕಾದಿದ್ದರು.

ಕೇಣಿಯಲ್ಲಿ ಗ್ರೀನ್‍ಫೀಲ್ಡ್ ಬಂದರು ಸ್ಥಾಪಿಸುವ ಯೋಜನೆ ವಿರೋಧಿಸಿ ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಸಮೀಪ ಸಮುದ್ರದಲ್ಲಿ ನಡೆದ ಪ್ರತಿಭಟನೆಯಲ್ಲಿ ಪರ್ಸಿನ್ ದೋಣಿಗಳನ್ನು ಲಂಗರು ಹಾಕಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.