ADVERTISEMENT

PV Web Exclusive: ಹೊಸ ಬೆಳಕಿನ ನಿರೀಕ್ಷೆಯಲ್ಲಿ ‘ಹಳೆಕೋಟೆ’

ಕಾರವಾರ ತಾಲ್ಲೂಕಿನ ಮುಡಗೇರಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಐತಿಹಾಸಿಕ ತಾಣ

ಸದಾಶಿವ ಎಂ.ಎಸ್‌.
Published 9 ಡಿಸೆಂಬರ್ 2020, 10:12 IST
Last Updated 9 ಡಿಸೆಂಬರ್ 2020, 10:12 IST
ಹಳೆಕೋಟೆಯಲ್ಲಿರುವ ಬಾವಿ ಮತ್ತು ಅದಕ್ಕೆ ಹೊರಗಿನಿಂದ ಸಂಪರ್ಕ ಕಲ್ಪಿಸುವ ಸುರಂಗ
ಹಳೆಕೋಟೆಯಲ್ಲಿರುವ ಬಾವಿ ಮತ್ತು ಅದಕ್ಕೆ ಹೊರಗಿನಿಂದ ಸಂಪರ್ಕ ಕಲ್ಪಿಸುವ ಸುರಂಗ   
""
""

ಕಾರವಾರ: ಇದು ಅತ್ಯಂತ ಪುರಾತನ ನಿರ್ಮಾಣ. ಬಾವಿಗಳಿಂದ ಬಾವಿಗೆ ಸುರಂಗದ ಮೂಲಕ ಸಂಪರ್ಕವಿರುವ ಅಪರೂಪದ ತಾಣ. ಅಲ್ಲಲ್ಲಿ ಕೋಟೆಯ ಕುರುಹುಗಳೂ ಇವೆ. ಆದರೆ, ಯಾವ ಅರಸ, ಯಾವ ಕಾಲದಲ್ಲಿ ನಿರ್ಮಿಸಿದ್ದು ಎಂಬ ಮಾಹಿತಿಯೇ ಇಲ್ಲ!

ಕಾರವಾರ ತಾಲ್ಲೂಕಿನ ಮುಡಗೇರಿ ಹಳೆಕೋಟೆ (ಕೋಟೆವಾಡಾ) ಬಳಿಯಿರುವ ಈ ಪ್ರದೇಶ ಇಂದಿಗೂ ಇತಿಹಾಸ ಅಧ್ಯಯನಕಾರರ ಕುತೂಹಲದ ಕೇಂದ್ರವಾಗಿಯೇ ಉಳಿದಿದೆ. 15–16ನೇ ಶತಮಾನದಲ್ಲಿ ಈ ಭಾಗವನ್ನು ಆಳ್ವಿಕೆ ಮಾಡಿದ ಸೋಂದೆ ಅರಸರು ಇದನ್ನು ನಿರ್ಮಿಸಿದ್ದರು ಎಂಬುದು ಒಂದು ವಾದವಾದರೆ, ಶಿವಾಜಿ ಮಹಾರಾಜರು ಕಟ್ಟಿದ ಕೋಟೆಯಿದು ಎಂಬುದು ಮತ್ತೊಂದು ವಾದ.

ಸೋಂದೆ ಸಾಮ್ರಾಜ್ಯದ ಅರಸ ಒಂದನೇ ಸದಾಶಿವಲಿಂಗರಾಯ, ಕಾಳಿ ನದಿಯ ಸಮೀಪದಲ್ಲಿರುವ 200 ಅಡಿ ಎತ್ತರದ ಬೆಟ್ಟದ ಮೇಲೆ 1674ರಲ್ಲಿ ಕೋಟೆ ನಿರ್ಮಿಸಿದ್ದರು. ಬಳಿಕ ಅವರ ಪುತ್ರ ಬಸವಲಿಂಗರಾಜ ತಂದೆಯ ಸ್ಮರಣಾರ್ಥ ಕೋಟೆಗೆ ‘ಸದಾಶಿವಗಡ’ ಎಂದು ನಾಮಕರಣ ಮಾಡಿದ್ದರು. ಕೋಟೆಯು ಈಗಲೂ ಇದೇ ಹೆಸರಿನಿಂದ ಪ್ರಸಿದ್ಧವಾಗಿದೆ. ಅಲ್ಲದೇ ಮುಡಗೇರಿಯ ಕೋಟೆಗೂ ಸದಾಶಿವಗಡ ಕೋಟೆಯ ಮಾದರಿಯಲ್ಲೇ ಎರಡು ಪ್ರವೇಶ ದ್ವಾರಗಳಿದ್ದವು. ಈ ಹಿನ್ನೆಲೆಯಲ್ಲಿ ನೋಡಿದಾಗ ಮುಡಗೇರಿಯ ಕೋಟೆಯೂ ಅವರ ಅವಧಿಯಲ್ಲೇ ನಿರ್ಮಾಣವಾಗಿರಬಹುದು ಎನ್ನಲಾಗುತ್ತಿದೆ.

ADVERTISEMENT
ಹಳೆಕೋಟೆಯ ಕುರುಹು

ಶಿವಾಜಿ ಮಹಾರಾಜರ ಕಾಲದಲ್ಲಿ ಇದ್ದ ಮಾದರಿಯ ನಿರ್ಮಾಣಗಳೂ ಇಲ್ಲಿದ್ದವು. ಹಾಗಾಗಿ ಇದು ಅವರ ನಿರ್ಮಾಣವೆಂಬುದೇ ಸರಿ ಎನ್ನುವುದು ಮತ್ತೆ ಕೆಲವರ ಅನಿಸಿಕೆ. ಇದಲ್ಲದೇ ಈ ಇಬ್ಬರು ರಾಜರ ಸಮಕಾಲೀನರಾದ ಮತ್ತೊಬ್ಬರು ಯಾರೋ ಅರಸರು ಅಥವಾ ಸಾಮಂತ ರಾಜರು ಇದನ್ನು ನಿರ್ಮಿಸುವ ಸಾಧ್ಯತೆಯೂ ಇದೆ. ಈ ದಿಸೆಯಲ್ಲಿ ಸಂಶೋಧನೆಗಳಾದರೆ ಮಾತ್ರ ಕುತೂಹಲಕ್ಕೆ ತೆರೆ ಬೀಳಬಹುದು.

ಅರಸರ ಆಳ್ವಿಕೆಯ ಕಾಲದ ಅನೇಕ ಕುರುಹುಗಳು ಇಲ್ಲಿ ಇಂದಿಗೂ ಕಾಣಸಿಗುತ್ತವೆ. ಅಂದಿನ ದಿನಗಳಲ್ಲಿ ಶತ್ರುಗಳ ದಾಳಿಯಿಂದ ಪಾರಾಗಲು ಹಾಗೂ ಅವರ ಮೇಲೆ ಪ್ರತಿದಾಳಿ ಮಾಡಲು ಬಾವಿಯ ಮೂಲಕವೇ ಸುರಂಗ ನಿರ್ಮಿಸಲಾಗಿದೆ. ಈ ದಾರಿಯು ಸೈನಿಕರು ಗುಪ್ತವಾಗಿ ಸಾಗಲು ಹಾಗೂ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಬಳಕೆ ಮಾಡಿರಬಹುದು. ಅದೇರೀತಿ, ಬಾವಿಗಳಿಗೆ ನೀರು ಹರಿಸಲು ಮಾಡಿದ್ದ ಕಾಲುವೆಯೂ ಆಗಿರಬಹುದು ಎಂದೂ ಸ್ಥಳೀಯರು ಊಹಿಸುತ್ತಾರೆ.

ಬಾವಿಗಳ ಮಧ್ಯಭಾಗದಲ್ಲಿ, ಸುಮಾರು 10 ಅಡಿ ಆಳದಿಂದ ಸುರಂಗ ಕೊರೆಯಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಸುರಂಗವು ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಸದಾಶಿವಗಡದವರೆಗೂ ಸಾಗುತ್ತದೆಯಂತೆ. ಆದರೆ, ಅದಕ್ಕೆ ಸದ್ಯಕ್ಕೆ ಯಾವುದೇ ಪುರಾವೆಗಳಿಲ್ಲ. ಅದರ ಮತ್ತೊಂದು ತುದಿ ಈಗ ಎಲ್ಲಿದೆ ಎಂದು ತಿಳಿಯುತ್ತಿಲ್ಲ. ಕಾಲಕ್ರಮೇಣ ಅದು ಮುಚ್ಚಿ ಹೋಗಿರಬಹುದು.

ಸೈನಿಕರು ಬಳಕೆ ಮಾಡುತ್ತಿದ್ದ ಆಯುಧಗಳೂ ಕಾಡಿನ ಮಧ್ಯೆ ಹಲವು ವರ್ಷಗಳ ಹಿಂದೆ ಸ್ಥಳೀಯರಿಗೆ ಸಿಕ್ಕಿವೆ ಎಂದೂ ಹೇಳಲಾಗುತ್ತಿದೆ. ಈ ಕೋಟೆಯ ಪ್ರದೇಶದಲ್ಲಿ ಕೆಲವು ಕಲ್ಲಿನ ಕೆತ್ತನೆಗಳು ಇಂದಿಗೂ ತರಗೆಲೆಗಳ ನಡುವೆ ಅನಾಥವಾಗಿ ಬಿದ್ದಿವೆ. ಒಂದಾನೊಂದು ಕಾಲದಲ್ಲಿ ಮೆರೆದಿದ್ದ ಆಡಳಿತ ಕೇಂದ್ರವೊಂದರ ಕಥೆಯನ್ನು ಅವು ಹೇಳುತ್ತಿದ್ದು, ಇಲ್ಲಿನ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಲು ಆಹ್ವಾನಿಸುವಂತೆ ಭಾಸವಾಗುತ್ತಿದೆ.

ಈಗಾಗಲೇ ಪ್ರಸಿದ್ಧವಾಗಿರುವ ಸದಾಶಿವಗಡ ಕೋಟೆಯಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಹಾಗೂ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಸರ್ಕಾರವು ₹ 3 ಕೋಟಿ ಬಿಡುಗಡೆ ಮಾಡಿದೆ. ಆದರೆ, ಅದರ ಸಮೀಪದಲ್ಲಿರುವ ಐತಿಹಾಸಿಕ ತಾಣವೊಂದರ ಬಗ್ಗೆ ಅಧ್ಯಯನ ನಡೆಸಲು ಯಾರೂ ಮನಸ್ಸು ಮಾಡುತ್ತಿಲ್ಲ ಎಂಬ ಕೊರಗು ಇತಿಹಾಸ ಪ್ರಿಯರದ್ದು.

‘ಹಳೆಕೋಟೆಯಲ್ಲಿರುವ ಬಾವಿಯ ಮೂಲಕ ಸದಾಶಿವಗಡದ ಕೋಟೆಗೆ ಸಾಗಬಹುದಿತ್ತು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಇಲ್ಲಿರುವ ಹಲವಾರು ರಹಸ್ಯ ದಾರಿಗಳನ್ನು ಶತ್ರು ಸೈನ್ಯವನ್ನು ಹಾಗೂ ನಂತರ ಬ್ರಿಟಿಷರನ್ನು ಹಿಮ್ಮೆಟ್ಟಿಸಲು ಬಳಕೆ ಮಾಡಲಾಗುತ್ತಿತ್ತಂತೆ. ಈ ಬಗ್ಗೆ ಇಲ್ಲಿ ಸಂಶೋಧನೆ ನಡೆಸಿ, ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸಬೇಕು’ ಎಂಬುದು ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಂದ್ರ ಗಾಂವಕರ ಅವರ ಒತ್ತಾಯವಾಗಿದೆ.

‘ಈ ಪ್ರದೇಶದಲ್ಲಿ ಉತ್ಖನನ ಮಾಡಿ, ಸಮಗ್ರ ಅಭಿವೃದ್ಧಿಗೆ ಪುರಾತತ್ವ ಇಲಾಖೆ ಗಮನ ಹರಿಸಬೇಕು. ಇಲ್ಲಿನ ಭವ್ಯ ಇತಿಹಾಸದ ಬಗ್ಗೆ ಜಗತ್ತಿಗೇ ಪರಿಚಯವಾಗಬೇಕು’ ಎಂಬುದು ಮುಡಗೇರಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಸಾಯಿನಾಥ ವಿಶ್ರಾಮ ನಾಯ್ಕ ಅವರ ಆಗ್ರಹವಾಗಿದೆ.

ಕಾಡಿನ ಮಧ್ಯೆ ಇರುವ ತಾಣವಾಗಿರುವ ಕಾರಣ ಇದು ಪ್ರವಾಸಿ ತಾಣವಾಗಲೂ ಪ್ರಶಸ್ತವಾಗಿದೆ. ಇಡೀ ಪ್ರದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡಿದರೆ ಇಲ್ಲಿನ ಐತಿಹಾಸಿಕ ಮಹತ್ವದ ಬಗ್ಗೆ ತಿಳಿದುಕೊಳ್ಳಲು ಸಾಧ್ಯ ಎಂಬುದು ಹಲವರ ಅಭಿಮತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.