ADVERTISEMENT

ಬಸ್‌ನಲ್ಲಿ ಗಂಡಸರಿಗೆ ಜಾಗ ಸಿಕ್ತಿಲ್ಲ: ‘ಶಕ್ತಿ’ ಯೋಜನೆ ಕುರಿತು ದೇಶಪಾಂಡೆ ಅಪಸ್ವರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 20:19 IST
Last Updated 7 ಫೆಬ್ರುವರಿ 2026, 20:19 IST
ಆರ್.ವಿ.ದೇಶಪಾಂಡೆ
ಆರ್.ವಿ.ದೇಶಪಾಂಡೆ   

ದಾಂಡೇಲಿ (ಉತ್ತರ ಕನ್ನಡ ಜಿಲ್ಲೆ): ‘ಸಿದ್ದರಾಮಯ್ಯ ಶಕ್ತಿ ಯೋಜನೆ ಜಾರಿಗೆ ತಂದಿದ್ದರಿಂದ ಮಹಿಳೆಯರೇ ಬಸ್‌ನಲ್ಲಿ ಹೆಚ್ಚು ಇರುತ್ತಾರೆ. ಗಂಡು ಮಕ್ಕಳಿಗೆ ಬಸ್‍ನಲ್ಲಿ ಜಾಗ ಸಿಗದಂತಾಗಿದೆ’ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಆರ್.ವಿ.ದೇಶಪಾಂಡೆ ಶನಿವಾರ ಹೇಳಿದರು. 

ಇಲ್ಲಿ ದಾಂಡೇಲಿ–ಅಳ್ನಾವರ ಡೆಮು ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು, ‘ಶಕ್ತಿ ಯೋಜನೆ’ ವಿರುದ್ಧ ಬಿಜೆಪಿ ನಾಯಕರ ಎದುರೇ ಅಪಸ್ವರ ಎತ್ತಿದ್ದಾರೆ.

ದೇಶಪಾಂಡೆ ಅವರ ಮಾತನ್ನು ಭಾಷಣದ ಮಧ್ಯೆ ಪ್ರಸ್ತಾಪಿಸಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೂ, ‘ಶಕ್ತಿ ಯೋಜನೆ ಬಗ್ಗೆ ಕಾಂಗ್ರೆಸ್ ನಾಯಕರೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ’ ಎಂದರು.

ADVERTISEMENT

‘ಇದರಿಂದ ರಾಜ್ಯ ಎಂತಹ ಅನಾಹುತಕ್ಕೆ ಸಿಲುಕಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸೋಮಣ್ಣ ಅವರು ಪ್ರತಿಕ್ರಿಯಿಸಿದರು. 

‘ಅಳ್ನಾವರದಿಂದ ಬೆಳಗಾವಿ, ಹುಬ್ಬಳ್ಳಿಗೆ ರೈಲು ಸಂಪರ್ಕ ಕಲ್ಪಿಸಿದರೆ ದಾಂಡೇಲಿ ಭಾಗದ ಜನರಿಗೆ ಅನುಕೂಲ ಆಗಲಿದೆ. ರೈಲು ಸಂಪರ್ಕ ಹೆಚ್ಚಿದರೆ ಹೆಚ್ಚು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ’ ಎಂದರು.

‘ಸಚಿವ ವಿ.ಸೋಮಣ್ಣ ಪ್ರಯತ್ನದ ಫಲವಾಗಿ ದಾಂಡೇಲಿ–ಅಳ್ನಾವರ ರೈಲು ಪುನರಾರಂಭವಾಗಿದೆ. ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡಿದಾಗ ಪ್ರತಿಪಕ್ಷದವರಿದ್ದರೂ ಹೊಗಳುತ್ತೇನೆ. ದ್ವೇಷ ಮಾಡುವ ಗುಣ ಬೆಳೆಸಿಕೊಂಡಿಲ್ಲ. ಈ ಕಾರಣದಿಂದಲೇ 9 ಬಾರಿ ಶಾಸಕನಾಗಿದ್ದೇನೆ’ ಎಂದರು.

‘ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆಗೆ ಶೀಘ್ರ ಅನುಮತಿ'

‘ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣಕ್ಕೆ ₹17 ಸಾವಿರ ಕೋಟಿ ವೆಚ್ಚದಲ್ಲಿ ಕೈಗೊಳ್ಳುವ ಕಾಮಗಾರಿಗೆ ಶೀಘ್ರವೇ ಅನುಮತಿ ಸಿಗಲಿದೆ. ಅಳ್ನಾವರ-ದಾಂಡೇಲಿ ರೈಲನ್ನು ಹುಬ್ಬಳ್ಳಿವರೆಗೆ ವಿಸ್ತರಿಸಲಾಗುವುದು’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ದಾಂಡೇಲಿ ರೈಲು ನಿಲ್ದಾಣದಲ್ಲಿ ಅಳ್ನಾವರ–ದಾಂಡೇಲಿ (26 ಕಿ.ಮೀ) ಪ್ರಯಾಣಿಕರ ರೈಲು ಮರು ಸಂಚಾರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.