ADVERTISEMENT

ಅಪಾಯಕ್ಕೆ ಸಿಲುಕಿದ ರ‍್ಯಾಫ್ಟಿಂಗ್ ಬೋಟ್: ಪ್ರವಾಸಿಗರ ರಕ್ಷಣೆ

ಸುರಕ್ಷತಾ ಕ್ರಮ ಅನುಸರಿಸದೆ ಚಟುವಟಿಕೆ–ಆರೋಪ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 21:26 IST
Last Updated 15 ಏಪ್ರಿಲ್ 2022, 21:26 IST
ನೀರಿನ ರಭಸಕ್ಕೆ ಬಂಡೆಕಲ್ಲುಗಳಿಗೆ ಬಡಿದು ಅಪಾಯಕ್ಕೆ ಸಿಲುಕಿದ್ದ ರ‍್ಯಾಫ್ಟಿಂಗ್ ಬೋಟ್‍ನಲ್ಲಿದ್ದ ಪ್ರವಾಸಿಗರು ಆತಂಕಗೊಂಡಿದ್ದರು.
ನೀರಿನ ರಭಸಕ್ಕೆ ಬಂಡೆಕಲ್ಲುಗಳಿಗೆ ಬಡಿದು ಅಪಾಯಕ್ಕೆ ಸಿಲುಕಿದ್ದ ರ‍್ಯಾಫ್ಟಿಂಗ್ ಬೋಟ್‍ನಲ್ಲಿದ್ದ ಪ್ರವಾಸಿಗರು ಆತಂಕಗೊಂಡಿದ್ದರು.   

ಜೋಯಿಡಾ (ಉತ್ತರ ಕನ್ನಡ): ತಾಲ್ಲೂಕಿನ ಗಣೇಶಗುಡಿ ಸಮೀಪ ಕಾಳಿನದಿಯಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ಕರೆದೊಯ್ಯುತ್ತಿದ್ದ ರಿವರ್ ರ‍್ಯಾಫ್ಟಿಂಗ್ ಬೋಟ್ ಗುರುವಾರ ಸಂಜೆ ಅಪಾಯಕ್ಕೆ ಸಿಲುಕಿದ್ದು, ಅದರಲ್ಲಿದ್ದ ಮಕ್ಕಳೂ ಸೇರಿದಂತೆ 12 ಮಂದಿ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಹೆಚ್ಚು ಜನರನ್ನು ಕರೆದೊಯ್ಯುತ್ತಿದ್ದ ಬೋಟ್ ಅಕ್ಕಪಕ್ಕದಲ್ಲಿರುವ ಬಂಡೆಗಳಿಗೆ ಅಪ್ಪಳಿಸುತ್ತ ಸಾಗಿದೆ. ನೀರಿನ ಸುಳಿಗೆ ಸಿಲುಕುತ್ತಿದ್ದ ಬೋಟ್‍ಅನ್ನು ಸಮೀಪದಲ್ಲಿ ಇನ್ನೊಂದು ಬೋಟ್‍ನಲ್ಲಿದ್ದ ಪ್ರವಾಸಿಗರು ರಕ್ಷಿಸಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಪ್ರವಾಸಿಗರನ್ನು ರಕ್ಷಿಸುತ್ತಿರುವ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಸಣ್ಣ ರ‍್ಯಾಫ್ಟಿಂಗ್ ಬೋಟ್‍ನಲ್ಲಿ ಗರಿಷ್ಠ 6 ರಿಂದ 8 ಜನರನ್ನು ಕರೆದೊಯ್ಯಬಹುದಾಗಿದೆ. ಆದರೆ 12 ಜನರನ್ನು ಬೋಟ್‍ನಲ್ಲಿ ಕರೆದೊಯ್ಯಲಾಗಿತ್ತು. ಇದೇ ಅವಘಡಕ್ಕೆ ಕಾರಣ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಘಟನೆ ಹಿನ್ನೆಲೆಯಲ್ಲಿ ಜೋಯಿಡಾ ಸಿಪಿಐ ದಯಾನಂದ ಶೇಗುಣಸಿ ಶುಕ್ರವಾರ ಜಲಸಾಹಸ ಕ್ರೀಡೆ ಆಯೋಜಕರ ಸಭೆ ನಡೆಸಿದ್ದು ಸುರಕ್ಷತಾ ಕ್ರಮ ಅನುಸರಿಸುವಂತೆ ಸೂಚಿಸಿದ್ದಾರೆ. ಪ್ರತಿನಿತ್ಯ ಇಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುವುದು ಎಂದಿದ್ದಾರೆ.

ಸುರಕ್ಷತೆ ಕ್ರಮಕ್ಕೆ ಆದ್ಯತೆ ನೀಡದ ಆರೋಪ:ಸೂಪಾ ಅಣೆಕಟ್ಟೆಯ ಕೆಳಭಾಗದಿಂದ ದಾಂಡೇಲಿಯವರೆಗೆ ಎಂಟಕ್ಕೂ ಹೆಚ್ಚು ಸಂಸ್ಥೆಗಳು ರಿವರ್ ರ‍್ಯಾಫ್ಟಿಂಗ್, ಕಯಾಕಿಂಗ್ ಸೇರಿದಂತೆ ಜಲಸಾಹಸ ಕ್ರೀಡೆ ನಡೆಸುತ್ತಿವೆ. ಈ ಪೈಕಿ ಕೆಲವರು ಸುರಕ್ಷತೆಗೆ ಆದ್ಯತೆ ನೀಡುತ್ತಿಲ್ಲ ಎಂಬುದು ಪ್ರವಾಸಿಗರ ಆರೋಪ.

ರ‍್ಯಾಫ್ಟಿಂಗ್ ನಡೆಸಲು ಅನುಕೂಲವಾಗುವಂತೆ ಸೂಪಾ ಅಣೆಕಟ್ಟೆಯಿಂದ ಹೆಚ್ಚು ನೀರು ಬಿಡಲಾಗುತ್ತಿದೆ. ಇದಕ್ಕೆ ಜಲಸಾಹಸ ಕ್ರೀಡೆ ನಡೆಸುವ ಸಂಸ್ಥೆ ಮತ್ತು ಮತ್ತಿ ಕೆಲ ಕೆಪಿಸಿ ಅಧಿಕಾರಿಗಳ ನಡುವೆ ಒಳಒಪ್ಪಂದವೂ ಇದೆ ಎಂಬುದು ಸ್ಥಳೀಯರ ಆರೋಪ.

ಇದನ್ನು ಅಲ್ಲಗಳೆದಿರುವ ಕೆಪಿಸಿ ಮುಖ್ಯ ಎಂಜಿನಿಯರ್ ನಿಂಗಣ್ಣ, ‘ಸೂಪಾ ಅಣೆಕಟ್ಟೆಯಿಂದ ವಿದ್ಯುತ್ ಉತ್ಪಾದನೆಗೆ ಅಗತ್ಯವಿದ್ದಷ್ಟೆ ನೀರು ಬಿಡಲಾಗುತ್ತಿದೆ. ಅನಗತ್ಯವಾಗಿ ನೀರು ಬಿಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಸುರಕ್ಷತಾ ಕ್ರಮ ಅನುಸರಿಸಿ ರಿವರ್ ರ‍್ಯಾಫ್ಟಿಂಗ್ ಚಟುವಟಿಕೆ ನಡೆಸುತ್ತಿದ್ದೇವೆ. ಇದೇ ಕಾರಣಕ್ಕೆ ಎರಡು ವರ್ಷಗಳಿಂದ ಯಾವುದೇ ಅವಘಡ ಸಂಭವಿಸಿಲ್ಲ. ಸಣ್ಣಪುಟ್ಟ ದೋಷಗಳನ್ನು ತಿದ್ದಿಕೊಳ್ಳಲಾಗುವುದು’ ಎಂದು ಸೂಪಾ ಅಡ್ವೆಂಚರ್ ಸ್ಪೋರ್ಟ್ಸ್ ಪ್ರಮುಖ ಜಿಗ್ನೇಶ್ ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯೆ ಪಡೆಯಲು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಲು ‘ಪ್ರಜಾವಾಣಿ’ ಪ್ರಯತ್ನಿಸಿದರೂ, ಅವರು ಲಭ್ಯರಾಗಲಿಲ್ಲ.

-----------

ಈ ಅವಘಡ ಗಮನಕ್ಕೆ ಬಂದಿದೆ. ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸಿ, ಆಯೋಜಕರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ.

ವಿನೋದ್ ಎಸ್.ಕೆ. ಎಸ್ಐ, ರಾಮನಗರ, ಜೋಯಿಡಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.