ADVERTISEMENT

ಕಾರವಾರ| ರೈಲ್ವೆ ಯೋಜನೆಗೆ ₹21 ಸಾವಿರ ಕೋಟಿ: ಕೇಂದ್ರ ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 5:07 IST
Last Updated 7 ಡಿಸೆಂಬರ್ 2025, 5:07 IST
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಕಾರವಾರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರೊಂದಿಗೆ ಚರ್ಚಿಸಿದರು 
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಕಾರವಾರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರೊಂದಿಗೆ ಚರ್ಚಿಸಿದರು    

ಕಾರವಾರ: ‘ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆಗೆ ಕೆಲವೇ ತಿಂಗಳಲ್ಲಿ ವನ್ಯಜೀವಿ ಮಂಡಳಿ ಅನುಮೋದನೆ ಸಿಗುವ ವಿಶ್ವಾಸವಿದೆ. ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ಸಂಪರ್ಕಕ್ಕೆ ರೈಲ್ವೆ ಮಂಡಳಿ ಅನುಮೋದಿಸಿದೆ’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಇಲ್ಲಿನ ಶಿರವಾಡ ರೈಲು ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಮಲೆನಾಡು ಮತ್ತು ಬಯಲುಸೀಮೆಯನ್ನು ಜೋಡಿಸುವ ಉದ್ದೇಶದಿಂದ ತಾಳಗುಪ್ಪ-ಶಿರಸಿ-ಹುಬ್ಬಳಿ 158 ಕಿ.ಮೀ ಉದ್ದದ ಹೊಸ ಮಾರ್ಗಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆಯಾಗಬೇಕಿದೆ. ಈ ಯೋಜನೆ ಮತ್ತು ತಾಳಗುಪ್ಪ–ಹೊನ್ನಾವರ ಹೊಸ ಮಾರ್ಗಕ್ಕೆ ಸೇರಿ ₹21 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ’ ಎಂದರು.

ADVERTISEMENT

‘ಭಟ್ಕಳ, ಮುರುಡೇಶ್ವರ, ಗೋಕರ್ಣ, ಮಿರ್ಜಾನ್, ಹೊನ್ನಾವರ ರೈಲ್ವೆ ನಿಲ್ದಾಣಗಳ ಆಧುನೀಕರಣ ಕಾಮಗಾರಿ ಪ್ರಾರಂಭವಾಗಿದೆ. ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿ ಸುಧಾರಿತ ನಿಲ್ದಾಣ ಉದ್ಘಾಟಿಸಲಾಗುವುದು’ ಎಂದರು.

‘ಕೊಂಕಣ ರೈಲ್ವೆ ನಿಗಮವನ್ನು ರೈಲ್ವೆ ಇಲಾಖೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಚರ್ಚೆಯ ಹಂತದಲ್ಲಿದೆ. ಈ ಹಿಂದೆ ಕೊಂಕಣ ರೈಲ್ವೆ ನಿಗಮ ಹಸ್ತಾಂತರಕ್ಕೆ ಒತ್ತಾಯಿಸುತ್ತಿದ್ದ ರಾಜ್ಯಗಳು, ನಿಗಮ ಸುಧಾರಿಸಿದ ಬಳಿಕ ವಿಲೀನಕ್ಕೆ ಒಪ್ಪಿಗೆ ಸೂಚಿಸಲು ಹಿಂದೇಟು ಹಾಕುತ್ತಿವೆ’ ಎಂದರು.

ಕೊಂಕಣ ರೈಲ್ವೆಯ ಪ್ರಾದೇಶಿಕ ವ್ಯವಸ್ಥಾಪಕಿ ಆಶಾ ಶೆಟ್ಟಿ, ಮುಖ್ಯ ಎಂಜಿನಿಯರ್ ಪ್ರಕಾಶ್, ಹಿರಿಯ ಪ್ರಾದೇಶಿಕ ಸಂಚಾರ ವ್ಯವಸ್ಥಾಪಕ ದಿಲೀಪ್ ಭಟ್, ಹಿರಿಯ ಎಂಜಿನಿಯರ್ ಉದಯ ಭಾಸ್ಕರ್, ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ, ಹಿರಿಯ ಪ್ರಾದೇಶಿಕ ಆರ್ಥಿಕ ಸಲಹೆಗಾರ ಪ್ರದೀಪ್ ಬಾಳಿಗ, ಇತರರು ಪಾಲ್ಗೊಂಡಿದ್ದರು.

ಪಶ್ಚಿಮ ಘಟ್ಟಕ್ಕೆ ಹಾನಿಯಾಗದು

‘ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆ ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದೆ. ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೈಗೊಂಡಿದ್ದ ಯೋಜನೆಯನ್ನು ನರೇಂದ್ರ ಮೋದಿ ಪೂರ್ಣಗೊಳಿಸಲಿದ್ದಾರೆ. ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಹಾನಿ ಆಗದು. ಪರಿಸರವಾದಿಗಳು ಯೋಜನೆಗೆ ಅಡ್ಡಿಪಡಿಸುವ ಕೆಲಸ ನಿಲ್ಲಿಸಬೇಕು’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ‘ಯೋಜನೆಗೆ 2530 ಎಕರೆ ಜಾಗದ ಅಗತ್ಯವಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಿಂದಲೇ ರೈಲ್ವೆ ಮಾರ್ಗ ನಿರ್ಮಿಸಲಾಗುವುದು. ಪರಿಸರಕ್ಕೆ ಉಂಟಾಗುವ ಹಾನಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.