ಕಾರವಾರ: ಕಾಂತಾರ–1 ಚಿತ್ರ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನಗೊಳ್ಳುತ್ತಿರುವ ನಡುವೆಯೇ ರಿಷಬ್ ಶೆಟ್ಟಿ ತಾಲ್ಲೂಕಿನ ಸದಾಶಿವಗಡದ ಶಿವಾಜಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣಕ್ಕೆ ಬಂದಿದ್ದರು!
ನಿಜವಾಗಿ ನಟ ಬರದಿದ್ದರೂ ಅವರಂತೆ ತದ್ರೂಪು ಹೋಲುವ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದ ಕಲಾವಿದರು ಪ್ರೇಕ್ಷಕರನ್ನು ನಿಬ್ಬೆರಗುಗೊಳಿಸಿದ್ದರು.
ವಿಜಯ ದಶಮಿ ಅಂಗವಾಗಿ ಶಿವಾಜಿ ಶಿಕ್ಷಣ ಸಂಸ್ಥೆಯು ಗುರುವಾರ ಹಮ್ಮಿಕೊಂಡಿದ್ದ ರಂಗೋಲಿ ಪ್ರದರ್ಶನದಲ್ಲಿ ಹಲವು ರಂಗೋಲಿಗಳು ಪ್ರೇಕ್ಷಕರನ್ನು ಸೆಳೆದವು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಛತ್ರಪತಿ ಶಿವಾಜಿ ಸೇರಿದಂತೆ ಹಲವು ರಾಷ್ಟ್ರನಾಯಕರ ಚಿತ್ರಗಳು, ದೇವತೆಗಳ ಚಿತ್ರಗಳು ಅತ್ಯಾಕರ್ಷಕವಾಗಿ ಮೂಡಿಬಂದಿದ್ದವು. ಪುಟ್ಟ ಮಗುವಿನ ಮುದ್ದು ಮುಖ ರಂಗೋಲಿಯಲ್ಲಿ ಮೂಡಿಬಂದಿದ್ದು ನೋಡುಗರನ್ನು ಮಂತ್ರಮುಗ್ಧವಾಗಿಸಿತ್ತು.
ನವರಾತ್ರಿ ವೇಳೆ ಕಾಲೇಜಿನಲ್ಲಿ ಸರಸ್ವತಿ ಪೂಜೆ ಆಯೋಜಿಸಲಾಗಿದ್ದು, ಕೊನೆಯ ದಿನ ರಂಗೋಲಿ ಸ್ಪರ್ಧೆ ಮತ್ತು ಪ್ರದರ್ಶನ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳು, ಸ್ಥಳೀಯ ಕಲಾವಿದರು ಸೇರಿದಂತೆ 80ಕ್ಕೂ ಹೆಚ್ಚು ಜನರು ರಂಗೋಲಿ ಬಿಡಿಸಿದ್ದರು. ಸತತ 73 ವರ್ಷಗಳಿಂದ ರಂಗೋಲಿ ಪ್ರದರ್ಶನ ನಡೆಯುತ್ತ ಬಂದಿದೆ ಎಂದು ಕಾಲೇಜಿನ ಸಿಬ್ಬಂದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.