ADVERTISEMENT

Karnataka Cabinet: ಸಚಿವ ಗಾದಿ ಏರಲು ಆರ್.ವಿ.ದೇಶಪಾಂಡೆ ಯತ್ನ?

ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಗದ ‘ಅಧಿಕಾರ’: ನಾಯಕತ್ವದ ವಿರುದ್ಧ ಅಸಮಾಧಾನ

ಗಣಪತಿ ಹೆಗಡೆ
Published 11 ಅಕ್ಟೋಬರ್ 2025, 5:29 IST
Last Updated 11 ಅಕ್ಟೋಬರ್ 2025, 5:29 IST
<div class="paragraphs"><p>ಆರ್.ವಿ.ದೇಶಪಾಂಡೆ</p></div>

ಆರ್.ವಿ.ದೇಶಪಾಂಡೆ

   

ಕಾರವಾರ: ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಯಾಗಬಹುದು ಎಂಬ ವದಂತಿಯ ನಡುವೆಯೇ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಸಚಿವ ಗಾದಿಗೆ ಏರಲು ಯತ್ನಿಸುತ್ತಿದ್ದಾರೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಆರಂಭಗೊಂಡಿದೆ.

ಹಳಿಯಾಳ ಕ್ಷೇತ್ರವನ್ನು 9 ಬಾರಿ ವಿಧಾನಸಭೆಯಲ್ಲಿ ಪ್ರತಿನಿಧಿಸಿರುವ ದೇಶಪಾಂಡೆ, ಕಾಂಗ್ರೆಸ್ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದರೂ ಸಚಿವ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಭಟ್ಕಳ ಕ್ಷೇತ್ರದಿಂದ ಎರಡನೇ ಬಾರಿ ಶಾಸಕರಾದ ಮಂಕಾಳ ವೈದ್ಯ ಪಾಲಿಗೆ ಹಾಲಿ ಸರ್ಕಾರದಲ್ಲಿ ಅದೃಷ್ಟ ಖುಲಾಯಿಸಿತ್ತು.

ADVERTISEMENT

ಹಿರಿಯ ಶಾಸಕರಾದರೂ ಸಚಿವ ಸ್ಥಾನ ಸಿಗಲಿಲ್ಲ ಎಂಬ ಅತೃಪ್ತಿಯ ನಡುವೆಯೇ ದೇಶಪಾಂಡೆ ಅವರಿಗೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಈ ಮೂಲಕ ಅವರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ ಎಂಬ ಚರ್ಚೆಗೆ ಇದು ಗ್ರಾಸವಾಗಿತ್ತು.

‘ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡ ದೇಶಪಾಂಡೆ ರಾಜ್ಯದ ಹಿರಿಯ ಶಾಸಕರಲ್ಲಿ ಒಬ್ಬರು. ಅವರನ್ನು ಸಚಿವ ಸಂಪುಟದಿಂದ ಹೊರಗಿಡಲು ಪಕ್ಷದ ಕೆಲ ನಾಯಕರೊಂದಿಗೆ ಅವರು ಸೃಷ್ಟಿಸಿಕೊಂಡ ರಾಜಕೀಯ ವೈಮನಸ್ಸು ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ. ಆದರೆ, ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರ ನಡೆಸುತ್ತಿದ್ದರೂ ಸಚಿವ ಸ್ಥಾನ ಸಿಗಲಿಲ್ಲ ಎಂಬ ಬೇಸರ ಒಳಗೊಳಗೆ ದೇಶಪಾಂಡೆ ಅವರನ್ನು ಕಾಡುತ್ತಿದೆ. ಆದರೆ, ಹೊರಗೆಲ್ಲೂ ಅದನ್ನು ಅವರು ತೋರಿಸಿಕೊಳ್ಳುತ್ತಿಲ್ಲ’ ಎಂದು ಶಾಸಕ ದೇಶಪಾಂಡೆ ಆಪ್ತರೊಬ್ಬರು ಹೇಳಿದರು.

‘ಜಿಲ್ಲೆಯಲ್ಲಿ ಪಕ್ಷದ ನಾಲ್ವರು ಶಾಸಕರಿದ್ದಾರೆ. ಪ್ರಭಾವಿ ನಿಗಮ ಮಂಡಳಿಗಳಲ್ಲಿ ಶಾಸಕರಿಗಾಗಲಿ, ಪಕ್ಷದ ಹಿರಿಯ ಕಾರ್ಯಕರ್ತರಿಗಾಗಲಿ ಸ್ಥಾನ ಸಿಕ್ಕಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕೂಡ ಈ ನಿಟ್ಟಿನಲ್ಲಿ ಒತ್ತಡ ಹೇರುತ್ತಿಲ್ಲ. ಪಕ್ಷ ಸಂಘಟನೆ ವಿಚಾರದಲ್ಲಿ ಅವರ ಕಾರ್ಯವೈಖರಿ ಬಗ್ಗೆ ಕಾರ್ಯಕರ್ತರ ವಲಯದಲ್ಲಿಯೂ ಅಸಮಾಧಾನವಿದೆ. ಇವೆಲ್ಲವೂ ಪಕ್ಷದ ವರಿಷ್ಠರ ಗಮನಕ್ಕೂ ಬಂದಿದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಹೇಳಿದರು.

ಮಂಕಾಳ ವೈದ್ಯ

ಸಚಿವ ಸ್ಥಾನಕ್ಕೆ ಕೋಕ್?

‘ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆ ಸಚಿವರಾಗಿರುವ ಮಂಕಾಳ ವೈದ್ಯ ಜಿಲ್ಲೆಯ ಆಡಳಿತವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವಲ್ಲಿ ಸಫಲತೆ ಕಾಣಿಸುತ್ತಿಲ್ಲ. ಕ್ಷೇತ್ರಕ್ಕೆ ಸೀಮಿತರಾದವರಂತೆ ವರ್ತಿಸುತ್ತಿದ್ದಾರೆ. ಶಾಸಕರನ್ನೂ ವಿಶ್ವಾಸಕ್ಕೆ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ. ಅಧಿಕಾರಿಗಳ ವರ್ಗಾವಣೆ ಕಾಮಗಾರಿಗಳ ಹಂಚಿಕೆ ವಿಚಾರದಲ್ಲಿ ಕೆಲ ಶಾಸಕರೊಂದಿಗೆ ಅವರಿಗೆ ಮನಸ್ತಾಪವಿದೆ. ಹೀಗಾಗಿ ಅವರ ಬದಲು ಆರ್.ವಿ.ದೇಶಪಾಂಡೆ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬಹುದು’ ಎಂಬುದು ಕಾಂಗ್ರೆಸ್‌ನ ಕೆಲ ಮುಖಂಡರು ವಿಶ್ಲೇಷಿಸುತ್ತಿದ್ದಾರೆ. ‘ಮೀನುಗಾರ ಸಮುದಾಯಕ್ಕೆ ಸೇರಿದ ರಾಜ್ಯದ ಏಕೈಕ ಸಚಿವರಾಗಿರುವ ಕಾರಣಕ್ಕೆ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಕಡಿಮೆ. ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತರಾಗಿರುವ ಕಾರಣದಿಂದ ಅವರು ಅಧಿಕಾರ ಉಳಿಸಿಕೊಳ್ಳಬಹುದು’ ಎನ್ನುತ್ತಾರೆ ಸಚಿವರ ಆಪ್ತರು.

ನಿಗಮ ಮಂಡಳಿಗಳಲ್ಲಿ ಸ್ಥಾನ ಪಡೆಯಲು ಅರ್ಹರಾದ ಜಿಲ್ಲೆಯ ಹಿರಿಯ ಕಾರ್ಯಕರ್ತರಿಗೆ ಕೆಲ ತಿಂಗಳಲ್ಲೇ ಮೂರನೆ ಹಂತದ ಅಧಿಕಾರ ಹಂಚಿಕೆಯಲ್ಲಿ ಅವಕಾಶ ಸಿಗುವ ವಿಶ್ವಾಸವಿದೆ.
–ಸಾಯಿ ಗಾಂವಕರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.