ADVERTISEMENT

ಬಿಸಿಲ ಝಳಕ್ಕೆ ಸೊರಗಿದ ಶಾಲ್ಮಲೆ, ಸಹಸ್ರಲಿಂಗದಲ್ಲಿ ನೀರಿನ ಹರಿವು ಇಳಿಮುಖ

ಪ್ರವಾಸಿಗರಿಗೆ ದುಬಾರಿಯಾದ ವಾಹನ ನಿಲುಗಡೆ ಶುಲ್ಕ

ಸಂಧ್ಯಾ ಹೆಗಡೆ
Published 6 ಮೇ 2019, 20:18 IST
Last Updated 6 ಮೇ 2019, 20:18 IST
ಶಿರಸಿ ತಾಲ್ಲೂಕಿನ ಸಹಸ್ರಲಿಂಗದಲ್ಲಿ ಶಾಲ್ಮಲಾ ನದಿ ಸೊರಗಿರುವುದರಿಂದ ಕಪ್ಪು ಬಂಡೆಗಳೇ ಗೋಚರಿಸುತ್ತವೆ
ಶಿರಸಿ ತಾಲ್ಲೂಕಿನ ಸಹಸ್ರಲಿಂಗದಲ್ಲಿ ಶಾಲ್ಮಲಾ ನದಿ ಸೊರಗಿರುವುದರಿಂದ ಕಪ್ಪು ಬಂಡೆಗಳೇ ಗೋಚರಿಸುತ್ತವೆ   

ಶಿರಸಿ: ಬಿಸಿಲಿನ ತಾಪಕ್ಕೆ ಶಾಲ್ಮಲೆ ಸೊರಗಿದ್ದಾಳೆ. ಶಾಲ್ಮಲೆಯ ಶಾಂತ ಹರಿವಿನ ನಡುವೆ ನಿರುಮ್ಮಳವಾಗಿದ್ದ ಶಿವ ಕಾದುಕೆಂಡವಾಗಿದ್ದಾನೆ !

ತಾಲ್ಲೂಕಿನ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಸಹಸ್ರಲಿಂಗದ ಪ್ರಮುಖ ಆಕರ್ಷಣೆಯೇ ಹರಿಯುವ ನದಿ ಮತ್ತು ಕಪ್ಪು ಬಂಡೆಯ ಮೇಲೆ ಕೆತ್ತಿರುವ ಶಿವಲಿಂಗ. ಬಿರು ಬಿಸಿಲಿಗೆ ಶಾಲ್ಮಲಾ ನದಿಯ ಹರಿವು ಸಣ್ಣಗಾಗಿದೆ. ಅಲ್ಲಲ್ಲಿ ಗುಂಡಿಯಲ್ಲಿ ನಿಂತಿರುವ ನೀರಿನಲ್ಲೇ ಪ್ರವಾಸಿಗರು ಆಟವಾಡುತ್ತಾರೆ. ಹೊಸದಾಗಿ ಬರುವವರು ಸಣ್ಣ ತೊರೆಯಂತೆ ಹರಿಯುವ ನೀರನ್ನು ಬಳಸಿ, ಶಿವಲಿಂಗಕ್ಕೆ ನೀರು ಹಾಕುತ್ತಾರೆ.

ಶಿವರಾತ್ರಿ ಸಂದರ್ಭದಲ್ಲಿ ನೆರಳಿಗಾಗಿ ಕಟ್ಟಿದ್ದ ತಟ್ಟಿಯ ಕೆಳಗೆ ಕುಳಿತು ಆಯಾಸ ನೀಗಿಸಿಕೊಳ್ಳುತ್ತಾರೆ. ನಿತ್ಯ ನೂರಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ವಾಹನ ನಿಲುಗಡೆಗೆ ವಿಶಾಲವಾದ ಜಾಗವಿದೆ. ಆದರೆ, ಅದಕ್ಕೆ ಸರಿಯಾದ ವ್ಯವಸ್ಥೆಯಿಲ್ಲ. ಪ್ರವಾಸಿಗರಿಗೆ ಕುಳಿತುಕೊಳ್ಳಲು ಕಟ್ಟಿದ್ದ ವಿಶ್ರಾಂತಿ ತಾಣವು ಮೇಲಿನ ಹೊದಿಕೆಯಿಲ್ಲದೇ ನಿರುಪಯುಕ್ತವಾಗಿದೆ.

ADVERTISEMENT

‘ಪ್ರವಾಸಿಗರಿಗೆ ಯಾವ ಮೂಲ ಸೌಕರ್ಯ ಇಲ್ಲ. ಆದರೂ, ವಾಹನ ನಿಲುಗಡೆಗೆ ದುಬಾರಿ ಶುಲ್ಕ ತೆರಬೇಕು. ಶುಲ್ಕ ವಸೂಲು ಮಾಡುವ ಸಿಬ್ಬಂದಿಯ ವರ್ತನೆ ಕೂಡ ಪ್ರವಾಸಿಗರಿಗೆ ಕಿರಿಕಿರಿ ಮಾಡುವಂತಿದೆ. ನದಿ ತಟದಿಂದ ಮೇಲಕ್ಕೆ ಮೆಟ್ಟಿಲು ಹತ್ತಿ ಬರುವಷ್ಟರಲ್ಲಿ ಆಯಾಸವಾಗುತ್ತದೆ. ವಯಸ್ಸಾದವರಿಗಂತೂ ಇನ್ನೂ ಕಷ್ಟ. ಮೇಲೆ ವಾಹನ ನಿಲುಗಡೆಯ ಸುತ್ತಮುತ್ತ ಎಲ್ಲೂ ಕುಳಿತುಕೊಳ್ಳುವ ವ್ಯವಸ್ಥೆಯಿಲ್ಲ’ ಎನ್ನುತ್ತಾರೆ ಪ್ರವಾಸಿಗ ದಾನೇಶ ಪಾಟೀಲ.

ದ್ವಿಚಕ್ರ ವಾಹನಗಳಿಗೆ ₹ 10, ಕಾರಿಗೆ ₹ 30, ಟ್ಯಾಕ್ಸಿಗೆ ₹ 40, ಟೆಂಪೊಗಳಿಗೆ ₹ 50 ಹಾಗೂ ಬಸ್‌ಗೆ ₹ 100 ನಿಲುಗಡೆ ಶುಲ್ಕ ನಿಗದಿಪಡಿಸಲಾಗಿದೆ. ‘ನಮ್ಮಿಂದ ಶುಲ್ಕ ಪಡೆಯುವ ಸ್ಥಳೀಯ ಗ್ರಾಮ ಪಂಚಾಯ್ತಿ, ಪ್ರವಾಸಿ ತಾಣದ ಕನಿಷ್ಠ ಸ್ವಚ್ಛತೆ ಕಾಪಾಡಬೇಕು. ಕಸದ ತೊಟ್ಟಿಯ ಸುತ್ತ ತಿಂದು ಎಸೆದ ಪೇಪರ್ ಪ್ಲೇಟ್ ಬಿದ್ದಿರುತ್ತವೆ. ವಾಹನ ನಿಲುಗಡೆಯ ಸ್ಥಳದಲ್ಲಿ ಕುಡಿದು ಎಸೆದ ನೀರಿನ ಬಾಟಲಿ, ತಂಪುಪಾನೀಯದ ಬಾಟಲಿಗಳು ಕಾಣಸಿಗುತ್ತವೆ’ ಎಂದು ಹಾವೇರಿಯಿಂದ ಬಂದಿದ್ದ ರೇಣುಕಾ ಆಕ್ಷೇಪ ವ್ಯಕ್ತಪಡಿಸಿದರು.

‘ತೂಗುಸೇತುವೆಯನ್ನು ವಿಶೇಷ ಆಕರ್ಷಣೆ ಎಂಬಂತೆ ಬಿಂಬಿಸಲಾಗಿದೆ. ಆದರೆ, ಇದಕ್ಕೆ ಹೋಗುವ ಮಾರ್ಗದ ಇಕ್ಕೆಲದಲ್ಲಿ ಬಿದ್ದಿರುವ ತ್ಯಾಜ್ಯಗಳು ಕಸವಿಲೇವಾರಿ ಘಟಕದ ಚಿತ್ರಣವನ್ನು ನೆನಪಿಸುತ್ತವೆ. ಕಾಡಿನ ನಡುವೆ ಇರುವ ಈ ಕ್ಷೇತ್ರದ ಪರಿಸರವನ್ನು ಕಾಪಾಡಬೇಕು. ಪ್ರವಾಸಿಗರ ಸಂಖ್ಯೆ ಕಡಿಮೆ ಇರುವ ಮಧ್ಯಾಹ್ನ ವೇಳೆ ‘ಜೋಡಿ ಹಕ್ಕಿ’ಗಳ ಸಂಚಾರ ಇತ್ತೀಚಿನ ದಿನಗಳಲ್ಲಿ ಜೋರಾಗಿದೆ’ ಎಂದು ಶಿರಸಿಯ ಸುಬ್ರಾಯ ಹೆಗಡೆ ಹೇಳಿದರು. ವಿಶಿಷ್ಟ ತಾಣದ ಸೌಂದರ್ಯವನ್ನು ಉಳಿಸಿಕೊಳ್ಳಲು ಸ್ಥಳೀಯ ಪಂಚಾಯ್ತಿ ವಿಶೇಷ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.