ADVERTISEMENT

ಧ್ವನಿ ಬೆಳಕು ಕಾರ್ಯಕ್ರಮಕ್ಕೆ ಪ್ರಸ್ತಾವ ಸಲ್ಲಿಸಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 5:28 IST
Last Updated 11 ಅಕ್ಟೋಬರ್ 2025, 5:28 IST
ಕಾರವಾರ ಡಿ.ಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಯಿತು 
ಕಾರವಾರ ಡಿ.ಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಯಿತು    

ಕಾರವಾರ: ‘ಬನವಾಸಿಯ ಮಧುಕೇಶ್ವರ ದೇವಾಲಯ ಮತ್ತು ಮಿರ್ಜಾನ ಕೋಟೆಯಲ್ಲಿ ಧ್ವನಿ ಬೆಳಕು ಕಾರ್ಯಕ್ರಮ ಆಯೋಜಿಸುವ ಕುರಿತಂತೆ ಅನುಮತಿ ಪಡೆಯಲು ಕೇಂದ್ರ ಪ್ರಾಚ್ಯ ವಸ್ತು ಇಲಾಖೆಗೆ ಸಲ್ಲಿಸಲು ಪ್ರಸ್ತಾವ ಸಿದ್ಧಪಡಿಸಿ’ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅವರು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.

‘ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸಿ ತಾಣಗಳಲ್ಲಿ ಆಕರ್ಷಣೆ ಹುಟ್ಟಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಟ್ಯಾಗೋರ್ ಕಡಲತೀರದಲ್ಲಿನ ಯುದ್ಧ ನೌಕೆ ಮತ್ತು ಯುದ್ಧ ವಿಮಾನ ವಸ್ತುಸಂಗ್ರಹಾಲಯಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಲು ಕ್ರಮವಹಿಸಿ’ ಎಂದರು.

ADVERTISEMENT

ಮುರುಡೇಶ್ವರ ಕಡಲತೀರದಲ್ಲಿ ಪ್ರವಾಸಿಗರಿಗೆ ಲಗೇಜ್ ಮತ್ತು ಲಾಕರ್ ವ್ಯವಸ್ಥೆ ಒದಗಿಸಲು, ಸ್ನಾನಗೃಹಗಳ ನಿರ್ಮಾಣ ಮತ್ತು ಹೆಚ್ಚುವರಿ ಜೀವರಕ್ಷಕರ ನೇಮಕಕ್ಕೆ ಅನುಮತಿ ನೀಡಿದರು. ಕಡಲತೀರದಲ್ಲಿ ಪ್ರಥಮ ಚಿಕಿತ್ಸೆ ಕೇಂದ್ರ ಆರಂಭಿಸಲು ಸೂಚಿಸಿದರು.

ಶರಾವತಿ ನದಿಯಲ್ಲಿ ಬೋಟಿಂಗ್ ಆರಂಭಿಸಲು ಅನುಮತಿ ಕೋರಿ ಸಲ್ಲಿಕೆಯಾದ ಅರ್ಜಿಗಳಿಗೆ ವಿಳಂಬ ಮಾಡದೆ ನಿರಾಕ್ಷೇಪಣ ಪತ್ರ ನೀಡಲು ಬಂದರು ಜಲಸಾರಿಗೆ ಮಂಡಳಿ ಅಧಿಕಾರಿಗಳಿಗೆ ಆದೇಶಿಸಿದರು.

ಕಾಸರಕೋಡ, ಅಪ್ಸರಕೊಂಡ, ಧಾರೇಶ್ವರ ಕಡಲತೀರದಲ್ಲಿ ಜಲಸಾಹಸ ಕ್ರೀಡೆ ನಡೆಸಲು ಬೇಡಿಕೆ ಇದ್ದು, ಸ್ಥಳಗಳನ್ನು ಪರಿಶೀಲಿಸಿದ ಬಳಿಕವೇ ನಿರಕ್ಷೇಪಣಾ ಪತ್ರ ನೀಡುವ ಬಗ್ಗೆ ನಿರ್ಧರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಉಪ ವಿಭಾಗಾಧಿಕಾರಿ ಶ್ರವಣಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ತರಬೇತಿ ನಿರತ ಐಎಎಸ್ ಅಧಿಕಾರಿ ಝೂಫಿಶಾನ್ ಹಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಮಂಗಳಗೌರಿ ಭಟ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.