ADVERTISEMENT

ಪ್ರೇಕ್ಷಕರ ಮನಗೆದ್ದ ‘ವರದಯೋಗಿ ಶ್ರೀಧರ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 20 ಮೇ 2025, 13:52 IST
Last Updated 20 ಮೇ 2025, 13:52 IST
ಸಿದ್ದಾಪುರದ ಪಟ್ಟಣದಲ್ಲಿ ಪ್ರದರ್ಶನಗೊಂಡ ‘ವರದಯೋಗಿ ಶ್ರೀಧರ’ ನಾಟಕದ ದೃಶ್ಯ
ಸಿದ್ದಾಪುರದ ಪಟ್ಟಣದಲ್ಲಿ ಪ್ರದರ್ಶನಗೊಂಡ ‘ವರದಯೋಗಿ ಶ್ರೀಧರ’ ನಾಟಕದ ದೃಶ್ಯ   

ಸಿದ್ದಾಪುರ: ಜನಹಿತ ಸೇವಾ ಪೌಂಡೇಷನ್ ಮತ್ತು ಶ್ರೀಧರ ಸ್ವಾಮಿಗಳ ಭಕ್ತರ ಸಹಯೋಗದಲ್ಲಿ ಹೊನ್ನಾವರ ತಾಲ್ಲೂಕಿನ ಮೇಲಿನಮಣ್ಣಿಗೆಯ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಪಟ್ಟಣದ ಸಿದ್ಧಿವಿನಾಯಕ ಪ್ರೌಢಶಾಲೆಯ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ‘ವರದಯೋಗಿ ಶ್ರೀಧರ’ ನಾಟಕವನ್ನು ಭಾನುವಾರ ಪ್ರದರ್ಶಿಸಲಾಯಿತು.

ಶ್ರೀಧರ ಸ್ವಾಮಿಗಳ ಜೀವನ ಚರಿತ್ರೆ ಹಾಗೂ ಅವರ ಆದರ್ಶಗಳನ್ನು ತಿಳಿಸುವ ನಾಟಕದಲ್ಲಿ ಒಳಿತು ಕೆಡುಕುಗಳ ಕುರಿತು ಸಾಮಾಜಿಕ ಜಾಗೃತಿ ಮೂಡಿಸಲಾಗುತ್ತದೆ. 45ಕ್ಕೂ ಹೆಚ್ಚು ಕಲಾವಿದರನ್ನು ಬಳಸಿಕೊಂಡು ಪ್ರದರ್ಶಿಸಿದ ನಾಟಕಕ್ಕೆ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜಿ.ಡಿ.ಭಟ್ಟ ಕೆಕ್ಕಾರ ನಿರ್ದೇಶನವಿದೆ.

ಸಂತೋಷ ಯಾಜಿ ಮಣ್ಣಿಗೆ ಸಂಯೋಜನೆ ಹಾಗೂ ಎಂ.ಜಿ. ವಿಷ್ಣು ಮಣ್ಣಿಗೆ ರಂಗರೂಪ ನೀಡಿದ್ದಾರೆ. ವಿ.ವಿಶ್ವೇಶ್ವರ ಭಟ್ಟ ಖರ್ವಾ ಹಾಗೂ ಸಂಗಡಿಗರು ಸಂಗೀತ ಒದಗಿಸಿದ್ದಾರೆ. ಗುರುರಾಜ ಹೆಗಡೆ ಆಡುಕಳ (ತಬಲಾ), ಅರುಣ ಭಟ್ಟ ಮೂರೂರು (ಕೀಬೋರ್ಡ್), ಸಮರ್ಥ ಹೆಗಡೆ ತಂಗಾರಮನೆ (ಕೊಳಲು), ಕು.ಮನೋಜ ಭಟ್ಟ (ಹಾರ್ಮೋನಿಯಂ), ನಿನಾದ ರಾಮಣ್ಣ (ಧ್ವನಿ), ನಾಗರಾಜ ಭಂಡಾರಿ ಶಿರಸಿ (ಬೆಳಕು), ದಾಮು ನಾಯ್ಕ ಹೊನ್ನಾವರ (ಪ್ರಸಾದನ) ಹಿನ್ನೆಲೆಯಲ್ಲಿ ಸಹಾಯ ಒದಗಿಸಿದ್ದಾರೆ.

ADVERTISEMENT

ನಾಲ್ಕು ತಾಸು ವಿರಾಮವಿಲ್ಲದೆ ನಡೆದ ಪ್ರದರ್ಶನವು ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ಭಕ್ತಿಯ ತರಂಗದಲ್ಲಿ ತೇಲಿಸಿತು. ಶಿರಳಗಿ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಹಾಗೂ ಶೀಗೇಹಳ್ಳಿ ಪರಮಾನಂದ ಮಠದ ಪ್ರಣವಾನಂದ ಶ್ರೀಗಳು ನಾಟಕವನ್ನು ಮೆಚ್ಚುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.