ADVERTISEMENT

ಲಕ್ಷ್ಮಿದೇವಿಯ ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 16:05 IST
Last Updated 17 ಏಪ್ರಿಲ್ 2025, 16:05 IST
ಹಳಿಯಾಳ ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಅದ್ದೂರಿಯಾಗಿ ಜರುಗಿತು
ಹಳಿಯಾಳ ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಅದ್ದೂರಿಯಾಗಿ ಜರುಗಿತು   

ಹಳಿಯಾಳ: 29 ವರ್ಷಗಳ ನಂತರ ನಡೆಯುತ್ತಿರುವ ತಾಲ್ಲೂಕಿನ ಬೆಳವಟಗಿ ಗ್ರಾಮದ ಗ್ರಾಮದೇವಿ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಹಸ್ತ್ರಾರು ಭಕ್ತರ ನಡುವೆ ಅದ್ದೂರಿ ಮಹಾರಥೋತ್ಸವ ಜರುಗಿತು.

ಮಧ್ಯಾಹ್ನ 12.29ಕ್ಕೆ ಗ್ರಾಮದೇವಿಯರಿಗೆ ಪಂಚ ಕಮಿಟಿಯಿಂದ ಪೂಜೆ ಸಲ್ಲಿಸಿದ ನಂತರ ಕೆ.ಕೆ ಹಳ್ಳಿ ಸುಬ್ರಮಣ್ಯ ಸ್ವಾಮೀಜಿ, ಹುಬ್ಬಳ್ಳಿಯ ಬ್ರಹ್ಮಾನಂದ ಸ್ವಾಮೀಜಿ, ಬೆಂಗಳೂರು ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಹಾಗೂ ವಿವಿಧ ಪಕ್ಷದ ಮುಖಂಡರು, ಜಾತ್ರಾ ಕಮಿಟಿ ಸದಸ್ಯರು ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು.

ರಥೋತ್ಸವ ಗ್ರಾಮದ ಮುಖ್ಯ ಬೀದಿಯಿಂದ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆಹಣ್ಣು, ಫಲ ಪುಷ್ಪಗಳನ್ನು ರಥಕ್ಕೆ ಎಸೆದು ಪ್ರಾರ್ಥಿಸಿದರು. ರಥೋತ್ಸವದ ಪ್ರಯುಕ್ತ ಗ್ರಾಮವೆಲ್ಲ ತೋರಣದಿಂದ ಅಲಂಕರಿಸಲಾಗಿತ್ತು. ಡೊಳ್ಳಿನ ವಾದ್ಯ, ಮತ್ತಿತರ ವಾದ್ಯ ಮೇಳಗಳು ರಥೋತ್ಸವದ ಮುಂದೆ ಸಾಗಿ ವಿಶೇಷ ಮೆರುಗು ನೀಡಿದವು. ರಥದ ಸುತ್ತಲೂ ಗ್ರಾಮದ ಎಲ್ಲಾ ದೇವಾಲಯಗಳ ದೇವತೆಗಳ ಮತ್ತು ಮಹಾತ್ಮರ, ಸರ್ವಧರ್ಮೀಯರ ಚಿತ್ರ ಅಳವಡಿಸಲಾಗಿತ್ತು.

ADVERTISEMENT

ಮಧ್ಯಾಹ್ನ ಆರಂಭವಾದ ರಥೋತ್ಸವ ಸಂಜೆ ಜಾತ್ರಾ ಗದ್ದುಗೆಗೆ ತಲುಪಿತು. ಜಾತ್ರಾ ಗದ್ದುಗೆಯಲ್ಲಿ ದೇವಿಯನ್ನು ಪುನಃ ಪ್ರತಿಷ್ಠಾಪಿಸಲಾಯಿತು. ಹಾಗೂ ಉಡಿ ತುಂಬುವ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ಏ.21 ರಂದು ಸಂಜೆ ಲಕ್ಷ್ಮಿ ದೇವಿಯನ್ನು ಸೀಮೆಗೆ ಕಳಿಸುವ ಕಾರ್ಯಕ್ರಮ ನಡೆಸಲಾಗುವುದು. 22 ರಂದು ಗ್ರಾಮದೇವಿಯನ್ನು ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪನೆ ಹಾಗೂ ಉಡಿ ತುಂಬುವುದು, ಮಹಾಪ್ರಸಾದ ನಡೆಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.