ಹಳಿಯಾಳ: ಮಳೆಗಾಲದಲ್ಲಿ ಕಾಲುವೆ ತುಂಬಿ ರಸ್ತೆ ಮೇಲೆ ನೀರು ಹರಿಯಬಾರದೆಂದು ಪುರಸಭೆ ಹಳಿಯಾಳದಿಂದ ಈಗಿನಿಂದಲೇ ಮಳೆಗಾಲದ ಪೂರ್ವ ಸಿದ್ಧತೆಯ ಕಾರ್ಯ ಆರಂಭಿಸಲಾಗಿದೆ.
ಪಟ್ಟಣದಲ್ಲಿ ಒಟ್ಟು 23 ವಾರ್ಡ್‌ಗಳಿದ್ದು ಸುಮಾರು 75 ಕಿ.ಮೀ ನಷ್ಟು ಕಾಲುವೆಗಳು ನಿರ್ಮಾಣಗೊಂಡಿವೆ. ನೂತನವಾಗಿ ನಿರ್ಮಾಣಗೊಂಡಿರುವ ಲೇಔಟ್‌ಗಳಲ್ಲಿ ಕಾಲುವೆಗಳು ನಿರ್ಮಾಣಗೊಳ್ಳುತ್ತಿವೆ.
ಈಗಾಗಲೇ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಳೆಗಾಲದ ಪೂರ್ವ ಸಿದ್ಧತೆಗಾಗಿ ಕಾಲುವೆ ಸ್ವಚ್ಛಗೊಳಿಸುವ ಬಗ್ಗೆ ರೂಪುರೇಷೆ ಮಂಡಿಸಿ ಅನುಮೋದನೆ ಪಡೆದು ಸ್ವಚ್ಛತೆ ಬಗ್ಗೆ ಟೆಂಡರ್ ಕರೆಯುವುದಕ್ಕೆ ಸಂಬಂಧಿಸಿ ಅನುಮೋದನೆ ಪಡೆಯಲಾಗಿದೆ. ಮಾರ್ಚ್ 15ರ ಒಳಗಾಗಿ ಟೆಂಡರ್ ಪ್ರಕ್ರಿಯೆ ಮುಗಿಸಿ ಮೇ 15ರ ಒಳಗಾಗಿ ಪಟ್ಟಣದ ಸಂಪೂರ್ಣ ಕಾಲುವೆ ಸ್ವಚ್ಛಗೊಳಿಸಿ ಮಳೆಗಾಲದಲ್ಲಿ ನೀರು ಸರಾಗವಾಗಿ ಸಾಗುವಂತೆ ಮಾಡಲಾಗುವುದು. ಕಾಲುವೆ ಸ್ವಚ್ಛತೆ ಜೊತೆಗೆ ಸ್ವಚ್ಛತೆ ಗೊಳಿಸಲಾದ ಕಾಲುವೆಗಳಲ್ಲಿ ಸೊಳ್ಳೆ ಮತ್ತಿತರ ಕೀಟಗಳು ಉತ್ಪತ್ತಿ ಆಗಬಾರದೆಂದು ವಿಶೇಷವಾಗಿ ಮೇಲಾಥಿನ್ ರಾಸಾಯನಿಕ ಪೌಡರ್ ಬಳಸಲಾಗುವುದು.
ಟೆಂಡರ್ ಪ್ರಕ್ರಿಯೆ ಮುಗಿಸಿದ ನಂತರ ಹೆಚ್ಚುವರಿಗಾಗಿ ಜನರನ್ನು ಸ್ವಚ್ಛಗೊಳಿಸಲು ತೆಗೆದುಕೊಂಡು ನಿಗದಿತ ಅವಧಿಯಲ್ಲಿ ಸ್ವಚ್ಛತೆ ಕಾರ್ಯ ನಡೆಸಲಾಗುವುದು. ಈಗಾಗಲೇ ಪುರಸಭೆಯಲ್ಲಿ ಇದ್ದಂತಹ ಸಿಬ್ಬಂದಿಗಳನ್ನು ತೆಗೆದುಕೊಂಡು ಅವರಿಂದ ಅವಶ್ಯಕತೆಗೆ ಅನುಗುಣವಾಗಿ ಅಲ್ಲಲ್ಲಿ ಸ್ವಚ್ಛತೆ ಕಾರ್ಯ ಪ್ರಾರಂಭಿಸಲಾಗಿದೆ. ಹಾಗೂ ಮಳೆಗಾಲದಲ್ಲಿ ಯಾವುದೇ ರೀತಿಯಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಕೆಲಸ ಕಾರ್ಯ ಮಾಡಲಾಗುತ್ತಿದೆ.
ಸಾರ್ವಜನಿಕರು ಸಹ ಕಾಲುವೆ(ಗಟಾರ)ಗಳಲ್ಲಿ ಕಸ ಎಸೆಯುವುದರಿಂದ ಕಾಲುವೆಗಳು ಸಹ ಕಸದಿಂದ ತುಂಬುತ್ತಿವೆ. ವಿಶೇಷವಾಗಿ ಮನೆ ದುರಸ್ತಿ ಕಾರ್ಯ, ಮನೆ ಕಟ್ಟುವಾಗ ಮಣ್ಣು ಮತ್ತಿತರ ಸಾಮಗ್ರಿಗಳನ್ನು ಕಾಲುವೆಯಲ್ಲಿ ಎಸೆಯುತ್ತಿರುವುದು ಅಲ್ಲಲ್ಲಿ ಕಾಣ ಬರುತ್ತಿದೆ. ಪ್ರತಿ ನಿತ್ಯ ಬೆಳ್ಳಿಗ್ಗೆ ಹಾಗೂ ಸಾಯಂಕಾಲ ಕಸ ವಿಲೇವಾರಿ ವಾಹನ ಬಂದರೂ ಕೂಡ ನಿಗದಿತ ಸಮಯದಲ್ಲಿ ಕಸವನ್ನು ಕೆಲವು ಜನರು ನಿಡದೇ ಹಸಿ ಕಸವನ್ನು ಕಾಲುವೆಯಲ್ಲಿ ಹಾಕುತ್ತಿರುವುದರಿಂದ ಅದರಿಂದಲೂ ಕೂಡ ಕಾಲುವೆ ತುಂಬುತ್ತಿದೆ. ಬಹಳಷ್ಟು ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಈಗಾಗಲೇ ದಂಡವನ್ನು ಸಹ ಆಕರಣಿ ಮಾಡಲಾಗುತ್ತಿದೆ. ಎಂದು ಪುರಸಭೆ ಪರಿಸರ ಇಂಜಿನೀಯರ್ ಬಿ ಎಸ್ ದರ್ಶಿತಾ ಹೇಳಿದರು.
ಕಳೆದ ಎರಡು ಮೂರು ವರ್ಷಗಳ ಹಿಂದೆ ಏಪ್ರಿಲ್-ಮೇ ತಿಂಗಳಲ್ಲಿ ಆಕಸ್ಮಿಕ ಮಳೆ ಬಂದ ಕಾರಣ ಕೆಲವೊಂದು ಬಡಾವಣೆಗಳಲ್ಲಿನ ಕಾಲುವೆಗಳಲ್ಲಿ ನೀರು ತುಂಬಿ ಮನೆಯಲ್ಲಿ ನುಗ್ಗಿ ಅತೀವ ಹಾನಿ ಸಹ ಆಗಿರುತ್ತದೆ. ಮಾರ್ಚ್ ತಿಂಗಳ ಅವಧಿಯಲ್ಲಿ ಪುರಸಭೆಯಿಂದ ಸಂಪೂರ್ಣ ಕಾಲುವೆಗಳು ಸ್ವಚ್ಛಗೊಳಿಸಿದರೆ ಏಪ್ರಿಲ್ ಮೇ ತಿಂಗಳಲ್ಲಿ ಬರುವ ಮಳೆಯಿಂದ ಕಾಲುವೆಗಳ ನೀರು ಸರಾಗವಾಗಿ ಸಾಗಲು ಸಾಧ್ಯ ಈ ಬಗ್ಗೆ ಪುರಸಭೆಯಿಂದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪಟ್ಟಣದ ರಹವಾಸಿ ಚಂದ್ರಕಾಂತ ಲೋಕಪ್ಪಾ ಬೆಳಗಾಂವಕರ, ವಕೀಲ ಅಶೋಕ ಪಾಟೀಲ ಮತ್ತಿತರರು ಆಗ್ರಹಿಸಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.