ಏಡ್ಸ್ ಜಾಗೃತಿ
ಕಾರವಾರ: ಎಚ್‍ಐವಿ/ಏಡ್ಸ್ ಪ್ರಮಾಣ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಇಳಿಕೆ ಆಗುತ್ತಿದೆ. ಜಿಲ್ಲೆಯಲ್ಲಿ ಸದ್ಯ 1,832 ಸೋಂಕಿತರಿದ್ದು, ಸಕಾಲಕ್ಕೆ ಔಷಧೋಪಚಾರ ಪಡೆದು ಸಹಜ ಜೀವನ ನಡೆಸುತ್ತಿದ್ದಾರೆ.
ಜಿಲ್ಲೆಯ ಜನಸಂಖ್ಯೆಗೆ ಹೋಲಿಸಿದರೆ ಎಚ್‍ಐವಿ/ಏಡ್ಸ್ ಸೋಂಕು ಪತ್ತೆಯಾದವರ ಪ್ರಮಾಣ ತೀರಾ ಕಡಿಮೆ ಇದೆ. ಸೋಂಕು ಪತ್ತೆ ಪ್ರಮಾಣದಲ್ಲಿ ಜಿಲ್ಲೆಯು 16ನೇ ಸ್ಥಾನದಲ್ಲಿದೆ ಎನ್ನುತ್ತವೆ ಆರೋಗ್ಯ ಇಲಾಖೆ ಮಾಹಿತಿ.
‘ಕಳೆದ ವರ್ಷ ಜಿಲ್ಲೆಯ ವಿವಿಧ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ 1.20 ಲಕ್ಷ ಮಂದಿಯು ರಕ್ತ ಪರೀಕ್ಷೆಗೆ ಒಳಪಟ್ಟಿದ್ದರು. ಅವರ ಪೈಕಿ ಕೇವಲ 141 ಮಂದಿಯಲ್ಲಿ ಮಾತ್ರ ಎಚ್‍ಐವಿ ಸೋಂಕು ದೃಢಪಟ್ಟಿತ್ತು. ಈ ವರ್ಷದ ಅಕ್ಟೋಬರ್ ತಿಂಗಳವರೆಗೆ 76,832 ಮಂದಿಯ ರಕ್ತಪರೀಕ್ಷೆ ನಡೆಸಲಾಗಿದ್ದು, ಅವರ ಪೈಕಿ 62 ಜನರಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ. ಸೋಂಕು ಹರಡುವ ಪ್ರಮಾಣ ಶೇ.0.08 ರಷ್ಟಿದೆ’ ಎನ್ನುತ್ತಾರೆ ಜಿಲ್ಲಾ ಏಡ್ಸ್ ನಿಯಂತ್ರಣ ಕೋಶದ ಅಧಿಕಾರಿ ಡಾ.ಹರ್ಷ.
‘2018–19ನೇ ಸಾಲಿನಲ್ಲಿ 167 ಮಂದಿಯಲ್ಲಿ ಎಚ್‍ಐವಿ/ಏಡ್ಸ್ ಸೋಂಕು ಪತ್ತೆಯಾಗಿದ್ದು, ಸದ್ಯದ ವರ್ಷದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡ ವರ್ಷವಾಗಿದೆ. ಆ ಬಳಿಕ ಸೋಂಕಿತರ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಜಿಲ್ಲೆಯ ಒಟ್ಟಾರೆ ಜನಸಂಖ್ಯೆ ಹೋಲಿಕೆ ಮಾಡಿದರೆ ಸೋಂಕು ಹರಡುವ ಪ್ರಮಾಣ ಕಡಿಮೆ ಇದೆ’ ಎನ್ನುತ್ತಾರೆ ಅವರು.
‘ಲೈಂಗಿಕ ಕಾರ್ಯಕರ್ತೆಯರು, ವಲಸೆ ಕಾರ್ಮಿಕರು, ಮಾದಕ ವ್ಯಸನಿಗಳು, ಲಾರಿ ಚಾಲಕರು ಹೀಗೆ ಕೆಲ ವಲಯಗಳ ಜನರನ್ನು ಗುರಿ ಇಟ್ಟುಕೊಂಡು ರಕ್ತ ಪರೀಕ್ಷೆ ನಡೆಸಲಾಗುತ್ತಿದೆ. ಯಾರಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ ಎಂಬುದನ್ನು ಗಮನಿಸಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸೋಂಕಿತರು ಪತ್ತೆಯಾದಲ್ಲಿ ತಕ್ಷಣ ಅವರಿಗೆ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ಸೌಲಭ್ಯ ಒದಗಿಸಲಾಗುತ್ತಿದೆ’ ಎಂದೂ ವಿವರಿಸಿದರು.
–––––––––––––
ಅಂಕಿ–ಅಂಶ
ಜಿಲ್ಲೆಯಲ್ಲಿ ಪತ್ತೆಯಾದ ಎಚ್‍ಐವಿ/ಏಡ್ಸ್ ಸೋಂಕಿತರು
ವರ್ಷ;ಸೋಂಕಿತರ ಸಂಖ್ಯೆ
2018–19;167
2019–20;153
2020–21;82
2021–22;124
2022–23;99
2023–24;141
2024–25 (ಅಕ್ಟೋಬರ್ ವರೆಗೆ);62
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.