ADVERTISEMENT

ಹೊಸಪೇಟೆ: ಢಾಬಾ ಮಾಲೀಕನ ಮೇಲೆ ಹಲ್ಲೆ, ಪೊಲೀಸ್‌ ಕಾನ್‌ಸ್ಟೆಬಲ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 8:49 IST
Last Updated 19 ಜುಲೈ 2022, 8:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸಪೇಟೆ (ವಿಜಯನಗರ): ‌ಢಾಬಾ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಹಿರೇಹಡಗಲಿ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಕಲ್ಲೇಶಗೌಡ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ. ಡಾ. ಅರುಣ್‌ ಕೆ. ಮಂಗಳವಾರ ಆದೇಶ ಹೊರಡಿಸಿದ್ದಾರೆ.

‘ದೂರು ಕೊಡಲು ಬಂದವರ ಮೇಲೆ ಪೊಲೀಸ್‌ ಠಾಣೆಯಲ್ಲಿ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿರುವುದು ದೃಢಪಟ್ಟಿರುವುದರಿಂದ ಕಲ್ಲೇಶಗೌಡ ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಅರುಣ್‌ ತಿಳಿಸಿದ್ದಾರೆ.

ಆಗಿದ್ದೇನು?:ಢಾಬಾದಲ್ಲಿ ಊಟ ಮಾಡಿದ ಬಿಲ್ ಕೇಳಿದ್ದಕ್ಕೆ ಹಿರೇಹಡಗಲಿ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಕಲ್ಲೇಶಗೌಡ ಅವರು ಢಾಬಾ ಮಾಲೀಕ ಗುರುರಾಜ ಅವರ ಮೇಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಗುತ್ತಲ ಕ್ರಾಸ್ ನಲ್ಲಿ ಭಾನುವಾರ ಸಂಜೆ ಹಲ್ಲೆ ನಡೆಸಿದ್ದರು. ಈ ಕುರಿತು ಗುರುರಾಜ ಅವರ ಪತ್ನಿ ರಾಧಮ್ಮ ಅವರು ಹೂವಿನಹಡಗಲಿ ಸಿ.ಪಿ.ಐ ಹಾಗೂ ಹಿರೇಹಡಲಿ ಪಿ.ಎಸ್‌.ಐ.ಗೆ ದೂರು ಕೊಟ್ಟಿದ್ದರು.

ಮೈಲಾರ ಗ್ರಾಮದ ಗುತ್ತಲ ಕ್ರಾಸ್ ಬಳಿ ಗುರುರಾಜ ಅವರ ‘ಹಸಿರು ಮನೆ’ ಢಾಬಾ ಇದೆ. ಆಗಾಗ್ಗೆ ಢಾಬಾಕ್ಕೆ ಹೋಗಿ ಕಲ್ಲೇಶಗೌಡ ಊಟ ಮಾಡುತ್ತಿದ್ದರು. ಐದು ಸಾವಿರ ರೂಪಾಯಿ ಬಾಕಿ ಕೂಡ ಉಳಿಸಿಕೊಂಡಿದ್ದರು. ಭಾನುವಾರ ಢಾಬಾಕ್ಕೆ ಬಂದು ಮದ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಳೆಯ ಬಾಕಿ ಕೊಡುವಂತೆ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕಲ್ಲೇಶಗೌಡ, ಹಣ ಕೇಳಿದ್ದ ಗುರುರಾಜ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಈ ಕುರಿತು ಅವರು ಠಾಣೆಗೆ ದೂರು ಕೊಡಲು ಹೋದಾಗ ಅಲ್ಲಿಯೂ ಹಲ್ಲೆ ನಡೆಸಿ, ನಿಂದಿಸಿದ್ದಾರೆ ಎಂದು ದೂರು ದಾಖಲಾಗಿತ್ತು.

-ಕಲ್ಲೇಶಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.