ADVERTISEMENT

40 ಸಾವಿರ ಶಾಲೆ ಮುಚ್ಚಲು ಬಿಡಬೇಡಿ: ಎಐಡಿಎಸ್‌ಒ ಜಿಲ್ಲಾ ಸಮ್ಮೇಳನದಲ್ಲಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 5:27 IST
Last Updated 21 ಡಿಸೆಂಬರ್ 2025, 5:27 IST
ಹೊಸಪೇಟೆಯಲ್ಲಿ ಶನಿವಾರ ನಡೆದ ಎಐಡಿಎಸ್‌ಒ ಜಿಲ್ಲಾ ಸಮ್ಮೇಳನದಲ್ಲಿ ಎಸ್.ಬಿ.ಚಂದ್ರಶೇಖರ್ ಮಾತನಾಡಿದರು
ಹೊಸಪೇಟೆಯಲ್ಲಿ ಶನಿವಾರ ನಡೆದ ಎಐಡಿಎಸ್‌ಒ ಜಿಲ್ಲಾ ಸಮ್ಮೇಳನದಲ್ಲಿ ಎಸ್.ಬಿ.ಚಂದ್ರಶೇಖರ್ ಮಾತನಾಡಿದರು   

ಹೊಸಪೇಟೆ (ವಿಜಯನಗರ): ಕೆಪಿಎಸ್-ಮ್ಯಾಗ್ನೆಟ್ ಹೆಸರಿನಲ್ಲಿ ರಾಜ್ಯದಲ್ಲಿ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆದಿದೆ, ಅದನ್ನು ಎಲ್ಲರೂ ಒಗ್ಗಟ್ಟಿನಿಂದ ವಿರೋಧಿಸಿ ತಡೆಯಬೇಕಾಗಿದೆ ಎಂಬ ಸಂದೇಶವನ್ನು ಇಲ್ಲಿ ಶನಿವಾರ ನಡೆದ ಆಲ್‌ ಇಂಡಿಯಾ ಡಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಜಿಲ್ಲಾ ಸಮ್ಮೆಳನದ ಕೊನೆಯಲ್ಲಿ ಸಾರಲಾಯಿತು.

ಪ್ರಗತಿಪರ ಚಿಂತಕ ಎಸ್.ಬಿ.ಚಂದ್ರಶೇಖರ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಹಿಂದೆ 50 ಲಕ್ಷ ಸಹಿ ಸಂಗ್ರಹ ಅಭಿಯಾನ ಮೂಲಕ ದೊಡ್ಡ ಮಟ್ಟದಲ್ಲಿ ಎಐಡಿಎಸ್‌ಒ ಹೋರಾಟ ಮಾಡಿದ್ದರಿಂದ 6,200 ಸರ್ಕಾರಿ ಶಾಲೆಗಳನ್ನು ಉಳಿಸುವುದು ಸಾಧ್ಯವಾಯಿತು ಎಂದರು.

ಎಐಡಿಎಸ್‌ಒ ರಾಜ್ಯ ಅಧ್ಯಕ್ಷೆ ಕೆ.ಎಸ್.ಅಶ್ವಿನಿ ಮಾತನಾಡಿ, ರಾಜ್ಯ ಸರಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆಯ ಹೆಸರಿನಲ್ಲಿ ಗ್ರಾಮ ಪಂಚಾಯಿತಿಗೆ ಒಂದರಂತೆ ರಾಜ್ಯದಲ್ಲಿ 6,000 ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸಲು 40 ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಈ ಮೂಲಕ ಬಡ ಮಕ್ಕಳ ಶಿಕ್ಷಣದ ಕನಸನ್ನು ಕಸಿದುಕೊಳ್ಳಲು ಮುಂದಾಗಿದೆ, ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಮಹತ್ವದ ಜವಾಬ್ದಾರಿ ರಾಜ್ಯದ ವಿದ್ಯಾರ್ಥಿ ಮತ್ತು ಜನತೆಯ ಮೇಲಿದೆ ಎಂದರು.

ADVERTISEMENT

ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ರಾಜ್ಯದಲ್ಲಿ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂಬ ಸರ್ಕಾರದ ಭರವಸೆ ಸತ್ಯಕ್ಕೆ ದೂರವಾಗಿದೆ ಎಂದರು. ರಾಜ್ಯ ಖಜಾಂಚಿಗಳಾದ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿದರು.

ಸಮ್ಮೇಳನದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಬೇಕು ಹಾಗೂ ಇನ್ನಿತರ ವಿದ್ಯಾರ್ಥಿಗಳ ಬೇಡಿಕೆಯ ಗೊತ್ತುವಳಿಗಳನ್ನು ಮಂಡಿಸಲಾಯಿತು.

ಜಿಲ್ಲೆಯ ನೂತನ ಜಿಲ್ಲಾ ಕೌನ್ಸಿಲನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರವಿಕಿರಣ್ ಜೆ.ಪಿ., ಕಾರ್ಯದರ್ಶಿ ಉಮಾದೇವಿ ಯು. ಜಂಟಿ ಕಾರ್ಯದರ್ಶಿ ಆದಿತ್ಯ, ಚಂದ್ರ, ಆಕಾಶ್, ಜ್ಞಾನೇಶ್, ಮೇರಿ, ನೀಮ, ಕಾವೇರಿ ಎ., ದಿವ್ಯಶ್ರೀ. ಕಾರ್ಯಕಾರಿ ಸಮಿತಿಯಲ್ಲಿ ನಾನಾ ಕಾಲೇಜಿನ 12 ವಿದ್ಯಾರ್ಥಿಗಳು ಹಾಗೂ 25 ವಿದ್ಯಾರ್ಥಿಗಳು ಕೌನ್ಸಿಲ್ ಸದಸ್ಯರಾಗಿ ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.