ADVERTISEMENT

ಹೊಸಪೇಟೆ | ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2023, 9:09 IST
Last Updated 4 ಏಪ್ರಿಲ್ 2023, 9:09 IST
   

ಹೊಸಪೇಟೆ (ವಿಜಯನಗರ): ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ‘ಆಲ್‌ ಇಂಡಿಯಾ ಬಂಜಾರ ಸೇವಾ ಸಂಘ’ದವರು ನಗರದ ಡಾ. ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು. ಪರಿಶಿಷ್ಟ ಜಾತಿಗಳ ನಡುವೆ ಮೀಸಲಾತಿ ವರ್ಗೀಕರಣ ಮಾಡಿ ಇದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿರುವುದು ಸಂವಿಧಾನಕ್ಕೆ ವಿರುದ್ಧವಾದ ನಡೆ. ಒಳಮೀಸಲಾತಿ ಪ್ರಕ್ರಿಯೆ ನ್ಯಾಯ ಸಮ್ಮತವಾಗಿಲ್ಲ. ಬಂಜಾರ, ಬೋವಿ, ಕೊರಮ, ಕೊರಚ, ಚಲವಾದಿ ಸಮುದಾಯಗಳನ್ನು ಇದನ್ನು ವಿರೋಧಿಸುತ್ತವೆ ಎಂದು ತಿಳಿಸಿದರು.

ಸುಪ್ರೀಂಕೋರ್ಟ್‌ ತೀರ್ಪಿಗೆ ವಿರುದ್ಧವಾಗಿ ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಕೇಂದ್ರ ಸರ್ಕಾರ ಇದನ್ನು ತಡೆ ಹಿಡಿಯಬೇಕು. ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಸಮುದಾಯಗಳ ಬಗ್ಗೆ ವಸ್ತುನಿಷ್ಠ ಅಧ್ಯಯನ ನಡೆದಿಲ್ಲ. ಪರಿಶಿಷ್ಟ ಐಕ್ಯತೆ ಹಾಳು ಮಾಡಿ ವಿಭಜಿಸಲಾಗಿದೆ. ಪರಿಶಿಷ್ಟ ಜಾತಿಗಳಲ್ಲಿ ಸೇರ್ಪಡೆ ಅಥವಾ ರದ್ದುಗೊಳಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ರಾಜ್ಯ ಸರ್ಕಾರದ ಅನಗತ್ಯ ಹಸ್ತಕ್ಷೇಪ ತಡೆಯಬೇಕೆಂದು ಆಗ್ರಹಿಸಿದರು.

ADVERTISEMENT

ಇತ್ತೀಚೆಗೆ ಶಿಕಾರಿಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋರಾಟಗಾರರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು. ಬಂಧಿತರನ್ನು ಬಿಡುಗಡೆಗೊಳಿಸಬೇಕು. ಲಾಠಿ ಚಾರ್ಜ್‌ ನಡೆಸಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಶಿವಕುಮಾರ್‌ ಕೆ., ಮುಖಂಡರಾದ ತೇಜಸ್ವಿ ನಾಯ್ಕ, ಮಂಜು ನಾಯ್ಕ, ಹನುಮ ನಾಯ್ಕ, ಅಲೋಕ್‌ ನಾಯ್ಕ, ಈಶ್ವರ್‌ ನಾಯ್ಕ, ಪಾಟೀಲ್‌ ನಾಯ್ಕ, ರಾಮಜೀ ನಾಯ್ಕ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.