
ಹೊಸಪೇಟೆ (ವಿಜಯನಗರ): ‘ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಬೋಧನೆಯಾಗಿತ್ತು. ಇದು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾಯಿತು’ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು.
ಗಮಕ ಕಲಾವಿದ, ನಿವೃತ್ತ ಹಿಂದಿ ಶಿಕ್ಷಕ ರಂಗೋಪಂತ ನಾಗರಾಜರಾಯರು ರಚಿಸಿದ 16,000 ಭಾಮಿನಿ ಷಟ್ಸದಿಯಲ್ಲಿರುವ ‘ಶ್ರೀಕೃಷ್ಣ ಲೀಲಾಮೃತ ಮಹಾಕಾವ್ಯ’ವನ್ನು ಭಾನುವಾರ ಇಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಬ್ರಿಟಿಷರನ್ನು ದೇಶದಿಂದ ಓಡಿಸಬೇಕು ಎಂಬ ಜನರ ಭಾವನೆಗೆ ಶ್ರೀಕೃಷ್ಣನೇ ಪ್ರೇರಣೆಯಾಗಿದ್ದ. ಸ್ವಾತಂತ್ರ್ಯ ನಂತರ ದೇಶದ ಜನರಿಗೆ ರಾಮ ಆದರ್ಶವಾದ. ಹೀಗಾಗಿ ಕುವೆಂಪು ಅವರಿಂದ ‘ರಾಮಾಯಣ ದರ್ಶನಂ‘ ಮಹಾಕಾವ್ಯ ರಚನೆಯಾಯಿತು’ ಎಂದು ಅಭಿಪ್ರಾಯಪಟ್ಟರು.
‘ಕುಮಾರವ್ಯಾಸ ಭಾರತದಿಂದ ಪ್ರಭಾವಿತರಾಗಿ ನಾಗರಾಜರಾಯರು ಈ ಮಹಾಕಾವ್ಯ ರಚಿಸಿದ್ದರೂ, ತಮ್ಮ ಸ್ವಂತಿಕೆ ಬಿಟ್ಟುಕೊಟ್ಟಿಲ್ಲ. ಭಾಗವತ ಮತ್ತು ಮಹಾಭಾರತವನ್ನು ಮಿಶ್ರಣಗೊಳಿಸಿ ಕನ್ನಡದಲ್ಲಿ ಮಹಾಕಾವ್ಯ ರಚಿಸಿದವರು ವಿರಳ. ಸಂಸ್ಕೃತದಲ್ಲಿ ಈ ಕೆಲಸವನ್ನು ಮಧ್ವಾಚಾರ್ಯರು ಮಾಡಿದ್ದಾರೆ. ಈ ನೆಲೆಯಲ್ಲಿ ನಾಗರಾಜರಾಯರ ಕೆಲಸ ವಿಶಿಷ್ಟವಾದದ್ದು’ ಎಂದು ಹೇಳಿದರು.
ಮಹಾಕವಿ: ‘ಹೊಸಪೇಟೆಯಲ್ಲಿ ಒಬ್ಬ ಮಹಾಕವಿ ಇದ್ದಾರೆ ಎಂಬುದು ಗೊತ್ತೇ ಇರಲಿಲ್ಲ, ಕೃತಿ ರಚಿಸಿ 51 ವರ್ಷಗಳ ಬಳಿಕ ಅವರ ನಿಜವಾದ ಕಾವ್ಯಶಕ್ತಿ ಜಗತ್ತಿಗೆ ಗೊತ್ತಾಗಿದೆ. ಕುಮಾರವ್ಯಾಸನಿಗೆ ಹೋಲಿಸಿ ಹೇಳಬಹುದಾದಂತಹ ಮಹಾಕವಿಯ ಕೃತಿ ಬಿಡುಗಡೆ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯ’ ಎಂದು ಮಲ್ಲೇಪುರಂ ಹೇಳಿದರು.
‘ಭಗವದ್ಗೀತೆಯನ್ನು ಆಧರಿಸಿ ಕನ್ನಡದಲ್ಲಿ ಭಾಮಿನಿ ಷಟ್ಡದಿಯಲ್ಲಿ ಬರೆದವರು ಕೆಲವರು ಇದ್ದಾರೆ, ಆದರೆ ನಾಗರಾಜರಾಯರ ವಿಶಿಷ್ಟತೆ ಎಂದರೆ 18 ಅಧ್ಯಾಯಗಳ ಸಾರವನ್ನು ಸಂಗ್ರಹಿಸಿ ಕೊಟ್ಟ ಬಗೆ. ಒಂದೇ ಕೃತಿಯಲ್ಲಿ ಮಹಾಭಾರತ ಮತ್ತು ಭಾಗವತವನ್ನು ಇಷ್ಟು ಸೊಗಸಾಗಿ ಪೋಣಿಸಿ ಕೊಡುವುದಕ್ಕೆ ಮಹಾನ್ ಪ್ರತಿಭೆ ಬೇಕು, ಅವರು ಶಾಸ್ತ್ರ ಪ್ರತಿಭೆ ಮಾತ್ರವಲ್ಲ, ಜ್ಙಾನ ಪ್ರತಿಭೆಯೂ ಹೌದು. ಭ್ರಮರ ಗೀತೆಯನ್ನು ಕನ್ನಡದಲ್ಲಿ ಬರೆದ ಮತ್ತೊಬ್ಬ ಕವಿ ಇಲ್ಲ’ ಎಂದು ಮಲ್ಲೇಪುರಂ ಹೇಳಿದರು.
ಕೃತಿ ಹೊರಬರಲು ಪ್ರಯತ್ನಿಸಿದ ಎತ್ನಳ್ಳಿ ಮಲ್ಲಯ್ಯ ಅವರ ಶ್ರಮವನ್ನೂ ಮಲ್ಲೇಪುರಂ ಮತ್ತು ಪ್ರವಚನಕಾರ ಪಾವಗಡ ಪ್ರಕಾಶ ರಾವ್ ಕೊಂಡಾಡಿದರು.
ವಿಜಯನಗರ ಭಾರತ: ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ರವೀಂದ್ರನಾಥ ಮಾತನಾಡಿ, ಕುಮಾರವ್ಯಾಸ ಮಹಾಭಾರತ ಕಥನವನ್ನು ಭಾಮಿನಿ ಷಟ್ಪದಿಯಲ್ಲಿ ಬರೆದು ಗದುಗಿನ ಭಾರತ ಎಂದೇ ಖ್ಯಾತವಾಯಿತು, ನಾಗರಾಜರಾಯರು ಈ ಮಹಾಕಾವ್ಯ ಬರೆಯುವ ಮೂಲಕ ವಿಜಯನಗರ ಭಾರತ ಎಂಬುದಾಗಿ ಈ ಕೃತಿ ಮುಂದಿನ ದಿನಗಳಲ್ಲಿ ಖ್ಯಾತಿ ಗಳಿಸಲಿದೆ ಎಂದರು.
ಮಲ್ಲಯ್ಯನಿಂದಲೇ ಕೃತಿ ಹೊರಕ್ಕೆ: ಕೃತಿಕಾರ ರಂಗೋಪಂತ ನಾಗರಾಜರಾಯರು ಮಾತನಾಡಿ, ‘ನಾನು ನಿಜವಾಗಿಯೂ ಐದೇ ವರ್ಷದಲ್ಲಿ ಈ ಕೃತಿ ರಚಿಸಿ ಮುಗಿಸಿದ್ದೆ. ಆದರೆ 16 ವರ್ಷಗಳಲ್ಲಿ ಅದು ನಿಜವಾಗಿ ಪೂರ್ಣಗೊಂಡಿತು. ನನ್ನ 37ನೇ ವಯಸ್ಸಿಗೇ ಕೃತಿ ಸಿದ್ಧವಾಗಿತ್ತು. ಪ್ರಕಾಶನ ಮಾತ್ರ ಸಾಧ್ಯವಾಗಲಿಲ್ಲ. ಎತ್ನಳ್ಳಿ ಮಲ್ಲಯ್ಯ ಅವಿರತ ಶ್ರಮ ಹಾಕಿದ್ದರಿಂದಲೇ ನನ್ನ ಇಳಿಗಾಲದಲ್ಲಿ ಈ ಕೃತಿ ಹೊರಬರುವುದು ಸಾಧ್ಯವಾಯಿತು’ ಎಂದು ಭಾವುಕರಾಗಿ ನುಡಿದರು.
ಪಿವಿಎಸ್‌ಬಿಸಿ ಪ್ರೌಢಶಾಲೆಯ ಆಡಳಿತ ಮಂಡಳಿ ಸದಸ್ಯ ಪಿ.ಎನ್.ಶ್ರೀಪಾದ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕೃತಿ ಹೊರಬರಲು ಪ್ರಮುಖ ಕಾರಣಕರ್ತರಲ್ಲಿ ಒಬ್ಬರಾದ ಬೆಂಗಳೂರಿನ ವಕೀಲ ಮಾಣಿಕ್ಯ ಪ್ರಭು ಕೊನೆಗೂ ಕೃತಿ ಹೊರಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮೃತ್ಯುಂಜಯ ರುಮಾಲೆ, ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದರಾಮ ಕಲ್ಮಠ, ಡಿಡಿಪಿಯು ನಾಗರಾಜ ಹವಾಲ್ದಾರ್, ಕೊಪ್ಪಳ ಡಿಡಿಪಿಐ ಎಲ್.ಡಿ.ಜೋಷಿ, ಹೊಸಪೇಟೆ ಬಿಇಒ ಶೇಖರಪ್ಪ ಹೊರಪೇಟೆ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಗೊಗ್ಗ ಚನ್ನಬಸವರಾಜ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ದಿವಾಕರ, ವಿಜಯನಗರ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧುರಚನ್ನ ಶಾಸ್ತ್ರಿ, ಕನ್ನಡಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಪಿ.ವೆಂಕಟೇಶ್, ಉದ್ಯಮಿ ಪತ್ತಿಕೊಂಡ ಸಂತೋಷ್‌ನಾಗ್ ಇತರರು ಇದ್ದರು.
ಬೆಳಿಗ್ಗೆ ನಗರದ ವಡಕರಾಯ ದೇವಸ್ಥಾನದಿಂದ ವೆಂಕಟೇಶ್ವರ ಕಲ್ಯಾಣ ಮಂಟಪದ ವರೆಗೆ ಮಹಾಕಾವ್ಯದ ಮಹಾಯಾನ ರೂಪದಲ್ಲಿ ಗ್ರಂಥಕರ್ತರ ಮೆರವಣಿಗೆ ನಡೆಯಿತು. ಅಂಜಲಿ ಭರತನಾಟ್ಯ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಿತು.
ಪ್ರವಚನಕಾರ ಪಾವಗಡ ಪ್ರಕಾಶ ರಾವ್ ಮಾತನಾಡಿ, ಭಾಮಿನಿ ಷಟ್ಪದಿಯಲ್ಲಿರುವ ಮಹಾಕಾವ್ಯಗಳ ಮೇಲೆ ಉಪನ್ಯಾಸ ನೀಡುವ, ಗಮಕ ವಾಚನ ಮಾಡುವವರ ಸಂಖ್ಯೆ ಹೆಚ್ಚಬೇಕಾಗಿದೆ, ಇಲ್ಲವಾದರೆ ಈ ಮಹಾಕಾವ್ಯ ಸಂಪ್ರದಾಯ ನಶಿಸಿ ಹೋಗುವ ಅಪಾಯ ಇದೆ ಎಂದರು.
ಶಿವ ಮತ್ತು ವಿಷ್ಣುವಿನ ಆರಾಧಕರು ಒಬ್ಬರನ್ನೊಬ್ಬರು ದೂಷಿಸದೆ, ಸೌಹಾರ್ದದಿಂದ ವರ್ತಿಸಬೇಕು ಎಂಬ ಸಂದೇವನ್ನು ನಾಗರಾಜರಾಯರು ಶ್ರೀಕೃಷ್ಣನ ಮೂಲಕ ಹೇಳಿಸಿದ ರೀತಿ ಅದ್ಭುತವಾದುದು ಎಂದ ಅವರು, ಮಹಾಭಾರತದ ಕಥಾನಕವನ್ನು ಕೇವಲ 20 ಸಂಧಿಗಳಲ್ಲಿ ಅಡಕಗೊಳಿಸಿ, ಉಳಿದ 88 ಸಂಧಿಗಳಲ್ಲಿ ಭಾಗವತದ ಅಂಶಗಳನ್ನು ಭಾಮಿನಿ ಷಟ್ಟದಿಯಲ್ಲಿ ಕಟ್ಟಿಕೊಟ್ಟ ನಾಗರಾಜರಾಯರ ಪ್ರತಿಭೆ ಅನನ್ಯ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.