ADVERTISEMENT

ಉಚ್ಚಂಗಿದುರ್ಗ: ಟ್ರಾಫಿಕ್ ಸಮಸ್ಯೆಗೆ ಬಳಲಿದ ಭಕ್ತ ಸಮೂಹ

ಉತ್ಸವಾಂಬ ದರ್ಶನಕ್ಕೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 14:26 IST
Last Updated 14 ಜೂನ್ 2022, 14:26 IST
ಉತ್ಸವಾಂಬ ದರ್ಶನಕ್ಕೆ ಭಕ್ತರ ದಂಡು
ಉತ್ಸವಾಂಬ ದರ್ಶನಕ್ಕೆ ಭಕ್ತರ ದಂಡು   

ಅರಸೀಕೆರೆ: ಕಾರಹುಣ್ಣಿಮೆ ಅಂಗವಾಗಿ ಉಚ್ಚಂಗಿದುರ್ಗ ಗ್ರಾಮದ ಉತ್ಸವಾಂಬ ದೇವಿ ದರ್ಶನಕ್ಕೆ ಮಂಗಳವಾರ ಸಾವಿರಾರು ಭಕ್ತರು ಬಂದಿದ್ದರಿಂದ ಜನಜಾತ್ರೆ ಇತ್ತು.

ದಾವಣಗೆರೆ, ವಿಜಯನಗರ, ಬಳ್ಳಾರಿ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ಮಂಗಳವಾರ ಬೆಳಿಗ್ಗೆಯಿಂದಲೇ ಬೆಟ್ಟದ ಹರಿಹರ ಬಾಗಿಲು, ಪಾದಗಟ್ಟೆ ದ್ವಾರಗಳಿಂದ ಸಾಲುಗಟ್ಟಿ ದೇವಿ ದರ್ಶನಕ್ಕೆ ತೆರಳಿದರು.

ಮಧ್ಯಾಹ್ನ 12 ರ ವೇಳೆಗೆ ಅಸಂಖ್ಯ ಭಕ್ತ ಸಮೂಹ ಹರಿದು ಬಂತು. ದೇವಸ್ಥಾನ ಬೀದಿಯಲ್ಲಿ ಜನಜಂಗುಳಿ ನೆರೆದಿತ್ತು. ಭಕ್ತರ ನಿಯಂತ್ರಿಸಲು ಪೊಲೀಸರು, ಗೃಹ ರಕ್ಷಕರು, ದೇವಸ್ಥಾನ ಸಿಬ್ಬಂದಿ ಹರ ಸಾಹಸಪಟ್ಟರು.

ADVERTISEMENT

ದಾವಣಗೆರೆ-ಹರಪನಹಳ್ಳಿ ಮುಖ್ಯರಸ್ತೆಯು ವಾಹನಗಳಿಂದ ತುಂಬಿತ್ತು. ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಕೋಟೆ ಬಾಗಿಲು ಮೂಲಕ ತೆರಳುವ ದಾರಿಯಲ್ಲಿ ಬೈಕ್, ಆಟೋ, ಕಾರುಗಳು ಅಡ್ಡಾದಿಡ್ಡಿಯಾಗಿ ನಿಂತು ಪಾದಚಾರಿಗಳೂ ಸಂಚರಿಸದಂತಾಯಿತು.

ಕಾರ ಹುಣ್ಣಿಮೆ ಅಂಗವಾಗಿ ಉತ್ಸವಾಂಬ ದೇವಿಗೆ ವಿವಿಧ ವಾದ್ಯಗಳ ಮೂಲಕ ಗಂಗೆ ಪೂಜೆ ನೆರವೇರಿಸಲಾಯಿತು. ಫಲ, ಪುಷ್ಪಗಳಿಂದ ಅಲಂಕರಿಸಿ, ದೇವಿಗೆ ಕುಂಕುಮಾರ್ಚನೆ, ಎಲೆಪೂಜೆ, ಹೊಳೆಪೂಜೆ, ಕ್ಷೀರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.