ಹೊಸಪೇಟೆ (ವಿಜಯನಗರ): ಪೌರ ವೃಂದದ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದು ಸಹಿತ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜಿಲ್ಲೆಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಸತತ ಎರಡನೇ ದಿನವಾದ ಬುಧವಾರ ಸಹ ತಮ್ಮ ಮುಷ್ಕರ ಮುಂದುವರಿಸಿದ್ದಾರೆ.
ನೀರು ಪೂರೈಕೆ, ಬೀದಿ ದೀಪ ನಿರ್ವಹಣೆಯನ್ನು ಬಿಟ್ಟು ಉಳಿದ ಯಾವ ಕೆಲಸವನ್ನೂ ಸಿಬ್ಬಂದಿ ಮಾಡುತ್ತಿಲ್ಲ. ಹೀಗಾಗಿ ನಗರ ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ ಕಸದ ರಾಶಿ ಎತ್ತುವವರೇ ಇಲ್ಲದೆ ಇಡೀ ನಗರ, ಪಟ್ಟಣ ಪ್ರದೇಶಗಳು ಕಸಮಯವಾಗಿವೆ.
ಮಂಗಳವಾರ ಬೆಳಿಗ್ಗೆಯಿಂದ ಸಿಬ್ಬಂದಿ ಮುಷ್ಕರ ಆರಂಭಿಸಿದ್ದರು. ನಗರದಲ್ಲಿ ರಾತ್ರಿ ಸಹ ಧರಣಿ ಮುಂದುವರಿಯುವ ಮೂಲಕ ಅಹೋರಾತ್ರಿ ಪ್ರತಿಭಟನೆ ನಡೆಯಿತು.
‘ಬುಧವಾರ ಸಹ ಸಿಬ್ಬಂದಿ ಮುಷ್ಕರದಲ್ಲಿ ತೊಡಗಿದ್ದಾರೆ. ಶೇ 50ರಷ್ಟು ಮಂದಿ ಕೆಲಸಕ್ಕೆ ಬನ್ನಿ ಎಂದು ಹೇಳಿ ಅವರ ಮನವೊಲಿಸುವ ಪ್ರಯತ್ನ ನಡೆದಿದೆ’ ಎಂದು ನಗರಸಭೆ ಆಯುಕ್ತ ಸಿ.ಚಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಮುಖ ಬೇಡಿಕೆಗಳು
* ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದು
* ಕೆಜಿಐಡಿ, ಜಿಪಿಎಸ್ ಜ್ಯೋತಿ ಸಂಜೀವಿನಿ ಸಹಿತ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳನ್ನು ಪೌರ ನೌಕರರಿಗೂ ಜಾರಿ ಮಾಡುವುದು
* ಹೊರಗುತ್ತಿಗೆ ಮೇಲೆ ಕೆಲಸ ಮಾಡುವ ನೀರು ಸರಬರಾಜು ಸಿಬ್ಬಂದಿ, ಲೋಡರ್ಸ್, ಕ್ಲೀನರ್ಸ್, ಪೌರಕಾರ್ಮಿಕರು, ಸೂಪರ್‌ವೈಸರ್, ಕಂಪ್ಯೂಟರ್ ಆಪರೇಟರ್, ಜ್ಯೂನಿಯರ್ ಪ್ರೋಗ್ರಾಮರ್, ಇತರ ಗುತ್ತಿಗೆ/ಹೊರಗುತ್ತಿಗೆ ಸಿಬ್ಬಂದಿಗೆ ನೇರಪಾವತಿ ವೇತನ ವ್ಯವಸ್ಥೆ ಕಲ್ಪಿಸುವುದು, ಕಾಯಂ ಮಾಡುವುದು
*2022–23ನೇ ಸಾಲಿನಲ್ಲಿ ವಿಶೇಷ ನೇಮಕಾತಿಯಡಿಯಲ್ಲಿ ನೇಮಕಗೊಂಡವರಿಗೆ ಸ್ಥಳೀಯ ನಿಧಿಯಡಿಯಲ್ಲಿ ವೇತನ ಪಡೆಯಲು ಆದೇಶಿಸಿದ್ದನ್ನು ರದ್ದುಪಡಿಸಿ ಎಸ್‌ಎಫ್‌ಸಿ ಅನುದಾನದಡಿ ವೇತನ ಪಾವತಿ ಮಾಡುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.