
ಹೊಸಪೇಟೆ (ವಿಜಯನಗರ): ‘ವಿಜಯನಗರ ಜಿಲ್ಲೆಯಲ್ಲಿರುವ ವಿವಿಧ ಇಲಾಖೆಗಳು ಗುತ್ತಿಗೆದಾರರಿಗೆ ₹1,200 ಕೋಟಿ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿವೆ, ಈ ಜಿಲ್ಲೆಯೂ ಒಳಗೊಂಡಂತೆ ರಾಜ್ಯದಾದ್ಯಂತ ₹37,000 ಕೋಟಿ ಬಿಲ್ ಪಾವತಿ ಬಾಕಿ ಇದೆ. ತಕ್ಷಣ ಬಿಲ್ ಪಾವತಿ ಮಾಡಲು ಆಗ್ರಹಿಸಿ ಮಾರ್ಚ್ 6ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಹೇಳಿದರು.
ರಾಜ್ಯದ 18 ಜಿಲ್ಲೆಗಳ ಪ್ರವಾಸ ಮುಗಿಸಿದ ಬಳಿಕ 19ನೇ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ಭಾಗವಾಗಿ ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗುತ್ತಿಗೆದಾರರು ಬಹಳ ಕಷ್ಟದಲ್ಲಿದ್ದಾರೆ, ಆತ್ಮಹತ್ಯೆಯ ಹಾದಿ ತುಳಿಯುವ ಹಂತಕ್ಕೆ ಬಂದಿದ್ದಾರೆ, ಸರ್ಕಾರ ಇನ್ನಷ್ಟು ತಾಳ್ಮೆ ಪರೀಕ್ಷೆ ಮಾಡಬಾರದು’ ಎಂದರು.
‘ಹಾಲಿ ಸರ್ಕಾರ ಈ ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸಿರುವುದರಲ್ಲಿ ಅರ್ಥವಿಲ್ಲ. ಈ ಹಿಂದಿನ ಸರ್ಕಾರದ ಅವಧಿಯ ಕಾಮಗಾರಿಗಳಿಂದ ಸುಮಾರು ₹20 ಸಾವಿರ ಕೋಟಿ ಸಹಿತ ಈಗಿನ ಸರ್ಕಾರದ ಅವಧಿಯಲ್ಲಿ ಮತ್ತೆ 17,000 ಕೋಟಿ ಬರಬೇಕಿದೆ. ಕಳೆದ ಮೂರು ವರ್ಷಗಳಿಂದಲೂ ಬಿಲ್ ಪಾವತಿ ಬಾಕಿ ಇದೆ. ಈಗ ಹಿಂದಿನ ಸರ್ಕಾರವನ್ನು ದೂಷಿಸಿ ಮಾತನಾಡುವುದರಲ್ಲಿ ಅರ್ಥವಿಲ್ಲ’ ಎಂದು ಅವರು ಹೇಳಿದರು.
‘ರಾಜ್ಯದಲ್ಲಿ ತುಂಡು ಗುತ್ತಿಗೆ ಪದ್ಧತಿ ಈಗ ಇಲ್ಲ. ಪ್ಯಾಕೇಜ್ ಗುತ್ತಿಗೆ ಕ್ರಮವನ್ನು ಅನುಸರಿಸುವುದಕ್ಕೆ ಸಂಘದ ಪ್ರಬಲ ವಿರೋಧ ಇದೆ’ ಎಂದರು.
ಬಾಕಿ ಉಳಿಸಿಕೊಂಡ ಇಲಾಖೆಗಳು: ಲೋಕೋಪಯೋಗಿ ಇಲಾಖೆ ₹8,300 ಕೋಟಿ, ಜಲಸಂಪನ್ಮೂಲ ಇಲಾಖೆ ₹13,000 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ₹3,800 ಕೋಟಿ, ಸಣ್ಣ ನೀರಾವರಿ ಇಲಾಖೆ ₹3,000, ನಗರಾಭಿವೃದ್ಧಿ ಇಲಾಖೆ ₹ 2,000, ವಸತಿ, ವಕ್ಫ್ ಇಲಾಖೆ ₹2,600 ಕೋಟಿ ಕಾರ್ಮಿಕ ಇಲಾಖೆ ₹2,000, ಬಿಬಿಎಂಪಿ ₹ 1,6000 ಕೋಟಿ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ಸಂಘದ ಪದಾಧಿಕಾರಿಗಳಾದ ನಾಗಪ್ಪ, ರಾಜಶೇಖರ ಪಾಟೀಲ್, ಜಗದೀಶ್, ಕಿಚಡಿ ಶ್ರೀನಿವಾಸ್, ಕೇಶವ ರೆಡ್ಡಿ, ನಾಗರಾಜ, ಮಹೇಶ್ ಹಲಗೇರಿ, ಉಮಾಕಾಂತ್, ದೇವಿಪ್ರಸಾದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.