ಕೂಡ್ಲಿಗಿ ತಾಲ್ಲೂಕಿನ ಕಸಾಪುರದಲ್ಲಿ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಉದ್ಘಾಟಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೂಡ್ಲಿಗಿ (ವಿಜಯನಗರ ಜಿಲ್ಲೆ): ಹುಣಸೆ ಸಂಸ್ಕರಣೆಯಿಂದ ಮಹಿಳೆಯರಿಗೆ ಸಾಕಷ್ಟು ಉದ್ಯೋಗ ಸಿಗುತ್ತದೆ, ಹುಣಸೆ ಗಿಡ ಚೆನ್ನಾಗಿ ಬೆಳೆಯುವ ಭಾಗದಲ್ಲಿ 1 ಲಕ್ಷ ಗಿಡ ಬೆಳೆಸಿದರೆ ಅದಕ್ಕೆ ಸಿಎಸ್ಆರ್ ನಿಧಿ ಒದಗಿಸಿ ಕೊಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೂಡ್ಲಿಗಿ ತಾಲ್ಲೂಕಿನ ಕಸಾಪುರದಲ್ಲಿ ಶುಕ್ರವಾರ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಉದ್ಘಾಟಿಸಿ ಹಾಗೂ ಶೇಂಗಾ, ಹುಣಸೆಹಣ್ಣು ಸಂಸ್ಕರಣಾ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ಸಂಸದರ ನಿಧಿ ಜನರ ಜೀವನೋಪಾಯದ ದಾರಿ ತೋರಿಸುವ ಯೋಜನೆಗೆ ಬಳಕೆಯಾಗಬೇಕು ಎಂಬ ಪರಿಕಲ್ಪನೆಯಲ್ಲಿ ನಾನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಬಾರ್ಡ್ ಸಹಯೋಗದಲ್ಲಿ ಆಯಾ ಭಾಗದ ಬೆಳೆಗಳ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ವಿನಿಯೋಗಿಸಿದ್ದೇನೆ. ಇಂತಹ ಏಳು ಘಟಕಗಳು ಆರಂಭವಾಗಿದ್ದು, ಸಾಕಷ್ಟು ಜನರಿಗೆ ಇದರಿಂದ ಪ್ರಯೋಜನ ಸಿಗಲಿದೆ. ಒಂದು ಲಕ್ಷ ಹುಣಸೆ ಗಿಡ ಬೆಳೆದರೆ ಇನ್ನೂ 10 ಹುಣಸೆ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬಹುದು' ಎಂದರು.
ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರತಿಯೊಬ್ಬ ರೈತರಿಗೂ ಸಿಗುವಂತಾಗಬೇಕು, ಇದರಿಂದ ಬಹಳಷ್ಟು ಪ್ರಯೋಜನ ಇದೆ, ಎಸ್ಬಿಐ, ಜಿಲ್ಲಾ ಲೀಡ್ ಬ್ಯಾಂಕ್‌ಗಳು ಹಾಗೂ ಜಿಲ್ಲಾಡಳಿತ ಕಿಸಾನ್ ಕಾರ್ಡ್‌ಗಳನ್ನು ಪ್ರತಿ ರೈತ ಕುಟುಂಬಕ್ಕೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಚಿವೆ ಹೇಳಿದರು.
ವಿಜಯನಗರ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದವರ ಜನಸಂಖ್ಯೆ ಹೆಚ್ಚಿದೆ, ಶಿಕ್ಷಣ ಮಟ್ಟ ಕಡಿಮೆ ಇದೆ, ಹೀಗಾಗಿ ಇಲ್ಲಿ ಏಕಲವ್ಯ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸುವ ಅಗತ್ಯ ಇದೆ ಎಂದ ಅವರು, ಒನಕೆ ಓಬವ್ವನ ಧೈರ್ಯ ಈ ಭಾಗದ ಮಹಿಳೆಯರಲ್ಲಿ ಇರುವುದು ಸಹಜ, ಇದರ ಜತೆಗೆ ಜೀವನೋಪಾಯದ ಹಾದಿಯನ್ನೂ ಇಲ್ಲಿನ ಮಹಿಳೆಯರು ಕಂಡುಕೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.