ಹೊಸಪೇಟೆ (ವಿಜಯನಗರ): ರಾಜ್ಯದಲ್ಲಿರುವ ಮಾಜಿ ದೇವದಾಸಿಯರು, ಅವರ ಮಕ್ಕಳು ಮತ್ತು ಮೊಮ್ಮಕ್ಕಳ ಸಮೀಕ್ಷೆ ನಡೆಸುವಲ್ಲಿ ಹಲವು ಕೊರತೆಗಳು ಇರುವುದು ಇದೀಗ ಗೊತ್ತಾಗಿದೆ, ಹೀಗಾಗಿ ಮುಖ್ಯಮಂತ್ರಿ ಅವರು ಮಧ್ಯಪ್ರವೇಶಿಸಿ ಸಮೀಕ್ಷೆಯಲ್ಲಿರುವ ಹಲವು ಲೋಪದೋಷಗಳನ್ನು ಸರಿಪಡಿಸಬೇಕು ಎಂದು ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಒತ್ತಾಯಿಸಿದೆ.
ಸಂಘದ ಗೌರವಾಧ್ಯಕ್ಷ ಯು.ಬಸವರಾಜ ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1982ರ ನಂತರ ಹುಟ್ಟಿದವರನ್ನು ಸಮೀಕ್ಷೆಗೆ ಒಳಪಡಿಸುವುದಿಲ್ಲ ಎಂದು ಹೇಳುವುದು ಸರಿಯಲ್ಲ, ಎಲ್ಲರನ್ನೂ ಸಮೀಕ್ಷೆಗೆ ಒಳಪಡಿಸಲೇಬೇಕು ಎಂದರು.
2025ರ ದೇವದಾಸಿ ನಿಷೇಧ ಕಾಯ್ದೆ ಸಂಬಂಧ ಸರ್ಕಾರ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಅಧಿಸೂಚನೆ ಇಲ್ಲದ ಕಾರಣ ಅಧಿಕಾರಿಗಳು ಸರ್ಕಾರದ ಆದೇಶ ಪಾಲಿಸುತ್ತಿಲ್ಲ, ಸಮೀಕ್ಷೆಯಿಂದ ಯಾರೊಬ್ಬರೂ ಹೊರಗುಳಿಯದಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
19ರಿಂದ ಧರಣಿ: ಮಾಜಿ ದೇವದಾಸಿಯರ ಸಮೀಕ್ಷೆಯ ಲೋಪ ಸರಿಪಡಿಸಬೇಕು, ಮಾಜಿ ದೇವದಾಸಿಯರ ಪಿಂಚಣಿಯನ್ನು ₹10 ಸಾವಿರಕ್ಕೆ ಹೆಚ್ಚಿಸಬೇಕು, ವಿದ್ಯುತ್ ಖಾಸಗೀಕರಣ ಮತ್ತು ನರೇಗಾ ತಿದ್ದುಪಡಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಜ.19ರಿಂದ 22ರವರೆಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳ ಬಳಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಬಸವರಾಜ ಎಚ್ಚರಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷೆ ಹುಲಿಗೆಮ್ಮ, ಪ್ರಧಾನ ಕಾರ್ಯದರ್ಶಿ ಮಾಳಮ್ಮ, ಮುಖಂಡರಾದ ಕೆ.ನಾಗರತ್ನಮ್ಮ, ಎಂ.ಜಂಬಯ್ಯ ನಾಯಕ, ಸ್ವಾಮಿ, ಮಂಜುನಾಥ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.