
ಹಂಪಿ (ವಿಜಯನಗರ): ಹಂಪಿ ಕೇವಲ ಒಂದು ಪಾಳುಬಿದ್ದ ಸ್ಮಾರಕಗಳ ಪ್ರಾಚೀನ ಅಳುದುಳಿದ ನಗರ ಆಗಿರದೇ ಕರ್ನಾಟಕದ ಸಂಸ್ಕೃತಿಯ ಕಣ್ಮಣಿ ಕೇಂದ್ರಬಿಂದುವಾಗಿತ್ತು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಹಂಪಿ ಉತ್ಸವದ ಹಂಗವಾಗಿ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಗ್ರೀಕ್ ಮತ್ತು ಆಫ್ರಿಕಾ ಚರಿತ್ರೆ ಹೊರತುಪಡಿಸಿದರೆ ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಸಂಶೋಧನೆಗೆ ಒಳಪಟ್ಟಿದ್ದು ವಿಜಯನಗರ ಚರಿತ್ರೆ ಆಗಿತ್ತು ಎನ್ನುವುದು ಹೆಮ್ಮೆಯ ಸಂಗತಿ ಎಂದರು.
‘ವಿಜಯನಗರ ಸಾಮ್ರಾಜ್ಯ 171 ವರ್ಷಗಳಿಂದ ಸಂಶೋದನೆ ಮತ್ತು ಚರ್ಚೆಗೆ ಒಳಗಾಗಿದೆ, ಇದರಿಂದಾಗಿ ಹೊಸ ವಿಚಾರಗಳು ಬೆಳಕಿಗೆ ಬರುತ್ತಲೇ ಇವೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಕಾಲ ಘಟ್ಟದಲ್ಲಿ ಅತ್ಯಂತ ಹೆಸರು ಪಡೆದ ಸ್ಥಳವಾಗಿತ್ತು, ಮಾನವ ತನ್ನ ಆರಂಭದ ದಿನಗಳಲ್ಲಿ ನೆಲೆಕಂಡುಕೊಂಡ ಸ್ಥಳಗಳಲ್ಲಿ ಹಂಪಿಯೂ ಒಂದು ಆಗಿತ್ತು’ ಎಂದರು.
‘ರಾಷ್ಟ್ರಕೂಟರ ಕಾಲದಿಂದ ಹಂಪಿಯ ಚರಿತ್ರೆ ಆರಂಭವಾಗುತ್ತದೆ, ಮೌರ್ಯರ ಕಾಲದ ಬೌದ್ಧ ಧರ್ಮದ ಫಲಕಗಳೂ ಹಂಪಿಯಲ್ಲಿ ದೊರಕಿವೆ, ಪಟ್ಟಿಕೆಗಳನ್ನು ಕಮಲಾಪುರದ ವಸ್ತುಸಂಗ್ರಹಾಲಯದಲ್ಲಿ ಕಾಣಬಹುದಾಗಿದೆ’ ಎಂದು ಕುಲಪತಿ ಹೇಳಿದರು.
‘ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ದೊರಕಿರುವ ಅಶೋಕನ ಶಾಸನಗಳು, ನಡುಭಾಗದ ಈ ಪ್ರಸಿದ್ಧ ಐತಿಹಾಸಿಕ ಪ್ರದೇಶಗಳಲ್ಲಿ ಸಹ ದೊರಕುವ ಸಂಭವವಿದೆ, ಈ ಕುರಿತು ಸಂಶೋಧನೆ ನಡೆಸಬೇಕಿದೆ, ಸಂಶೋಧಕರು ಗಮನ ಹರಿಸಬೇಕಿದೆ’ ಎಂದು ಅವರು ಸಲಹೆ ನೀಡಿದರು.
‘ವಿಜಯನಗರ ಸಾಮ್ರಾಜ್ಯವನ್ನು ಶಾಸನಗಳಲ್ಲಿ ಅರಸರು ಕರ್ನಟ ಸಾಮ್ರಾಜ್ಯ ಎಂದು ಕರೆದಿದ್ದಾರೆ. ಕನ್ನಡ ನಾಡಿನ ಮೇಲೆ ಪ್ರೀತಿ ಇದರಿಂದ ನೋಡಬಹುದಾಗಿದೆ. ಕರ್ನಾಟ ಸಾಮ್ರಾಜ್ಯದ ಬೆಳವಣಿಗೆಯಲ್ಲಿ ಮಂತ್ರಿ ತಿಮ್ಮರಸರ ಪಾತ್ರ ದೊಡ್ಡದು, ಅವರ ಪುತ್ರ ಕೊಂಡವರಸಯ್ಯ ಅವರನ್ನು ತೆಲುಗಿನ ಶಾಸನ 'ಕನ್ನಡ ರತ್ನ' ಎಂದು ಕರೆದಿದೆ. ಕಲಬುರ್ಗಿಯವರು 'ಕನ್ನಡ ಅರಸರ ಅಕನ್ನಡ ಪ್ರಜ್ಞೆ' ಎಂಬ ಒಂದು ಕೃತಿ ಬರೆದಿದ್ದರು, ಅವರು ಈ ತೆಲುಗಿನ ಶಾಸನಗಳನ್ನು ಗಮನಿಸಿದ್ದರೆ ಅವರ ಹೇಳಿಕೆಯನ್ನು ಬದಲಿಸುತ್ತಿದ್ದರೇನೊ ಎನ್ನುವ ಅನಿಸಿಕೆ ನನ್ನದು’ ಎಂದು ಪರಮಶಿವಮೂರ್ತಿ ಹೇಳಿದರು.
‘ಕರ್ನಾಟ ಸಾಮ್ರಾಜ್ಯ ವಿಶ್ವಮಟ್ಟದಲ್ಲಿ ಚರ್ಚೆ ಆಗಿದ್ದು ರಾಜಕೀಯ ಕಾರಣಕ್ಕಾಗಿ, ಅರಸರ ನಡುವಿನ ಭಿನ್ನಾಭಿಪ್ರಾಯಕ್ಕಾಗಿ ಅಲ್ಲ, ಧರ್ಮ, ಭಾಷೆ, ಸಂಸ್ಕೃತಿ ಇವೆಲ್ಲವೂ ಬೆರಕೆಯಾಗುತ್ತದೆ, ಈ ಮುಖ್ಯ ಕಾರಣದಿಂದ 171 ವರ್ಷಗಳಿಂದ ಸತತವಾಗಿ ಚರ್ಚೆಯಾಗುತ್ತಾಲೇ ಬಂದಿದೆ. ಅದಕ್ಕಾಗಿಯೇ ಪುರಾತನ ಕಾಲದಿಂದಲೂ ಆಧುನಿಕ ಕಾಲದವರೆಗೂ ಹೆಸರು ಮಾಡಿದೆ, ಅದಕ್ಕಾಗಿ ಪದೇ ಪದೇ ಚರ್ಚೆಗೆ ಒಳಗಾಗುತ್ತಲೇ ಇದೆ. ಹಂಪಿ ಒಂದು ಜನಾಂಗದ, ಧರ್ಮದ ಮತ್ತು ಸಂಸ್ಕೃತಿ ಚರಿತ್ರೆ ಅಲ್ಲ, ಅದು ಸಮ ಸಮಾಜದ ಸಂಸ್ಕೃತಿ, ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ಸಂಸ್ಕೃತಿಯ ಬೀಜ ಈ ನೆಲದಲ್ಲಿ ಹುಟ್ಟಿದೆ’ ಎಂದು ವಿಶ್ಲೇಷಿಸಿದರು.
‘ವೈವಿಧ್ಯಮಯ ಕುಲಕುಸುಬಗಾರರು ಇದ್ದರು, ದಕ್ಷಿಣ ಭಾರತದ ಆ ಕಾಲದ ಶರಣರ, ಸ್ಥಳದ ಪ್ರಾಮುಖ್ಯತೆ ಚಾರಿತ್ರಿಕ ದಾಖಲೆಯ ಕೃತಿ ವಿಜಯನಗರ ಕಾಲದಲ್ಲಿ ದಾಖಲಿಸಲಾಗಿದೆ, ಮಧ್ಯಕಾಲೀನ ಕರ್ನಾಟಕದಲ್ಲಿ ಸಾಹಿತ್ಯ ಸಂಸ್ಕೃತಿ ಧರ್ಮಕ್ಕೆ ಹೊಸತನ ಕೊಟ್ಟ ಶ್ರೇಯಸ್ಸು ವಿಜಯನಗರ ಸಾಮ್ರಾಜ್ಯಕ್ಕೆ ಸಲ್ಲುತ್ತದೆ. ಕೆಳ ಸ್ತರದ ಜನಸಮುದಾಯಕ್ಕೆ ಕೂಡ ವಿಜಯನಗರಯ ಆಡಳಿತದಲ್ಲಿ ಅವಕಾಶ ಮಾಡಿಕೊಟ್ಟಿತ್ತು, ಇದಕ್ಕೆ ಅನೇಕ ಶಾಸನಗಳು ರುಜುವಾತು ಪಡಿಸುತ್ತದೆ’ ಎಂದರು.
‘ಇನ್ನೂ ವಿಜಯನಗರದ ಚರಿತ್ರೆಯ ಸಂಶೋಧನೆಗಳು ಆಗಬೇಕಿದೆ, ಚಾರಿತ್ರಿಕ ದಾಖಲೆಗಳ ಕೊರತೆ ಇದೆ, ತೆಲುಗು ಪರ್ಶಿಯನ್ , ತಮಿಳು ಈ ಮೂರು ಭಾಷೆಗಳ ದಾಖಲೆಗಳನ್ನು ಮರು ಪರಿಶೀಲಿಸುವ ಅಗತ್ಯ ಇದೆ.ವಿಜಯನಗರ ಚರಿತ್ರೆ ಮರುರಚಿಸಬೇಕಿದೆ. ಇದುವರೆಗೂ ವಿಜಯನಗರ ಚರಿತ್ರೆಯಲ್ಲಿ ಕೇವಲ ಅರಸರನ್ನು ವೈಭವೀಕರಿಸಲಾಗಿದೆ, ಅವರನ್ನೇ ಮೆರೆಸಲಾಗಿದೆ. ಅವರ ಕೈಕೆಳಗೆ ಕೆಲಸ ಮಾಡಿದ ಅರಸರಿಗೆ ಕೀರ್ತಿ ತಂದ ಗ್ರಾಮ ಮುಖಂಡರು, ಗ್ರಾಮವಾಸಿಗಳು ಅಧಿಕಾರಿಗಳು ಅವರ ಚರಿತ್ರೆಯನ್ನು ಬೆಳಕಿಗೆ ತರುವ ಅಗತ್ಯ ಇದೆ’ ಎಂದು ಕುಲಪತಿ ಹೇಳಿದರು.
'ಪ್ರೌಢದೇವರಾಯನ ಕಾಲದ ಸಾಹಿತ್ಯ' ಕುರಿತು ಪ್ರೊ.ಎಂ.ಎಂ.ಶಿವಪ್ರಕಾಶ್, 'ವಿಜಯನಗರ ಕಾಲದ ಸಂವಹನ ವ್ಯವಸ್ಥೆ' ಕುರಿತು ಪ್ರೊ.ವೆಂಕನಗೌಡ ಪಾಟೀಲ್, 'ವಿಜಯನಗರ ಕಾಲದ ಮಹಿಳೆಯರ ಸ್ಥಿತಿಗತಿ' ಕುರಿತು ಟಿ.ಎಚ್.ಎಂ. ಅಕ್ಕನಾಗಮ್ಮ, ಹಂಪಿಯ ಪಾವಿತ್ರ್ಯತೆ ಉಳಿಸುವಲ್ಲಿ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಮಠದ ಕೊಡುಗೆ ಕುರಿತು ಶರಣಯ್ಯ ಎಸ್.ಚರೇದ ಮಾತನಾಡಿದರು.
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ.ಡಾಣಿ ಅಧ್ಯಕ್ಷತೆ ವಹಿಸಿದ್ದರು. ಸಿಂಧನೂರಿನ ಪ್ರೊ.ಜಾಜಿ ದೇವೇಂದ್ರಪ್ಪ ಆಶಯ ಮಾತುಗಳನ್ನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎಸ್.ಶ್ವೇತಾ, ಡಿಡಿಪಿಇ ವೆಂಕಟೇಶ ರಾಮಚಂದ್ರಪ್ಪ, ನೋಡಲ್ ಅಧಿಕಾರಿ ನಾಗರಾಜ ಹವಾಲ್ದಾರ್, ಕರ್ನಾಟಕ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಕೊಪ್ಪಳದ ಶರಣೇಗೌಡ ಪೊಲೀಸ್ ಪಾಟೀಲ್, ತಾಲ್ಲೂಕು ಅಧ್ಯಕ್ಷ ಗುಂಡಿ ಮಾರುತಿ, ಕೆ.ಎಂ.ವೀರೇಶ್, ಎಚ್.ಎಂ.ವಿದ್ಯಾವತಿ ಇದ್ದರು.
ಸಭಿಕರ ಕೊರತೆ
ಎಂದಿನಂತೆ ಸಾಹಿತ್ಯ ಗೋಷ್ಠಿಗೆ ಸಭಿಕರ ಕೊರತೆ ಎದುರಾಗಿತ್ತು. ಕೊರತೆ ನೀಗಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರನ್ನು ಕರೆತಂದು ಆಸನಗಳನ್ನು ಭರ್ತಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.