ಹೂವಿನಹಡಗಲಿ: ಪಟ್ಟಣ ಹೊರವಲಯ ಹುಲಿಗುಡ್ಡದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಅಕಾಡೆಮಿಕ್ ಬ್ಲಾಕ್ 1 ಮತ್ತು 2ರಲ್ಲಿ ಪ್ರತ್ಯೇಕ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಎರಡು ವರ್ಷದಿಂದ ಅವು ಸ್ಥಗಿತಗೊಂಡಿವೆ. ದುರಸ್ತಿಗೆ ಕ್ರಮ ವಹಿಸದೇ ಇರುವುದರಿಂದ ಕಾಲೇಜಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಬಾಯಾರಿಕೆ ನೀಗಿಸಿಕೊಳ್ಳಲು ವಿದ್ಯಾರ್ಥಿಗಳು ಮನೆ, ಹಾಸ್ಟೆಲ್‌ಗಳಿಂದಲೇ ಬಾಟಲಿಗಳಲ್ಲಿ ನೀರು ಕೊಂಡೊಯ್ಯುವ ಅನಿವಾರ್ಯತೆ ಇದೆ.
2007ರಲ್ಲಿ ಮಂಜೂರಾಗಿರುವ ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿದೆ. ಆರಂಭಿಕ ಎರಡು ವರ್ಷ ಸ್ಥಳಾಂತರ ಭೀತಿಯಲ್ಲಿದ್ದ ಕಾಲೇಜಿಗೆ ಹುಲಿಗುಡ್ಡ ಪ್ರದೇಶದಲ್ಲಿ ಸುಸಜ್ಜಿತವಾದ ಆಡಳಿತ ಮತ್ತು ಶೈಕ್ಷಣಿಕ ವಿಭಾಗಗಳ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಶೈಕ್ಷಣಿಕ ಬ್ಲಾಕ್‌ಗಳಿಗೆ ಸಮರ್ಪಕ ನೀರು ಪೂರೈಕೆ ಇಲ್ಲದೇ ಮೂತ್ರಾಲಯ, ಶೌಚಾಲಯಗಳನ್ನು ಬಂದ್ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿನಿಯರ ಸಂಕಷ್ಟ ಹೇಳತೀರದಾಗಿದೆ. ನೀರಿಲ್ಲದೇ ಬಳಕೆ ಮಾಡಿರುವ ಮೂತ್ರಾಲಯಗಳು ದುರ್ನಾತ ಬೀರುತ್ತಿವೆ. ಕುಡಿಯುವ ನೀರು, ಶೌಚಾಲಯ, ಮೂಲಸೌಕರ್ಯ ಕಲ್ಪಿಸಿಕೊಡುವಲ್ಲಿ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಪಟ್ಟಣದಿಂದ ಕಾಲೇಜು 5 ಕಿ.ಮೀ. ದೂರದಲ್ಲಿದೆ. ಪಟ್ಟಣದಲ್ಲಿರುವ ವಸತಿ ನಿಲಯ, ಪಿಜಿಗಳಿಂದ ವಿದ್ಯಾರ್ಥಿಗಳು ನಿತ್ಯ ಕಾಲೇಜಿಗೆ ಹೋಗಿ ಬರುವ ವ್ಯವಸ್ಥೆ ಇದೆ. ಕಾಲೇಜಿನ ಎರಡು ಬ್ಲಾಕ್‌ಗಳಲ್ಲಿ ಕ್ಯಾಂಟೀನ್‌ಗಳನ್ನು ಸಿದ್ಧಪಡಿಸಲಾಗಿದೆ. ನಿರ್ವಹಣೆಯನ್ನು ವಹಿಸಿಕೊಡದೇ ಇರುವುದರಿಂದ ಕಟ್ಟಡಗಳು ಹಾಳು ಬಿದ್ದಿವೆ.
ಪಟ್ಟಣದ ಹೊರವಲಯದಲ್ಲಿರುವ ಕಾಲೇಜು ಬಳಿ ಕೋರಿಕೆಯ ಬಸ್ ನಿಲುಗಡೆ ಇದ್ದರೂ ಎಲ್ಲ ಬಸ್‌ಗಳು ಅಲ್ಲಿ ನಿಲ್ಲಿಸುವುದಿಲ್ಲ. ‘ಶಕ್ತಿ’ ಯೋಜನೆ ಜಾರಿ ಬಳಿಕ ಬಸ್‌ಗಳು ತುಂಬಿ ತುಳುಕುವುದರಿಂದ ಕಾಲೇಜಿಗೆ ಹೋಗಿ ಬರಲು ತೊಂದರೆಯಾಗುತ್ತದೆ. ಬಸ್‌ಗಾಗಿ ಕಾಯುವುದೇ ಕೆಲಸವಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಶುದ್ಧ ನೀರಿನ ಘಟಕಗಳ ದುರಸ್ತಿಗೆ ಕ್ರಿಯಾ ಯೋಜನೆ ರೂಪಿಸಿದ್ದೇವೆ. ಶೌಚಾಲಯಗಳ ದುರಸ್ತಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳುತ್ತೇವೆ.-ಅರುಣ್ ಪ್ರಾಚಾರ್ಯ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹೂವಿನಹಡಗಲಿ
500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜಿಗೆ ತಕ್ಷಣ ಕುಡಿಯುವ ನೀರು ಶೌಚಾಲಯ ಅಗತ್ಯ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು-ರಹಮತ್ ಬೀರಬ್ಬಿ, ಸಂಚಾಲಕ ಭಗತ್ ಸಿಂಗ್ ಸಾಂಸ್ಕೃತಿಕ ವೇದಿಕೆ ಹೂವಿನಹಡಗಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.