ADVERTISEMENT

ಹೊಸಪೇಟೆ: ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 7:32 IST
Last Updated 22 ಆಗಸ್ಟ್ 2024, 7:32 IST
   

ಹೊಸಪೇಟೆ: ರಾಜ್ಯಪಾಲರ ವಿರುದ್ಧ ಅವಾಚ್ಯ ಮಾತುಗಳನ್ನು ಆಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಗುರುವಾರ ಇಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿರುವ ಪಕ್ಷದ ಏಕೈಕ ಶಾಸಕ ಕೃಷ್ಣ ನಾಯ್ಕ್ ಮತ್ತು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ ನೇತೃತ್ವದಲ್ಲಿ ಇಲ್ಲಿನ ಪಕ್ಷದ ಕಚೇರಿಯಿಂದ ತಹಶೀಲ್ದಾರ್  ಕಚೇರಿಯವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಧಿಕ್ಕಾರ ಕೂಗಿದರು ಹಾಗೂ ರಾಜ್ಯಪಾಲರ ವಿರುದ್ಧ ಅವಾಚ್ಯ ಹೇಳಿಕೆ ನೀಡಿರುವ ನಾಯಕರನ್ನು ಜಾತಿ ನಿಂದನೆ ಮತ್ತು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಎಲ್ಡೆಡೆಯಂತೆ ಜಿಲ್ಲೆಯಲ್ಲಿ ಸಹ ಕಾಂಗ್ರೆಸ್ ಕಾರ್ಯಕರ್ತರು ಪೂರ್ವಯೋಜಿತ ಪ್ರತಿಭಟನೆ ನಡೆಸಲು ಸಂಚು ರೂಪಿಸಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಹಾಗೂ ರಾಜ್ಯಪಾಲರಿಗೆ ಅಗೌರವ ತೋರಿಸುತ್ತಿರುವ ಜಿಲ್ಲೆಯ ಕಾಂಗ್ರೆಸ್ ನಾಯಕರನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಕಳುಹಿಸಿಕೊಡಲಾಯಿತು.

ADVERTISEMENT

187 ಕೋಟಿ ಲೂಟಿ: ಶಾಸಕ ಕೃಷ್ಣ ನಾಯ್ಕ್ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಶೇ 40 ಸರ್ಕಾರ ಎಂದು ಕಾಂಗ್ರೆಸ್ ದೂರುತ್ತಿತ್ತು. ಆದರೆ ಇಂದು ಇದೇ ಕಾಂಗ್ರೆಸ್ ಸರ್ಕಾರದಲ್ಲಿ ಶೇ 70ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ, ಅದಕ್ಕಿಂತಲೂ ಮಿಗಿಲಾಗಿ ನಿಗಮಗಳ ಹಣವನ್ನೇ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಈಗಾಗಲೇ ತಿಳಿದಿರುವಂತೆ ₹187 ಕೋಟಿ ಹಣವನ್ನು ವರ್ಗಾಯಿಸಿ ತೆಲಂಗಾಣ, ಬಳ್ಳಾರಿ ಚುನಾವಣೆಯ ವೆಚ್ಚ ಸರಿದೂಗಿಸಲಾಗಿದೆ ಎಂದು ಆರೋಪಿಸಿದರು.

‘ಭ್ರಷ್ಟಾಚಾರ ಆರೋಪ ಸದನದಲ್ಲೇ ಎದುರಾದಾಗ ಅಲ್ಲಿ ಉತ್ತರಿಸಲಾಗದೆ ಕಲಾಪ ಮುಂದೂಡುವಂತೆ ಮಾಡಿಬಿಟ್ಟರು. ಇದೀಗ ರಾಜ್ಯಪಾಲರನ್ನೇ ಖಳನಾಯಕನ ರೀತಿಯಲ್ಲಿ ಬಿಂಬಿಸಿ ತನಿಖೆಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ರಾಜ್ಯಪಾಲರಿಗೆ ಬೆದರಿಕೆ ಹಾಕಿ ತನಿಖೆಯಿಂದ ತಪ್ಪಿಸಿಕೊಳ್ಳುವ ಅವರ ಯತ್ನ ಫಲಿಸುವುದಿಲ್ಲ’ ಎಂದು ಶಾಸಕರು ಹೇಳಿದರು.

ಪಕ್ಷದ ಮುಖಂಡರಾದ ಶಂಕರ ಮೇಟಿ, ಅಯ್ಯಾಳಿ ತಿಮ್ಮಪ್ಪ, ಕೆ.ಎಸ್.ರಾಘವೇಂದ್ರ, ಕಿಚಿಡಿ ಕೊಟ್ರೇಶ್‌, ಬಲ್ಲಾಹುಣ್ಸಿ ರಾಮಣ್ಣ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.