ADVERTISEMENT

ಹೂವಿನಹಡಗಲಿ: ತುಂಗಭದ್ರೆಯಲ್ಲಿ ಮರಳು ತೆಪ್ಪಯಾನ!

ನದಿಯ ಎಡ ದಂಡೆಯ ದಂಧೆಕೋರರು ಬಲದಂಡೆಗೆ ಲಗ್ಗೆ: ಗಡಿ ಮೀರಿದ ಮರಳು ಅಕ್ರಮ

ಕೆ.ಸೋಮಶೇಖರ
Published 19 ನವೆಂಬರ್ 2024, 4:55 IST
Last Updated 19 ನವೆಂಬರ್ 2024, 4:55 IST
ಹೂವಿನಹಡಗಲಿ ತಾಲ್ಲೂಕಿನ ಬ್ಯಾಲಹುಣ್ಸಿ, ನಂದಿಗಾವಿ ಬಳಿ ತುಂಗಭದ್ರಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರುಳು ಗಣಿಗಾರಿಕೆ  –ಪ್ರಜಾವಾಣಿ ಚಿತ್ರ
ಹೂವಿನಹಡಗಲಿ ತಾಲ್ಲೂಕಿನ ಬ್ಯಾಲಹುಣ್ಸಿ, ನಂದಿಗಾವಿ ಬಳಿ ತುಂಗಭದ್ರಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರುಳು ಗಣಿಗಾರಿಕೆ  –ಪ್ರಜಾವಾಣಿ ಚಿತ್ರ   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಬ್ಯಾಲಹುಣ್ಸಿ, ನಂದಿಗಾವಿ ಬಳಿ ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲೇ ತೆಪ್ಪಗಳಲ್ಲಿ ಮರಳು ತುಂಬಿ ಸಾಗಿಸುವ ಅಕ್ರಮ ದಂದೆ ನಿರಾತಂಕವಾಗಿ ನಡೆದಿದೆ.

ನದಿಯ ಎಡ ದಂಡೆ ಹಾವೇರಿ ಜಿಲ್ಲೆಯ ಮರಳು ದಂದೆಕೋರರು ಬಲದಂಡೆಯ ಹೂವಿನಹಡಗಲಿ ತಾಲ್ಲೂಕು ವ್ಯಾಪ್ತಿಯ ನದಿಪಾತ್ರಕ್ಕೆ ಲಗ್ಗೆ ಇಟ್ಟಿದ್ದಾರೆ. ನಿತ್ಯವೂ 50ಕ್ಕೂ ಹೆಚ್ಚು ತೆಪ್ಪಗಳನ್ನು ಬಳಸಿ ತಾಲ್ಲೂಕು ವ್ಯಾಪ್ತಿಯ ಮರಳನ್ನು ಎಡ ದಂಡೆಗೆ ಸಾಗಿಸುತ್ತಿದ್ದಾರೆ. ಬೆಳಗಿನ ಜಾವ ಆರಂಭವಾಗುವ ಈ ಚಟುವಟಿಕೆ ಸಂಜೆವರೆಗೂ ನಡೆಯುತ್ತದೆ.

ನದಿಯ ಹರಿವು, ಆಳವಾದ ಗುಂಡಿಗಳಿರುವ ಕಾರಣ ಎಡ ದಂಡೆಯಲ್ಲಿ ಮರಳು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ. ಹಾಗಾಗಿ ಹಾವೇರಿ ಜಿಲ್ಲೆಯ ಮರಳು ದಂದೆ ನಡೆಸುವವರು ಹೂವಿನಹಡಗಲಿ ತಾಲ್ಲೂಕು ವ್ಯಾಪ್ತಿಯ ಆಯಕಟ್ಟಿನ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಮರಳು ದೋಚುತ್ತಿದ್ದಾರೆ.

ADVERTISEMENT

‘ತಾಲ್ಲೂಕಿನ ಬ್ಯಾಲಹುಣ್ಸಿ, ನಂದಿಗಾವಿ ಬಳಿಯ ನದಿಪಾತ್ರದಲ್ಲಿ ತೆಪ್ಪ ಮತ್ತು ತಗಡಿನ ಅಡ್ಡೆಗಳಲ್ಲಿ ಮರಳು ತುಂಬಿಸಿಕೊಂಡು ಹಾವೇರಿ ಜಿಲ್ಲೆಯ ತೆರದಹಳ್ಳಿ, ಮೇವುಂಡಿ ತೀರಕ್ಕೆ ಸಾಗಿಸುತ್ತಾರೆ. ಅಲ್ಲಿಂದ ಲಾರಿ, ಟ್ರ್ಯಾಕ್ಟರ್‌ಗಳಿಗೆ ತುಂಬಿಸಿ ಬೇರೆಡೆ ಸಾಗಿಸುತ್ತಾರೆ. ತುಂಗಭದ್ರಾ ನದಿಯಲ್ಲಿ ನಿತ್ಯವೂ ಮರಳು ತೆಪ್ಪಗಳ ಯಾನ ಕಂಡು ಬಂದರೂ ಈ ಅಕ್ರಮಕ್ಕೆ ಯಾರೂ ಕಡಿವಾಣ ಹಾಕುತ್ತಿಲ್ಲ’ ಎಂದು ಬ್ಯಾಲಹುಣ್ಸಿ ಗ್ರಾಮಸ್ಥರು ದೂರಿದ್ದಾರೆ.

‘ನದಿಯಲ್ಲಿ ಮುಳುಗಿ ಮರಳು ಎತ್ತುವ ಸಾಮರ್ಥ್ಯವಿರುವ ಬಿಹಾರ, ಉತ್ತರ ಪ್ರದೇಶದ ಕಾರ್ಮಿಕರು ಹಾಗೂ ಸ್ಥಳೀಯ ಮೀನುಗಾರರನ್ನು ಈ ದಂದೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಮರಳು ಅಕ್ರಮ ಸಂಪೂರ್ಣ ನಿಲ್ಲದಿದ್ದರೂ, ನಿಯಂತ್ರಣದಲ್ಲಿದೆ. ಗಡಿ ದಾಟಿ ಬರುವ ಎಡದಂಡೆಯ ದಂದೆಕೋರರನ್ನು ತಡೆಯುವಲ್ಲಿ ಎರಡೂ ಕಡೆಯ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಹಾಡಹಗಲೇ ಅಕ್ರಮ ದಂದೆ ನಿರಾತಂಕವಾಗಿ ನಡೆಯುತ್ತಿರುವುದರಿಂದ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ಮೂಡುತ್ತಿದೆ’ ಎಂದು ಅವರು ಹೇಳಿದರು.

ಕೂಡಲೇ ಅಧಿಕಾರಿಗಳು ಮರಳು ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲಿ, ಜನಸಾಮಾನ್ಯರಿಗೆ ಸುಲಭವಾಗಿ ಮರಳು ದೊರಕಿಸಿ ಕೊಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಟಾಸ್ಕ್ ಪೋರ್ಸ್ ಸಭೆ ನಡೆಸಿ ಮರಳು ಅಕ್ರಮ ತಡೆಗೆ ತಂಡ ರಚಿಸುತ್ತೇವೆ. ನದಿ ತೀರದುದ್ದಕ್ಕೂ ಕಣ್ಗಾವಲು ಇರಿಸಲು ಕ್ರಮ ಕೈಗೊಳ್ಳುತ್ತೇವೆ.
–ಜಿ. ಸಂತೋಷಕುಮಾರ್, ತಹಶೀಲ್ದಾರ್ ಹೂವಿನಹಡಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.