
ಹೊಸಪೇಟೆ (ವಿಜಯನಗರ): ಒಳಮೀಸಲಾತಿ ವಿಚಾರದಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಅತ್ಯಂತ ವೈಜ್ಞಾನಿಕವಾಗಿತ್ತು, ಸರ್ಕಾರ ಅದನ್ನು ಯಥಾವತ್ತಾಗಿ ಜಾರಿಗೆ ತರುವ ಬದಲಿಗೆ ಅರೆಬರೆಯಾಗಿ ಒಳಮೀಸಲಾತಿ ವರ್ಗೀಕರಣ ಮಾಡಿದೆ, ಇದನ್ನು ಒಪ್ಪಲಾಗದು. ರಾಜ್ಯವ್ಯಾಪಿ ಪ್ರತಿಭಟನೆಗೆ ಸಿದ್ಧತೆ ನಡೆದಿದೆ ಎಂದು ಮಾದಿಗ, ಸಮಗಾರ, ದೋಹರ, ದಕ್ಕಲಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟ ಹೇಳಿದೆ.
ಒಕ್ಕೂಟದ ಸದಸ್ಯ ಬಲ್ಲಾಹುಣ್ಸಿ ರಾಮಣ್ಣ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 30 ವರ್ಷಗಳ ಹೋರಾಟ, ಸುಪ್ರೀಂ ಕೋರ್ಟ್‌ನ ಆದೇಶವನ್ನು ಮೂಲೆಗುಂಪು ಮಾಡಿ ರಾಜಕೀಯ ಒತ್ತಡಕ್ಕೆ ಮಣಿದು ಈಗಿನ ವರ್ಗೀಕರಣ ಮಾಡಲಾಗಿದೆ. ಸರ್ಕಾರ ತಕ್ಷಣ ಒಳಮೀಸಲಾತಿಯ ಗೊಂದಲ ಸರಿಪಡಿಸಬೇಕು ಎಂದರು.
‘ಕಾಂಗ್ರೆಸ್ ಸರ್ಕಾರ ಎಲ್ಲ 101 ಜಾತಿಗಳಿಗೆ ಸಾಮಾಜಿಕ ನ್ಯಾಯ ಹಂಚುವಲ್ಲಿ ವಿಫಲವಾಗಿದೆ. ಓಟ್‌ಬ್ಯಾಂಕ್ ರಾಜಕಾರಣ ಮೇಲುಗೈ ಸಾಧಿಸಿದೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಗೊಂದಲ ಹಾಗೆಯೇ ಮುಂದುವರಿದಿದೆ. ಒಳಮೀಸಲಾತಿ ಬಗ್ಗೆ ಮಸೂದೆ ರೂಪಿಸಿ ಸಮರ್ಪಕ ಚರ್ಚೆಗೂ ಅವಕಾಶ ನೀಡದೆ ಸಂಖ್ಯಾಬಲದಿಂದ ಅಂಗೀಕಾರ ಪಡೆದಿದೆ. ರಾಜಕೀಯ ಒತ್ತಡಗಳಿಗೆ ಮಣಿದು ಬಡ್ತಿ ಅವಕಾಶಗಳನ್ನು ಒಳಮೀಸಲಾತಿಯಿಂದ ಹೊರಗಿಡಲಾಗಿದೆ’ ಎಂದು ಅವರು ರಾಮಣ್ಣ ದೂರಿದರು.
‘ಅಲೆಮಾರಿಗಳನ್ನು ಬಲಿಷ್ಠ ಜಾತಿಗಳ ಜತೆಗೆ ಹಾಕಿದ್ದು ಅನ್ಯಾಯ. ಮಾದಿಗ ಸಂಬಂಧಿತ 29 ಜಾತಿಗಳಿದ್ದು, ಪ್ರವರ್ಗ 1ರಲ್ಲಿ 16 ಜಾತಿಗಳಿವೆ. ಸಿಂಧೊಳ್ಳು, ಅರುಂಧತಿಯಾರ್, ಭಂಗಿ, ದಕ್ಕಲಿಗ ಮೊದಲಾದ 13 ಮಾದಿಗ ಸಂಬಂಧಿತ ಜಾತಿಗಳು ಪ್ರವರ್ಗ 3ರಲ್ಲಿವೆ. ಅಲೆಮಾರಿಗಳ ಗುಂಪಿನಲ್ಲಿ ಪ್ರತ್ಯೇಕ ಪ್ರವರ್ಗವೂ ಸಿಗದೆ, ಮಾದಿಗ ಸಂಬಂಧಿತ ಜಾತಿಗಳ ಪ್ರವರ್ಗದಲ್ಲಿಯೂ ಈ ಜಾತಿಗಳನ್ನು ಉಳಿಸದೆ ಈ ಸಣ್ಣ ಜಾತಿಗಳನ್ನು ಭೋವಿ, ಬಂಜಾರ ಜಾತಿಗಳ ನಡುವೆ ಸ್ಪರ್ಧೆಗೆ ಇಳಿಸಿರುವುದು ಸರ್ಕಾರದ ಅಮಾನವೀಯ, ಅವೈಜ್ಞಾನಿಕ ಧೋರಣೆಯಾಗಿದೆ’ ಎಂದು ಅವರು ಅರೋಪಿಸಿದರು.
ಎಸ್‌ಪಿ, ಟಿಎಸ್‌ಪಿಗೆ ಇರುವ ಅನುದಾನವನ್ನು ಒಳಮೀಸಲಾತಿಯಲ್ಲೂ ಅಳವಡಿಸಬೇಕು ಎಂದ ಅವರು, ಈ ಗೊಂದಲಕ್ಕೆ ತಾರ್ಕಿಕ ಅಂತ್ಯ ಹಾಡುವ ತನಕ ಹೋರಾಟ ಮುಂದುವರಿಯಲಿದೆ ಎಂದರು.
ಮುಖಂಡರಾದ ಎಸ್.ದುರ್ಗೇಶ್, ಶೇಷು, ಎಚ್.ಶ್ರೀನಿವಾಸ್, ಕಣಿವೆಹಳ್ಳಿ ಮಂಜುನಾಥ್, ಪೂಜಪ್ಪ, ಎಚ್.ರವಿಕಿರಣ್, ಸೆಲ್ವಮಣಿ, ಜೆ.ಬಿ.ರಾಘವೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.