
ಹಗರಿಬೊಮ್ಮನಹಳ್ಳಿ (ವಿಜಯನಗರ): ಕಲ್ಯಾಣ ಕರ್ನಾಟಕದಲ್ಲಿ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ₹12,900 ಕೋಟಿ ಅಂದಾಜು ಮೊತ್ತದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರೈಲು ಮತ್ತು ಜಲಶಕ್ತಿ ಯೋಜನೆಯ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಅವರು ಭಾನುವಾರ ಪಟ್ಟಣದಲ್ಲಿ ₹38.73 ಕೋಟಿ ಅಂದಾಜು ವೆಚ್ಚದಲ್ಲಿ 35ನೇ ಲೆವೆಲ್ ಕ್ರಾಸಿಂಗ್‌ನಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ 600 ಮೇಲ್ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ, ಇನ್ನೂ 120 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಅವುಗಳಲ್ಲಿ ಪಟ್ಟಣದ ಎಲ್‍ಸಿ ಸಂಖ್ಯೆ 37 ಮತ್ತು 38 ಮೇಲ್ಸೇತುವೆ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ ಎಂದಾಗ ಜನ ಚಪ್ಪಾಳೆ, ಕೇಕೆ, ಜಯಘೋಷ ಮಾಡಿದರು.
‘ಪ್ರಧಾನಿ ನರೇಂದ್ರ ಮೋದಿಯವರು ರೈಲ್ವೆ ಯೋಜನೆಗಳಿಗಾಗಿ ₹45 ಸಾವಿರ ಕೋಟಿ ನೀಡಿದ್ದಾರೆ, ಅಭಿವೃದ್ಧಿಯಲ್ಲಿ ದೇಶ ವಿಶ್ವಭೂಪಟದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಮೊದಲನೇ ಸ್ಥಾನಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ, ಅವರ ಅಧಿಕಾರವಧಿಯ 11ವರ್ಷಗಳಲ್ಲಿ 100 ವರ್ಷದ ಸಾಧನೆ ಮಾಡಿದ್ದಾರೆ’ ಎಂದು ಸಚಿವರು ತಿಳಿಸಿದರು.
ಹಿಂದೆ–ಇಂದು ವ್ಯತ್ಯಾಸ
ಹಿಂದೆ ಕರ್ನಾಟಕಕ್ಕೆ ರೈಲ್ವೆ ಇಲಾಖೆಯಿಂದ ವಾರ್ಷಿಕವಾಗಿ ಕೇವಲ ₹882 ಕೋಟಿ ಅನುದಾನ ಬರುತ್ತಿತ್ತು. ಆದರೆ ಮೋದಿ ಸರ್ಕಾರ ಬಂದ ನಂತರ ವಾರ್ಷಿಕವಾಗಿ ₹7,500 ರಿಂದ 8,000 ಕೋಟಿ ಅನುದಾನ ನೀಡಲಾಗುತ್ತಿದೆ ಎಂದು ಸೋಮಣ್ಣ ಅಂಕಿಅಂಶ ಸಹಿತ ವಿವರಿಸಿದರು.
ಬಳ್ಳಾರಿ-ಚಿಕ್ಕಜಾಜೂರು ಜೋಡಿ ಮಾರ್ಗಕ್ಕೆ ₹3,400 ಕೋಟಿ
ಬಳ್ಳಾರಿ ಮತ್ತು ಚಿತ್ರದುರ್ಗದ ಗಣಿಗಾರಿಕೆ ಹಾಗೂ ಮಂಗಳೂರು-ಹೈದರಾಬಾದ್ ಸಂಪರ್ಕದ ದೃಷ್ಟಿಯಿಂದ ಇದು ಮಹತ್ವದಾಗಿರುವ ಬಳ್ಳಾರಿ-ಚಿಕ್ಕಜಾಜೂರು ಜೋಡಿ ಮಾರ್ಗ ಯೋಜನೆಗೆ 2025ರ ಜೂನ್‌ನಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸುಮಾರು ₹3,400 ಕೋಟಿ ವೆಚ್ಚದ ಈ ಯೋಜನೆಯು ಈ ಭಾಗದ ರೈಲ್ವೆ ಸಂಪರ್ಕದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ಸಚಿವರು ತಿಳಿಸಿದರು.
ಅಭಿವೃದ್ಧಿಗೆ ಬದ್ಧ
ಹಗರಿಬೊಮ್ಮನಹಳ್ಳಿ ಪಟ್ಟಣ, ಕೊಟ್ಟೂರು, ಮರಿಯಮ್ಮನಹಳ್ಳಿ ಸೇರಿದಂತೆ ಹಂಪಾಪಟ್ಟಣ ಮತ್ತು ಮಾಲವಿ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿ ಅಭಿವೃದ್ಧಿ ಪಡಿಸಲಾಗುವುದು, ಕೊಟ್ಟೂರಿನಲ್ಲಿ ರಸಗೊಬ್ಬರ ಸರಕು ಇಳಿಸುವ ಕೇಂದ್ರ ಸ್ಥಾಪಿಸಲಾಗುವುದು, ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಎಲ್ಲ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಜುಲೈ ತಿಂಗಳ ಒಳಗೆ ಹಂಪಿ ರಸ್ತೆಯ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಅಧಿಕಾರಿಗಳಿಗೆ ಖಡಕ್ ಸೂಚನೆ
ಹಂಪಾಪಟ್ಟಣ ಮತ್ತು ಹಗರಿಬೊಮ್ಮನಹಳ್ಳಿ ಸಂಪರ್ಕಕ್ಕೆ ಅಗತ್ಯವಿರುವ 1 ಎಕರೆ 41 ಗುಂಟೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ವಿಳಂಬ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ವೇದಿಕೆಯಲ್ಲೇ ಸೂಚನೆ ನೀಡಿದರು. ರೈಲ್ವೆ ಕಾಮಗಾರಿಗಳಿಗೆ ಅಗತ್ಯವಿರುವ ಅನುಮತಿಗಳನ್ನು ತ್ವರಿತವಾಗಿ ನೀಡುವಂತೆ ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು.
ಸಂಸದ ತುಕಾರಾಂ ಅವರ ಕಾರ್ಯವೈಖರಿಗೆ ಮೆಚ್ಚುಗೆ
ಸಂಸದ ಇ. ತುಕಾರಾಂ ಅವರು ದೆಹಲಿಗೆ ಬಂದು ತಮ್ಮ ಕ್ಷೇತ್ರದ ಕೆಲಸಗಳಿಗೆ ಒತ್ತಾಯಿಸುವುದನ್ನು ಸ್ಮರಿಸಿದ ಸೋಮಣ್ಣ, ಅಭಿವೃದ್ಧಿ ವಿಚಾರದಲ್ಲಿ ತುಕಾರಾಂ ಅವರ ಕಳಕಳಿ ಮತ್ತು ಸಹಕಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ‘ಇದು ಮೋದಿಯವರ ದುಡ್ಡೇ ಹೊರತು ನನ್ನದೂ ಅಲ್ಲ, ರಾಜ್ಯದ್ದೂ ಅಲ್ಲ. ಅಭಿವೃದ್ಧಿಗಾಗಿ ನಾವೆಲ್ಲರೂ ಒಂದಾಗಬೇಕು’ ಎಂದು ಸಲಹೆ ನೀಡಿದರು.
ಸಂಸದ ಇ.ತುಕಾರಾಂ ಮಾತನಾಡಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಗಣಿಗಾರಿಕೆ ಮತ್ತು ಹಲವು ಕಾರ್ಖಾನೆಗಳಿವೆ. ಜೊತೆಗೆ ಪ್ರವಾಸೋದ್ಯಮದಲ್ಲಿಯೂ ಅವಳಿ ಜಿಲ್ಲೆ ಮುಂಚೂಣಿಯಲ್ಲಿದ್ದು, ಜೋಡಿ ರೈಲು ಹಳಿ ನಿರ್ಮಾಣ ಸೇರಿದಂತೆ ವಿದ್ಯುದೀಕರಣ, ಮೇಲ್ಸೇತುವೆ, ಕೆಳಸೇತುವೆ ಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿದರು.
ಶಾಸಕ ಕೆ.ನೇಮರಾಜನಾಯ್ಕ ಮಾತನಾಡಿ, ಕೇಂದ್ರ ಸಚಿವ ವಿ.ಸೋಮಣ್ಣನವರು ನುಡಿದಂತೆ ನಡೆದು ಮೇಲ್ಸೇತುವೆ ಕಾಮಗಾರಿಗಳಿಗೆ ಅನುದಾನ ನೀಡಿದ್ದಾರೆ, ಮಾಲವಿ ಬಳಿ 5ಎಕರೆ ಭೂಮಿ ಇದ್ದು, ಉಗ್ರಾಣ ಕೇಂದ್ರ ಆರಂಭಿಸಬೇಕು, ದ್ವಿಪಥ ರೈಲು ಮಾರ್ಗಗಳನ್ನು ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು, ಇದರಿಂದ ಈ ಭಾಗದ ರೈತರಿಗೆ, ವರ್ತಕರಿಗೆ ಅನುಕೂಲವಾಗುತ್ತದೆ ಎಂದರು.
ನೈರುತ್ಯ ರೈಲ್ವೆ ಇಲಾಖೆಯ ಸಿಎಒ ಅಜಯ್‍ಶರ್ಮಾ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್‌ಪಿ ಎಸ್.ಜಾಹ್ನವಿ, ರೈಲ್ವೆ ಎಜಿಎಂ ವಿಷ್ಣುಭೂಷಣ್, ಮಾಜಿ ಶಾಸಕ ಚಂದ್ರನಾಯ್ಕ, ಭೂಸೇನಾ ನಿಗಮದ ಮಾಜಿ ಅಧ್ಯಕ್ಷ ಬಾವಿ ಬೆಟ್ಟಪ್ಪ, ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಬದಾಮಿ ಮೃತ್ಯುಂಜಯ, ನಂದಿಪುರದ ಮಹೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ ಇದ್ದರು.
ಸಂಸದ, ಸಚಿವ ಪರಸ್ಪರ ಶಹಬ್ಬಾಸ್
‘ಲೋಕಸಭೆ ಸದಸ್ಯನಾಗಿದ್ದು ಅನಿರೀಕ್ಷಿತ, ರಾಜ್ಯದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಲೋಕಸಭೆ ಸದಸ್ಯರಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಕರೆದು ಸಚಿವರನ್ನಾಗಿ ಮಾಡಿದರು, ದೇವರು ಜತೆಯಲ್ಲಿ ಇದ್ದರೆ ಏನೆಲ್ಲಾ ಆಗುತ್ತದೆ’ ಎಂದ ಸೋಮಣ್ಣ, ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು, ಸಂಸದ ತುಕಾರಾಂ ಅಂಥವರು ಬೇಕು ಎಂದರು.
ಸಂಸದ ಇ.ತುಕಾರಾಂ ಮಾತನಾಡಿ, ‘ಸಚಿವ ವಿ.ಸೋಮಣ್ಣ ಅವರು ಬಸವಣ್ಣನವರ ಕಾಯಕಯೋಗಿ ತತ್ವದ ಅಡಿಯಲ್ಲಿ ಬದುಕುತ್ತಿದ್ದಾರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಇವರಂತೆ ಕೆಲಸ ಮಾಡುವವರು ಇಲ್ಲ. ಜನವರಿಯಿಂದ ಅಭಿವೃದ್ಧಿಯ ಶುಕ್ರದೆಸೆ ಆರಂಭವಾಗಿದೆ, ಅವರು ಬಡವರ, ರೈತರ, ಜನಸಾಮಾನ್ಯರ ಪರವಾಗಿ ಇದ್ದಾರೆ, ವಿಧಾನಸೌಧದ ಮೇಲೆ ಇರುವ ಇರುವ ‘ಸರ್ಕಾರದ ಕೆಲಸ, ದೇವರ ಕೆಲಸ’ ಎನ್ನುವ ಘೋಷವಾಕ್ಯ ಸೋಮಣ್ಣ ಅಂಥವರಿಗೆ ಸಲ್ಲುತ್ತದೆ ಎಂದರು.
ರಾಜ್ಯದಲ್ಲಿ ರೈಲ್ವೆ ಇಲಾಖೆಯ ಎಲ್ಲ ಯೋಜನೆಗಳು ಅಭಿವೃದ್ಧಿ ಹೊಂದುತ್ತಿರುವುದು ಪ್ರಧಾನಿ ಮೋದಿ ಅವರಿಂದ ಹೊರತು ಸಿದ್ದರಾಮಯ್ಯ ಅವರಿಂದ ಅಲ್ಲ.– ವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.