ADVERTISEMENT

ಮಲಪನಗುಡಿಯಲ್ಲಿ ಕನಕದಾಸರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 13:41 IST
Last Updated 11 ಡಿಸೆಂಬರ್ 2022, 13:41 IST
ಕನಕದಾಸರ ಜಯಂತಿ ಅಂಗವಾಗಿ ಹೊಸಪೇಟೆ ತಾಲ್ಲೂಕಿನ ಮಲಪನಗುಡಿಯಲ್ಲಿ ಭಾನುವಾರ ನಡೆದ ಮೆರವಣಿಗೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು
ಕನಕದಾಸರ ಜಯಂತಿ ಅಂಗವಾಗಿ ಹೊಸಪೇಟೆ ತಾಲ್ಲೂಕಿನ ಮಲಪನಗುಡಿಯಲ್ಲಿ ಭಾನುವಾರ ನಡೆದ ಮೆರವಣಿಗೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಹಳೆ ಮಲಪನಗುಡಿಯಲ್ಲಿ ಕನಕದಾಸರ 535ನೇ ಜಯಂತಿಯನ್ನು ಭಾನುವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದವರು ಹಂಪಿಯಿಂದ ಜ್ಯೋತಿ ತಂದರು. ಕಾಂಗ್ರೆಸ್‌ ಮುಖಂಡ ಎಚ್‌.ಆರ್‌. ಗವಿಯಪ್ಪ, ಯುವ ಮುಖಂಡ ಸಿದ್ದಾರ್ಥ ಸಿಂಗ್‌ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮದ ಮುಖ್ಯರಸ್ತೆಯಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ಕಳಸ, ಪೂರ್ಣಕುಂಭ ಹಿಡಿದ ಸುಮಂಗಲಿಯರು, ಮಕ್ಕಳು ಸಾಗಿದರು. ಮೆರವಣಿಗೆಯಲ್ಲಿ ನಂದಿಕೋಲು, ಕಂಸಾಳೆ, ಕೀಲು ಕುದುರೆ, ಹಗಲುವೇಷಧಾರಿಗಳು, ಒಂಟೆ, ಕುದುರೆ ಸವಾರರು, ಡೊಳ್ಳು ಕುಣಿತ ಮೆರವಣಿಗೆ ಮೆರುಗು ನೀಡಿತು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಪ್ರವಾಸೋಧ್ಯಮ ಸಚಿವ ಆನಂದ್‌ ಸಿಂಗ್, 15ನೇ ಶತಮಾನದಲ್ಲಿ ದಾಸಶ್ರೇಷ್ಠ ಕನಕದಾಸರು ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ, ಜಾತಿ ಪದ್ಧತಿ ಸೇರಿದಂತೆ ಮುಂತಾದ ಅನಿಷ್ಟ ಪದ್ಧತಿಗಳ ವಿರುದ್ದ ಧ್ವನಿ ಎತ್ತಿ, ಲೋಕದ ಅಂಕು ಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಬದುಕಿಗೆ ಘನತೆ ಬರುತ್ತದೆ ಎಂದು ಹೇಳಿದರು.

ADVERTISEMENT

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿರಾಜ ಶೇಕ್‌ ಮಾತನಾಡಿ, ಕನಕದಾಸರ ಕೀರ್ತನೆಗಳನ್ನು ಓದಿದರೆ ಜೀವನದಲ್ಲಿ ನಾವು ಹೇಗೆ ಇರಬೇಕು, ಹೇಗೆ ಬದುಕಬೇಕು ಎಂದು ಗೊತ್ತಾಗುತ್ತದೆ ಎಂದರು.

ಕನಕದಾಸರ ಭಾವಚಿತ್ರ ಅನಾವರಣಗೊಳಿಸಿದ ಕಾಂಗ್ರೆಸ್ ಮುಖಂಡ ರಾಜಶೇಖರ್ ಹಿಟ್ನಾಳ್ ಮಾತನಾಡಿ, ನಾಡು ಕಂಡ ಅತ್ಯಂತ ಶ್ರೇಷ್ಠ ಕವಿ ಕನಕದಾಸರು. ಹಾಲುಮತ ಸಮಾಜದವರು ವಿಜಯನಗರ ಕ್ಷೇತ್ರದಲ್ಲಿ ಬಹು ಸಂಖ್ಯೆಯಲ್ಲಿದ್ದರೂ ಶೈಕ್ಷಣಿಕ ಸಂಸ್ಥೆಗಳಿಲ್ಲ. ಹಾಸ್ಟೆಲ್ ವ್ಯವಸ್ಥೆ ಇಲ್ಲ. ಈ ಕುರಿತು ಸಮಾಜ ಆಲೋಚಿಸಬೇಕಿದೆ ಎಂದರು.

ಮುಖಂಡರಾದ ಕೆ.ಎಸ್.ಎಲ್.ಸ್ವಾಮಿ, ಎಲ್.ಸಿದ್ದನಗೌಡ, ಕೆ.ಎಂ.ಹಾಲಪ್ಪ, ಅಯ್ಯಾಳಿ ತಿಮ್ಮಪ್ಪ, ಭರಮನಗೌಡ, ಆರ್.ಕೊಟ್ರೇಶ, ಕುರಿ ಶಿವಮೂರ್ತಿ, ರಾಮಚಂದ್ರಗೌಡ, ಎಲ್.ಎಸ್.ಆನಂದ, ಹಂಪಿ ಕನ್ನಡ ವಿ.ವಿ ಪ್ರಾಧ್ಯಾಪಕ ಎಫ್.ಟಿ.ಹಳ್ಳಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ, ಟಿ.ಬಿ ಡ್ಯಾಂ ಸಿಪಿಐ ಹುಲುಗಪ್ಪ, ಅಹಿಂದ ಯುವ ವೇದಿಕೆ ಅಧ್ಯಕ್ಷ ದಲ್ಲಾಲಿ ಕುಬೇರ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.