ADVERTISEMENT

ಹಂಪಿ ವಿವಿ ಬೋಧಕ ಹುದ್ದೆ ಹರಾಜು ಆರೋಪ: ಮಾನನಷ್ಟ ಮೊಕದ್ದಮೆ ಹೂಡುವೆ ಎಂದ ಕುಲಪತಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 10:17 IST
Last Updated 29 ನವೆಂಬರ್ 2021, 10:17 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ   

ಹೊಸಪೇಟೆ (ವಿಜಯನಗರ): ‘ಬೋಧಕ ಹುದ್ದೆಗಳನ್ನು ಹರಾಜು ಮಾಡಲಾಗುತ್ತಿದೆ ಎಂದು ನನ್ನ ವಿರುದ್ಧ ಗುರುತರ ಆರೋಪ ಮಾಡಿರುವವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ತಿಳಿಸಿದರು.

‘ನೇಮಕಾತಿ ಪ್ರಕ್ರಿಯೆಯೇ ಆರಂಭವಾಗಿಲ್ಲ. ಹೀಗಿರುವಾಗ ಹರಾಜು ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿರುವುದು ಶೋಭೆ ತರುವಂಥದಲ್ಲ. ಮೀಸಲಾತಿ ನಿಗದಿಗೊಳಿಸಲು ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ನನ್ನ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಒದಗಿಸಬೇಕು. ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ. ಈ ರೀತಿಯ ಆರೋಪಗಳಿಂದ ವೈಯಕ್ತಿಕವಾಗಿ ನನ್ನ ತೇಜೋವಧೆ ಆಗುತ್ತದೆ. ಮತ್ತು ಕನ್ನಡ ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ಬರುತ್ತದೆ’ ಎಂದು ಸೋಮವಾರ ವಿಶ್ವವಿದ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಇತ್ತೀಚೆಗೆ ನಡೆದ ನೌಕರರ ಸಂಘದ ಸಭೆಯಲ್ಲಿ ಡಾ. ಸಂಪತ್‌ ಕುಮಾರ್‌ ತೆಗ್ಗಿ ಅವರು, ‘ಸಂಬಳ ಬಿಡುಗಡೆಗೆ ಕಮಿಷನ್‌ ಪಡೆದಿದ್ದಾರೆ’ ಎಂದು ಆರೋಪಿಸಿದ್ದಾರೆ. ಆದರೆ, ಜೂನ್‌ನಲ್ಲಿ ಇವರ ಸೇವಾವಧಿ ಕೊನೆಗೊಂಡಿದೆ. ಸೇವೆ ಮುಂದುವರೆಸಲು ಅವರು ಕೋರಿದ್ದರು. ಸರ್ಕಾರದ ಅನುದಾನದ ಕೊರತೆಯಿಂದ ಅವರನ್ನು ಮುಂದುವರೆಸಿರಲಿಲ್ಲ. ಹೀಗಾಗಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಸಹಾಯಕ ಗ್ರಂಥಪಾಲಕ ಶಂಕರಗೌಡ ಗುಂಡಕನಾಳ ಅವರು ಸಂಶೋಧನಾ ವಿದ್ಯಾರ್ಥಿಗಳಿಂದ ಹಣ ಪಡೆಯುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. ಈ ಕುರಿತು ಅವರನ್ನು ವಿಚಾರಿಸಿದ್ದೆ. ಆ ಆರೋಪದಿಂದ ಪಾರಾಗಲು ಅವರು ನನ್ನ ವಿರುದ್ಧ ಆರೋಪ ಮಾಡಿದ್ದಾರೆ’ ಎಂದು ತಿಳಿಸಿದರು.

‘ವಿಶ್ರಾಂತ ಕುಲಪತಿ ಮಲ್ಲಿಕಾ ಎಸ್‌. ಘಂಟಿ ಅವರ ಅವಧಿಯಲ್ಲಿ ನೇಮಕಗೊಂಡ 9 ಬೋಧಕ, 5 ಜನ ಬೋಧಕೇತರ ಸಿಬ್ಬಂದಿಯ ಪ್ರೊಬೆಷನರಿ ಅವಧಿ ಪೂರ್ಣಗೊಂಡಿದೆ ಎಂದು ಘೋಷಿಸುವ ಅಧಿಕಾರ ರಾಜ್ಯಪಾಲರಿಗಿದೆ. ಅವರು ಇದುವರೆಗೆ ಅನುಮೋದನೆ ನೀಡಿಲ್ಲ. ಆದರೆ, ಘೋಷಿಸುವಂತೆ ಸಂಘಟನೆಗಳಿಂದ ಒತ್ತಡ ತರುತ್ತಿರುವುದು ನಿಯಮಬಾಹಿರ. ಅಲ್ಲದೇ 14 ಜನರ ನೇಮಕಾತಿ ನಿಯಮಬಾಹಿರವಾಗಿ ಮಾಡಲಾಗಿದ್ದು, ಅಭ್ಯರ್ಥಿಗಳ ದಾಖಲೆಗಳನ್ನು ಒದಗಿಸುವಂತೆ ಸರ್ಕಾರ ಕೋರಿದೆ. ಈ ಕುರಿತು ಸದ್ಯದಲ್ಲೇ ಸಮಿತಿ ರಚಿಸಿ, ವರದಿ ಕಳಿಸಲು ಉದ್ದೇಶಿಸಲಾಗಿತ್ತು. ಆದರೆ, ಮಲ್ಲಿಕಾ ಘಂಟಿಯವರು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ. ಆ ಅಧಿಕಾರ ವಿಶ್ವವಿದ್ಯಾಲಯಕ್ಕೆ ಇಲ್ಲ. ಸರ್ಕಾರ ಮತ್ತು ಸಿಂಡಿಕೇಟ್‌ ಸಭೆಯಲ್ಲಿ ಚರ್ಚಿಸಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ನಿವೃತ್ತ ನೌಕರರ ಪಿಂಚಣಿ ಹಣ ಸರ್ಕಾರದಿಂದ ಬಿಡುಗಡೆಯಾಗಿಲ್ಲ. ಸದ್ಯದಲ್ಲೇ ಬಿಡುಗಡೆಗೊಳಿಸುವುದಾಗಿ ಸರ್ಕಾರ ತಿಳಿಸಿದೆ. ಅನುದಾನ ಬಂದ ತಕ್ಷಣ ಪಾವತಿಸಲಾಗುವುದು. ಈಗಾಗಲೇ ನಿವೃತ್ತ ನೌಕರರಿಗೆ ಹಿಂಬರಹ ನೀಡಲಾಗಿದೆ. ತಾತ್ಕಾಲಿಕ ನೌಕರರ ಒಂದು ತಿಂಗಳ ವೇತನ ಬಿಡುಗಡೆ ಮಾಡಲಾಗಿದೆ. ಸರ್ಕಾರದಿಂದ ಅನುದಾನ ಬಂದ ನಂತರ ಮಿಕ್ಕುಳಿದ ಹಣ ನೀಡಲಾಗುವುದು’ ಎಂದರು.

‘ಆರು ಜನರಲ್ಲಿ ನಾಲ್ವರು ಬೋಧಕ ಸಿಬ್ಬಂದಿಗೆ ಮುಂಬಡ್ತಿ ನೀಡಲಾಗಿದೆ. ಸಹ ಪ್ರಾಧ್ಯಾಪಕ ಎಂ. ಮಲ್ಲಿಕಾರ್ಜುನಗೌಡ ಅವರ ದಾಖಲೆಗಳನ್ನು ಡಿ. 16ರಂದು ನಡೆಯಲಿರುವ ದಾಖಲೆ ಪರಿಶೀಲನಾ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು. ಆದರೆ, ಮಲ್ಲಿಕಾರ್ಜುನಗೌಡ ಅವರು ನನ್ನ ಚೇಂಬರಿಗೆ ಬಂದು ‘ಹಣಕ್ಕೆ ಬೇಡಿಕೆ ಇಟ್ಟಿದ್ದೀರಿ ಎಂದು ಆರೋಪಿಸುತ್ತೇನೆ. ನಿಮಗೆ ‘ಡ್ಯಾಮೇಜ್‌’ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿ ಹೋಗಿದ್ದಾರೆ. ಅದಕ್ಕೆ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ, ದಾಖಲೆ ಪರಿಶೀಲನಾ ಸಮಿತಿ ಅಧ್ಯಕ್ಷ ಕೆ.ಕೆ. ಮಾಧವ, ಸದಸ್ಯ ಎಸ್‌.ವೈ. ಸೋಮಶೇಖರ್‌, ಕಾನೂನು ಸಲಹಾ ಘಟಕದ ಸೂಪರಿಟೆಂಡೆಂಟ್‌ ಎಚ್‌.ಎಂ. ಸೋಮನಾಥ ಅವರೇ ಸಾಕ್ಷಿ. ಇವರೆಲ್ಲ ಆ ವೇಳೆ ಹಾಜರಿದ್ದರು’ ಎಂದು ವಿವರಿಸಿದರು.

‘ವಂಚನೆ ಪ್ರಕರಣದ ತನಿಖೆ’

‘ವಿಶ್ರಾಂತ ಕುಲಪತಿ ಮಲ್ಲಿಕಾ ಎಸ್‌. ಘಂಟಿ ಅವರ ಅವಧಿಯಲ್ಲಿ ಆಗಿರುವ ವಂಚನೆ ಪ್ರಕರಣವನ್ನು ಸರ್ಕಾರದೊಂದಿಗೆ ಚರ್ಚಿಸಿ, ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುತ್ತೇನೆ’ ಎಂದು ಕುಲಪತಿ ಪ್ರೊ. ಸ.ಚಿ. ರಮೇಶ ತಿಳಿಸಿದರು.

‘2018–19ನೇ ಸಾಲಿನಲ್ಲಿ ಖರ್ಚಾದ ₹23.18 ಕೋಟಿ ಹಣಕ್ಕೆ ಲೆಕ್ಕ ಪತ್ರ ಇಲಾಖೆಯು ಆಕ್ಷೇಪ ವ್ಯಕ್ತಪಡಿಸಿದೆ. ಆ ಸಂದರ್ಭದಲ್ಲಿ ಬಿಲ್‌ ಪಾಸ್‌ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಿಂದ ₹2.33 ಕೋಟಿ ವಸೂಲಾತಿಗೆ ಸೂಚಿಸಿದೆ. ಭ್ರಷ್ಟಾಚಾರ ಮಾಡಿದವರೇ ಭ್ರಷ್ಟಾಚಾರದ ಹೆಸರಲ್ಲಿ ಹೋರಾಟಕ್ಕಿಳಿದಿರುವುದು ವಿಪರ್‍ಯಾಸ’ ಎಂದರು.

*****

ನಾನು ಯಾರಿಗಾದರೂ ಹಣಕ್ಕೆ ಬೇಡಿಕೆಯಿಟ್ಟರೆ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ಕೊಡಬಹುದು. ನಿರಾಧಾರ ಆರೋಪ ಸರಿಯಲ್ಲ.

–ಪ್ರೊ. ಸ.ಚಿ. ರಮೇಶ, ಕುಲಪತಿ, ಹಂಪಿ ಕನ್ನಡ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.