ಹೊಸಪೇಟೆ (ವಿಜಯನಗರ): ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವವನ್ನು ವಿರೋಧಿಸಿ ಗುರುವಾರ ನಗರದಲ್ಲಿ ವಾಲ್ಮೀಕಿ ಸಮಾಜದವರಿಂದ ಬೃಹತ್ ಪ್ರತಿಭಟನೆ ಆರಂಭವಾಗಿದೆ.
ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ ಅವರ ನೇತೃತ್ವದಲ್ಲಿ ಬೆಳಿಗ್ಗೆ 10.30ರ ವೇಳೆಗೆ ನಗರದ ವಾಲ್ಮೀಕಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಈಗಾಗಲೇ ಸಾವಿರಾರು ಮಂದಿ ಸೇರಿದ್ದು, ನಗರದ ಪುನೀತ್ ರಾಜ್‌ಕುಮಾರ್ ವೃತ್ತದತ್ತ ಮೆರವಣಿಗೆ ಬರುವ ವೇಳೆ ಇನ್ನಷ್ಟು ಮಂದಿ ಸೇರಿಕೊಳ್ಳುವ ನಿರೀಕ್ಷೆ ಇದೆ.
‘ಪರಿಶಿಷ್ಟ ಪಂಗಡಕ್ಕೆ ಕುರುಬ ಮತ್ತು ಇತರೆ ಸಮುದಾಯಗಳನ್ನು ಸೇರ್ಪಡೆಗೊಳಿಸುವ ಯೋಜನೆಯನ್ನು ತಕ್ಷಣ ನಿಲ್ಲಿಸಬೇಕು, ಈಗಾಗಲೇ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಎಸ್‌ಟಿ ಫಲಾನುಭವಿಗಳಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ನೀಡಬೇಕು’ ಎಂಬುದು ಸಮುದಾಯದ ಪ್ರಮುಖ ಬೇಡಿಕೆಯಾಗಿದ್ದು, ಪ್ರತಿಭಟನಕಾರರು ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗುತ್ತಿದ್ದಾರೆ.
ಈಗಾಗಲೇ ಆರೇಳು ಸಾವಿರ ಮಂದಿ ಸೇರಿದ್ದು, ಇನ್ನೂ ನಾಲ್ಕೈದು ಸಾವಿರ ಮಂದಿ ಸೇರುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸ್ ಭದ್ರತೆಯನ್ನೂ ಹೆಚ್ಚಿಸಲಾಗಿದೆ.
ಸಮಾಜದ ಮುಖಂಡರಾದ ಜಂಬಯ್ಯ ನಾಯಕ, ದೇವರಮನೆ ಶ್ರೀನಿವಾಸ್, ಎಸ್.ಎಸ್.ಚಂದ್ರಶೇಖರ್, ಗುಡುಗುಡಿ ಸೋಮನಾಥ್, ಎಚ್.ಆಂಜನೇಯ, ಬೆಳಗೋಡು ಅಂಬಣ್ಣ, ಕಿನ್ನಾಳ ಹನುಮಂತ ಸಹಿತ ನಗರದ ಹಲವಾರು ಮುಖಂಡರು ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದಾರೆ. ಹಂಪಿ, ಕಮಲಾಪುರ ಸಹಿತ ತಾಲ್ಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಮಂದಿ ತಂಡೋಪತಂಡವಾಗಿ ಬುರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.