ADVERTISEMENT

PV Web Exclusive: ಇಲ್ಲಿಲ್ಲ ಕೋವಿಡ್‌ ನಿಯಮ!

ಶಶಿಕಾಂತ್ ಎಸ್. ಶೆಂಬೆಳ್ಳಿ
Published 6 ಏಪ್ರಿಲ್ 2021, 13:34 IST
Last Updated 6 ಏಪ್ರಿಲ್ 2021, 13:34 IST
ಇತ್ತೀಚೆಗೆ ನಡೆದ ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ಅಂತರ ಇರಲಿಲ್ಲ. ಯಾರೊಬ್ಬರೂ ಮಾಸ್ಕ್‌ ಧರಿಸಿರಲಿಲ್ಲ
ಇತ್ತೀಚೆಗೆ ನಡೆದ ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ಅಂತರ ಇರಲಿಲ್ಲ. ಯಾರೊಬ್ಬರೂ ಮಾಸ್ಕ್‌ ಧರಿಸಿರಲಿಲ್ಲ   

ಹೊಸಪೇಟೆ (ವಿಜಯನಗರ): ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಕೋವಿಡ್‌ ನಿಯಮಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಆದರೆ, ಆ ನಿಯಮಗಳುವಿಜಯನಗರಕ್ಕೆ ಅನ್ವಯಿಸುವಂತೆ ಕಾಣುತ್ತಿಲ್ಲ.

ಸದ್ಯ ಜಿಲ್ಲೆಯ ವಿವಿಧ ಕಡೆ ನಡೆಯುತ್ತಿರುವ ಚಟುವಟಿಕೆಗಳನ್ನು ಅವಲೋಕಿಸಿದರೆ ಅದು ಗೊತ್ತಾಗುತ್ತದೆ. ಹೊಸ ಕೋವಿಡ್‌ ನಿಯಮಾವಳಿ ಪ್ರಕಾರ, ಸಭೆ, ಸಮಾರಂಭ, ಪ್ರತಿಭಟನೆ, ಧರಣಿ, ಜಾತ್ರೆ, ಉತ್ಸವಗಳನ್ನು ಮಾಡುವಂತಿಲ್ಲ. ಆದರೆ, ನಗರ ಸೇರಿದಂತೆ ಹಲವೆಡೆ ಎಲ್ಲವೂ ಯಾವುದೇ ಅಡೆತಡೆಗಳಿಲ್ಲದೆ ನಡೆಯುತ್ತಿವೆ.

ಜಿಲ್ಲೆಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹರಪನಹಳ್ಳಿ, ಕೊಟ್ಟೂರು ಸೇರಿದಂತೆ ಹಲವೆಡೆ ನೂರಾರು ಜನ ಒಂದೆಡೆ ಸೇರಿ ಜಾತ್ರೆಗಳನ್ನು ಮಾಡಲಾಗಿದೆ. ಸಭೆ, ಸಮಾರಂಭ, ಮದುವೆ ಸೇರಿದಂತೆ ಇತರೆ ಕೌಟುಂಬಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ನೂರಾರು ಜನ ಒಂದೆಡೆ ಸೇರುತ್ತಿದ್ದಾರೆ. ಎಂದಿನಂತೆ ಪ್ರತಿಭಟನೆಗಳು ಮುಂದುವರೆದಿವೆ.

ADVERTISEMENT

ನಗರದ ತಾಲ್ಲೂಕು ಕಚೇರಿ ನಿತ್ಯ ಒಂದಿಲ್ಲೊಂದು ಪ್ರತಿಭಟನೆಗಳು ನಡೆಯುತ್ತಿವೆ. ಯಾವುದೇ ಅಡೆತಡೆಯಿಲ್ಲದೆ ಸಂಘ ಸಂಸ್ಥೆಗಳು, ವಿವಿಧ ಸಮುದಾಯದವರಿಂದ ನಿರಂತರವಾಗಿ ಪ್ರತಿಭಟನೆಗಳು ಜರುಗುತ್ತಿವೆ.

ಅಮವಾಸ್ಯೆ, ಹುಣ್ಣಿಮೆ, ವಾರಾಂತ್ಯದ ದಿನಗಳಲ್ಲಿ ಹಂಪಿ ವಿರೂಪಾಕ್ಷೇಶ್ವರ ಸೇರಿದಂತೆ ಇತರೆ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ಕೊಡುತ್ತಾರೆ. ಆದರೆ, ಎಲ್ಲೂ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್‌ ಧರಿಸುವ ನಿಯಮಗಳು ಪಾಲನೆ ಆಗುತ್ತಿಲ್ಲ.

ಆದರೆ, ಅಧಿಕಾರಿಗಳು ಇದರ ಬಗ್ಗೆ ಬೇರೆಯದೇ ಹೇಳುತ್ತಾರೆ. ‘ಧರಣಿ, ಪ್ರತಿಭಟನಾ ರ್‍ಯಾಲಿ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಯಾರಿಗೂ ಅವಕಾಶ ಕಲ್ಪಿಸುತ್ತಿಲ್ಲ. ಯಾವುದೇ ಬೇಡಿಕೆಗಳಿದ್ದರೂ ನಾಲ್ಕೈದು ಜನ ನೇರವಾಗಿ ಬಂದು ಮನವಿ ಪತ್ರ ಸಲ್ಲಿಸಬಹುದು’ ಎಂದು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ತಿಳಿಸಿದ್ದಾರೆ.

‘ಮದುವೆ ಸಮಾರಂಭಗಳಲ್ಲಿ ಹೆಚ್ಚಾಗಿ ಜನ ಸೇರುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಕಲ್ಯಾಣ ಮಂಟಪಗಳ ಮಾಲೀಕರ ಸಭೆ ಕರೆದು, ಎಚ್ಚರಿಕೆ ನೀಡಲಾಗುತ್ತದೆ. ಅದರ ನಂತರವೂ ಅವರು ನಿಯಮ ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದ್ದಾರೆ.

ಮೇಲ್ಪಂಕ್ತಿ ಹಾಕುವವರೆ ದಾರಿ ತಪ್ಪಿದರೆ

ಸರ್ಕಾರ ಜಾರಿಗೆ ತಂದ ನಿಯಮಗಳನ್ನು ಜನಪ್ರತಿನಿಧಿಗಳೇ ಪಾಲಿಸುವುದಿಲ್ಲ. ಹೀಗಿರುವಾಗ ಪ್ರಜೆಗಳಿಂದ ನಿರೀಕ್ಷಿಸುವುದು ಎಷ್ಟರಮಟ್ಟಿಗೆ ಸರಿ ಎನ್ನುತ್ತಾರೆ ಸಾರ್ವಜನಿಕರು.

‘ನಮ್ಮ ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ‘ಎಲ್ಲರೂ ಕೋವಿಡ್‌ ನಿಯಮ ಪಾಲಿಸಬೇಕು’ ಎಂದು ಕರೆ ಕೊಡುತ್ತಾರೆ. ಆದರೆ, ಅವರೇ ಸಾವಿರಾರು ಜನರನ್ನು ಒಂದೆಡೆ ಸೇರಿಸಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ. ಹಾಗೆ ನೋಡಿದರೆ ಜನರು, ಸರ್ಕಾರ ರೂಪಿಸಿದ ನಿಯಮಗಳಿಗೆ ಹೊಂದಿಕೊಂಡಿದ್ದರು. ಆದರೆ, ರಾಜಕೀಯ ಪಕ್ಷಗಳವರೇ ಸಭೆ, ಸಮಾರಂಭದಲ್ಲಿ ಸಾವಿರಾರು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಿರುವುದರಿಂದ ಸಾರ್ವಜನಿಕರು ಕೂಡ ಯಾವ ನಿಯಮಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮೇಲ್ಪಂಕ್ತಿ ಹಾಕುವವರೆ ದಾರಿ ತಪ್ಪಿದರೆ ಮಾರ್ಗ ತೋರಿಸಲು ಯಾರಿರುತ್ತಾರೆ’ ಎಂದು ಇಲ್ಲಿನ ಹಿರಿಯ ನಾಗರಿಕರಾದ ಬಸವರಾಜ, ರಮೇಶ, ಕೃಷ್ಣ ಭಟ್‌ ಪ್ರಶ್ನಿಸಿದರು.

ಹೊಸಪೇಟೆಯಲ್ಲಿ ಕೋವಿಡ್‌ ಶತಕ

ಹೊಸಪೇಟೆಯಲ್ಲಿ ಕೋವಿಡ್–19 ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇವೆ.

ತಿಂಗಳ ಹಿಂದೆ ತಾಲ್ಲೂಕಿನಲ್ಲಿ ಒಂದೇ ಒಂದು ಕೋವಿಡ್‌ ಪ್ರಕರಣ ಇರಲಿಲ್ಲ. ಆದರೆ, ಇತ್ತೀಚಿನ ಕೆಲವು ದಿನಗಳಿಂದ ಏಕಾಏಕಿ ಅವುಗಳ ಸಂಖ್ಯೆ ಹೆಚ್ಚಾಗಿದೆ. ತಾಲ್ಲೂಕಿನಲ್ಲಿ ಕೋವಿಡ್‌ ಪ್ರಕರಣ ಶತಕದ ಗಡಿ ದಾಟಿದ್ದು, ಸದ್ಯ 102 ಸಕ್ರಿಯ ಪ್ರಕರಣಗಳಿವೆ.

* ಕೊರೊನಾ ಸೋಂಕು ಹರಡದಂತೆ ತಡೆಯುವುದು ಪ್ರತಿಯೊಬ್ಬರ ಕರ್ತವ್ಯ. ಸರ್ಕಾರ ರೂಪಿಸಿರುವ ನಿಯಮ ಪಾಲಿಸಿ, ಸಹಕರಿಸಿದರೆ ಅದು ಸಾಧ್ಯ.

–ಎಚ್‌. ವಿಶ್ವನಾಥ್‌, ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.