ಹೊಸಪೇಟೆ (ವಿಜಯನಗರ): ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸಕಾಲಕ್ಕೆ ಆಂಬುಲೆನ್ಸ್ ಬರದ ಕಾರಣ ಸಾರ್ವಜನಿಕರೊಬ್ಬರು ಸ್ಕೂಟಿಯಲ್ಲಿ ಸಾಗಿಸಿ, ಅವರಿಗೆ ನೆರವಾಗುವುದರ ಮೂಲಕ ಮಾನವೀಯತೆ ತೋರಿಸಿರುವ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.
ತಾಲ್ಲೂಕಿನ ಹೊಸೂರಿನ ಕಿಚಡಿ ಪಂಪಾಪತಿ ಅಪಘಾತದಲ್ಲಿ ಗಾಯಗೊಂಡವರು. ಸ್ಕೂಟಿಯೊಂದಿಗೆ ಅವರ ನೆರವಿಗೆ ಧಾವಿಸಿದ್ದು ಕಂದಾಯ ಇಲಾಖೆಯ ನೌಕರ ಬಾಣದ ಗಣೇಶ್. ಇವರಿಗೆ ಸಹಕರಿಸಿದ್ದು ಪಂಪಾಪತಿ ಅವರೊಂದಿಗೆ ಬಂದಿದ್ದ ಸ್ನೇಹಿತ ಅಂಚಿ ಭರಮಪ್ಪ.
‘ನಾನು ಮತ್ತು ಕಿಚಡಿ ಪಂಪಾಪತಿ ತಾಲ್ಲೂಕಿನ ಹೊಸೂರು ಮಾಗಾಣಿಯಿಂದ ನಗರದ ತಾಲ್ಲೂಕು ಕಚೇರಿಯಲ್ಲಿ ಪಹಣಿ ಪಡೆಯಲು ಬೈಕಿನಲ್ಲಿ ಬರುತ್ತಿದ್ದೆವು. ರಸ್ತೆಯ ಉಬ್ಬಿನಲ್ಲಿ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದೆವು. ಈ ವೇಳೆ ಬೈಕ್ ಹಿಂಬದಿ ಕುಳಿತಿದ್ದ ಪಂಪಾಪತಿಯ ಬಲಗಾಲು ತಿರುಗುವ ಚಕ್ರದೊಳಗೆ ಸಿಲುಕಿ ಕಾಲಿನ ಎಲುಬು ಮುರಿದು, ರಕ್ತಸ್ರಾವವಾಗಿದೆ. ಸಕಾಲಕ್ಕೆ ಆಂಬುಲೆನ್ಸ್, ಆಟೊ ಸಿಗಲಿಲ್ಲ. ನೋವು ಗಮನಿಸಿದ ಬಾಣದ ಗಣೇಶ್ ಅವರು, ಅವರ ಸ್ಕೂಟಿಯಲ್ಲಿ ಪಂಪಾಪತಿ ಅವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು’ ಎಂದು ಅಂಚಿ ಭರಮಪ್ಪ ತಿಳಿಸಿದ್ದಾರೆ.
‘ಕಾಲು ಮುರಿದಿದ್ದರಿಂದ ನೋವಿನಿಂದ ಪಂಪಾಪತಿ ಒದ್ದಾಡುತ್ತಿದ್ದರು. ಆಂಬುಲೆನ್ಸ್‌ಗೆ ಕರೆ ಮಾಡಿದರೆ ಹೋಗುತ್ತಿರಲಿಲ್ಲ. ಆಟೊ ಕೂಡ ಓಡಾಡುತ್ತಿರಲಿಲ್ಲ. ಪಂಪಾಪತಿ ನೋವು ನೋಡಿ ಬಾಣದ ಗಣೇಶ್ ಸ್ಕೂಟಿಯಲ್ಲಿ ಕರೆದುಕೊಂಡು ಹೋಗೋಣ ಎಂದರು. ಕ್ಷಣಕಾಲವೂ ಯೋಚಿಸದೆ ಸ್ಕೂಟಿಯಲ್ಲೇ ಆಸ್ಪತ್ರೆಗೆ ಕರೆದೊಯ್ದೆವು’ ಎಂದು ಹೇಳಿದ್ದಾರೆ.
ಪಂಪಾಪತಿ ಅವರನ್ನು ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿರುವ ವಿಡಿಯೊ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.