
ಹೊಸಪೇಟೆ (ವಿಜಯನಗರ): ‘ನಗರದಲ್ಲಿ 20 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್‌ಗಳು ಸಜ್ಜಾಗುತ್ತಿವೆ. ತಿಂಗಳೊಳಗೆ ಅದರಿಂದಲೇ ನೀರು ಲಭಿಸಲಿದ್ದು, ನಗರದ ಜನತೆಗೆ ಪ್ರತಿದಿನ ಈಗಿನ ನಿರಂತರ ಅರ್ಧ ಗಂಟೆ ಬದಲಿಗೆ ಒಂದು ಗಂಟೆ ನೀರು ಪೂರೈಕೆಯಾಗಲಿದೆ’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ನಗರದ ವಾಸವಿ ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ₹30 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳಿಸಲಾಗಿದ್ದು, ಸೋಮವಾರ ಈ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನೀರಿನ ಸಲುವಾಗಿಯೇ ₹390 ಕೋಟಿ ವೆಚ್ಚದ ಇನ್ನೊಂದು ಯೋಜನೆ ರೂಪಿಸಲಾಗಿದ್ದು, ಅದು ಕಾರ್ಯರೂಪಕ್ಕೆ ಬಂದ ಬಳಿಕ ನಗರಕ್ಕೆ ದಿನದ 24 ಗಂಟೆಯೂ ನೀರು ಪೂರೈಕೆಯಾಗಲಿದೆ’ ಎಂದರು.
‘ವಿಜಯನಗರ ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹200 ಕೋಟಿ ಅನುದಾನ ಬಂದಿದೆ, ₹100 ಕೋಟಿಯ ಕೆಲಸ ಮುಗಿದಿದೆ, ಇನ್ನೂ ₹100 ಕೋಟಿ ಉಳಿದಿದೆ. ಅದರಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಮಾಡುವ ಯೋಜನೆ ಇದೆ. ಹೊಸಪೇಟೆ ನಗರ ಸೇರಿದಂತೆ ವಿಜಯನಗರ ಕ್ಷೇತ್ರದಲ್ಲಿ 170 ಕಿ.ಮೀ.ರಸ್ತೆಗಳಿಗೆ ಮರುಡಾಂಬರೀಕರಣ ಮಾಡಲಾಗಿದೆ’ ಎಂದರು.
ಸಂಕ್ರಾಂತಿ ಕುರಿತು ಚರ್ಚೆ: ಶಾಸಕರು ಬಳಿಕ ಸಂಕ್ರಾಂತಿ ಆಚರಣೆ ಕುರಿತಂತೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದರು. ತಮ್ಮ ಅನುಭವ ಹಂಚಿಕೊಂಡ ಶಾಸಕರು, ಆಂಧ್ರದಲ್ಲಿ ಹಳೆ ಬಟ್ಟೆಗಳನ್ನು ಸುಡುವ ಸಂಪ್ರದಾಯ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಇರುವುದನ್ನು ತಿಳಿಸಿದರು. ನೀರಾವರಿ ವಿಚಾರದಲ್ಲಿ ಆಂಧ್ರ ನಮ್ಮಿಂದ 100 ವರ್ಷ ಮುಂದೆ ಇರುವುದನ್ನು ಅವರು ಬೊಟ್ಟುಮಾಡಿ ತೋರಿಸಿದರು.
ಹಂಪಿ ವಿರೂಪಾಕ್ಷ ದೇವಸ್ಥಾನದ ಅರ್ಚಕ ಮೋಹನ್ ಚಿಕ್‌ಬಟ್ ಜೋಶಿ ಅವರು ಹಂಪಿಯ ಹಿನ್ನೆಲೆ ತಿಳಿಸಿ, ಮಕರ ಸಂಕ್ರಾಂತಿ ಆಚರಣೆಯ ಧಾರ್ಮಿಕ ಪರಿಕಲ್ಪನೆ, ಆಚರಣೆ ಕುರಿತು ಮಾಹಿತಿ ನೀಡಿದರು. ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಕುಬಾಳು ರಾಜೇಂದ್ರ, ಕಾರ್ಯದರ್ಶಿ ಭೂಪಾಳ ಪ್ರಹ್ಲಾದ, ಖಜಾಂಚಿ ಕಾಕುಬಾಳು ಶ್ರೀನಿವಾಸ್, ಕಿರ್ಲೋಸ್ಕರ್ ಮಹಿಳಾ ಸಂಘದ ಅಧ್ಯಕ್ಷೆ ಕಮಲಾ ಗುಮಾಸ್ತೆ, ಗ್ಯಾರಂಟಿ ಸಮಿತಿಯ ಸದಸ್ಯ ಸತೀಶ್ ಭೂಪಾಳ್, ಲೆಕ್ಕಪರಿಶೋಧಕ ರವೀಂದ್ರನಾಥ ಗುಪ್ತ ಇದ್ದರು.
ಶಾಸಕ ಎಚ್.ಆರ್.ಗವಿಯಪ್ಪ ಜತೆಯಲ್ಲಿ ಸೋಮವಾರ ಅನಂತಶಯನಗುಡಿಯ ರೈಲ್ವೆ ಫ್ಲೈಓವರ್ ಕಾಮಗಾರಿ ವೀಕ್ಷಿಸಿದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಏಪ್ರಿಲ್ 10ಕ್ಕೆ ಉದ್ಘಾಟಿಸುವ ದಿನಾಂಕ ನಿಗದಿಪಡಿಸಿದರು. ‘ಅಧಿಕಾರಿಗಳು ಇನ್ನು ಮುಂದೆ ನಿಧಾನಗತಿಯ ಪ್ರವೃತ್ತಿ ತೋರಿಸುವಂತಿಲ್ಲ. ಶಾಸಕರ ಒಳ್ಳೆಯತನಕ್ಕೆ ಬೆಲೆ ಕೊಡಬೇಕು’ ಎಂದು ಸಚಿವರು ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.