ಹಗರಿಬೊಮ್ಮನಹಳ್ಳಿ: ಹುಟ್ಟಿದಾಗಿನಿಂದ ಹಳೆ ಬಟ್ಟೆಯನ್ನಷ್ಟೇ ಕಂಡಿದ್ದ ಇಲ್ಲಿನ ಚಿಂತ್ರಪಳ್ಳಿ ರಸ್ತೆಯ ಅಲೆಮಾರಿ ಸಿಂಧೊಳ್ಳು ಸಮುದಾಯದ ಮಕ್ಕಳಿಗೆ ಉದ್ಯಮಿಯೊಬ್ಬರು ಟ್ರ್ಯಾಕ್‌ಸೂಟ್ ನೀಡಿದ್ದು, ಅದನ್ನು ಧರಿಸಿದ 51 ಮಕ್ಕಳು ಸೋಮವಾರ ಸಂಭ್ರಮಿಸಿದರು.
‘ನಾನು ಮೂರನೇ ತರಗತಿಯಲ್ಲಿ ಓದುತ್ತಿದ್ದೇನೆ, ಇಷ್ಟು ವರ್ಷದಲ್ಲಿ ಹೊಸ ಬಟ್ಟೆಯನ್ನು ಇವತ್ತು ಹಾಕ್ಕೊಂಡಿದ್ದೀನಿ ಸಾರ್’ ಎಂದು ದರ್ಶನ್ ಹೇಳಿದ.
ದರ್ಶನ್‌ನಂತೆ ಬಹುತೇಕ ಅಲೆಮಾರಿ ಮಕ್ಕಳಿಗೆ ಸಮವಸ್ತ್ರ ಜತೆಗೆ ಹೊಸ ಬಟ್ಟೆಯೂ ಇರಲಿಲ್ಲ. ಇದನ್ನು ಅರಿತ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಅವರು ಹೊಸಪೇಟೆಯ ಉದ್ಯಮಿ ಶಿವಪ್ರಕಾಶ್ ಒಂಟಿ ಅವರಿಗೆ ದೂರವಾಣಿ ಕರೆಮಾಡಿ ಅಲೆಮಾರಿ 51 ಶಾಲಾ ಮಕ್ಕಳಿಗೆ ಅಗತ್ಯವಾದ ಬಟ್ಟೆಗಳನ್ನು ದೇಣಿಗೆ ನೀಡಲು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಸೋಮವಾರ ಹೊಸಬಟ್ಟೆ ತೊಟ್ಟ ಮಕ್ಕಳು ಪ್ರತಿಷ್ಠಿತ ಖಾಸಗಿ ಶಾಲೆಗೆ ಹೋಗುವವರಂತೆಯೇ ಮಿಂಚಿಬಿಟ್ಟರು.
ಬಿಆರ್‌ಪಿ ಪರಮೇಶ್ವರಯ್ಯ ಸೊಪ್ಪಿಮಠ ಮತ್ತು ಇತರರು 1ರಿಂದ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್‍ಗಳನ್ನು ಖರೀದಿಸಿದರು. ಇದಕ್ಕೆ ತಲುಲಿದ ₹30 ಸಾವಿರಕ್ಕೂ ಅಧಿಕ ಮೊತ್ತವನ್ನು ಶಿವಪ್ರಕಾಶ್ ಭರಿಸಿದರು.
ಇಲ್ಲಿನ ಚೌಡೇಶ್ವರಿ ದೇಗುಲದ ಮುಂದೆ ಹೊಸ ಬಟ್ಟೆ ಹಾಗೂ ಅಗತ್ಯ ನೋಟ್ ಬುಕ್, ಪೆನ್ ಮತ್ತು ಪೆನ್ಸಿಲ್ ವಿತರಣೆ ಮಾಡಿದಾಗ ಪಾಲಕರ ಆನಂದಕ್ಕೆ ಪಾರವೇ ಇರಲಿಲ್ಲ. ಕೆಲವು ತಾಯಂದಿರ ಕಣ್ಣಾಲಿಗಳು ತುಂಬಿಬಂದವು.
ಈ ಎಲ್ಲ ಮಕ್ಕಳು ಶಾಲೆಯಿಂದ ದೂರವೇ ಉಳಿದಿದ್ದರು. ಈ ಬಗ್ಗೆ ಆಗಸ್ಟ್ 29ರಂದು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾದ ಬಳಿಕ ಇಡೀ ಚಿತ್ರಣವೇ ಬದಲಾಯಿತು. ಬಿಇಒ ಮೈಲೇಶ್ ಬೇವೂರ್, ಇವರನ್ನು ಅನುದಾನಿತ ಅಂಬೇಡ್ಕರ್ ಪ್ರಾಥಮಿಕ ಶಾಲೆಗೆ ಸೇರಿಸಿದ್ದಲ್ಲದೆ, ಇದೀಗ ಟ್ರ್ಯಾಕ್ ಸ್ಯೂಟ್ ಒದಗಿಸಿಕೊಟ್ಟಿದ್ದಾರೆ. ಪ್ರತಿದಿನ ಇಬ್ಬರು ಶಿಕ್ಷಕರು ಟೆಂಟ್‍ಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಕರೆತರುತ್ತಿದ್ದಾರೆ. ಮಕ್ಕಳಿಗೀಗ ಶಾಲೆಗೆ ತೆರಳುವುದು ರೂಢಿಯಾಗಿದೆ.
ಗಣೇಶ ಹಬ್ಬಕ್ಕೆ ದೇಣಿಗೆ ಕೊಡುವುದಕ್ಕಿಂತ ಇಂತಹ ಉತ್ತಮವಾದ ಕಾರ್ಯಗಳಿಗೆ ನೀಡಿರುವುದಕ್ಕೆ ತುಂಬಾ ಖುಷಿ ಇದೆ. ಬಡ ಮಕ್ಕಳು ಹೊಸ ಬಟ್ಟೆ ಧರಿಸಿ ಖುಷಿ ಪಟ್ಟಿದ್ದು ಕಣ್ಣಲ್ಲಿ ಹಾಗೆ ಉಳಿದಿದೆಶಿವಪ್ರಕಾಶ್ ಒಂಟಿ ಉದ್ಯಮಿ
ಎಲ್ಲ ಅಲೆಮಾರಿ ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿಯೇ ಇನ್ನೊಂದು ಜತೆ ಸಮವಸ್ತ್ರ ಶೂ ವಿತರಿಸಲಾಗುವುದು. ಕಾರ್ಖಾನೆಯೊಂದರ ಸಿಎಸ್‌ಆರ್‌ನಿಂದ ಸಿಂದೊಳ್ಳು ಜನಾಂಗದವರಿಗೆ ಮನೆ ನಿರ್ಮಿಸಿಕೊಡುವ ಚಿಂತನೆ ನಡೆದಿದೆಮೈಲೇಶ್ ಬೇವೂರ್ ಬಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.