ADVERTISEMENT

ಕೂಡ್ಲಿಗಿ ತಾಲ್ಲೂಕಿನ ಬರ ಕುರಿತು ಕೇಂದ್ರ ಅಧಿಕಾರಿಗಳ ತಂಡಕ್ಕೆ ವಿವರಣೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2023, 11:29 IST
Last Updated 7 ಅಕ್ಟೋಬರ್ 2023, 11:29 IST
   

ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನಲ್ಲಿನ ಬರ ಪರಿಸ್ಥಿತಿ ಅಧ್ಯಯನಕ್ಕೆ ಬಂದಿದ್ದ ಕೇಂದ್ರ ಅಧಿಕಾರಿಗಳ ತಂಡ ಶುಕ್ರವಾರ ತಾಲ್ಲೂಕಿನ ಈಚಲಬೊಮ್ಮನಹಳ್ಳಿ ಬಳಿಯ ಜಮೀನುಗಳಿಗೆ ತೆರಳಿ ಪರಿಶೀಲನೆ ನಡೆಸಿತು.

ತಾಲ್ಲೂಕಿನ ಗಡಿ ಭಾಗದಲ್ಲಿನ ರೈತ ಬೊಳಗಟ್ಟ ಭರಮಪ್ಪ ಅವರ ಜಮೀನಿಗೆ ಭೇಟಿ ನೀಡಿದ ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜಶೇಖರ್ ನೇತೃತ್ವದ ತಂಡ ಜಮೀನಿನಲ್ಲಿ ಸಂಪೂರ್ಣ ಒಣಗಿ ನಿಂತಿದ್ದ ಮೆಕ್ಕೆ ಜೋಳವನ್ನು ವೀಕ್ಷಣೆ ಮಾಡಿತು. ಇದೇ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಮಳೆ ಇಲ್ಲದೆ ಒಣಗಿದ್ದ ಬೆಳೆಗಳ ಛಾಯಾಚಿತ್ರಗಳನ್ನು ತೋರಿಸುವ ಮೂಲಕ ಬರ ಪರಿಸ್ಥಿತಿಯನ್ನು ತಂಡಕ್ಕೆ ಮನವರಿಕೆ ಮಾಡಿಕೊಡಲಾಯಿತು.

ಈ ಹಿಂದೆ ತಾಲ್ಲೂಕಿನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದ ತಂಡದಲ್ಲಿದ್ದ ಸದಸ್ಯ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ಅವರು, ರಾಜ್ಯದಲ್ಲಿಯೇ ಅತಿ ಕಡಿಮೆ ಮಳೆ ಇಲ್ಲಿ ಬೀಳುತ್ತದೆ. ಇದರಿಂದ ತಾಲ್ಲೂಕು ನಿರಂತರ ಬರಕ್ಕೆ ತುತ್ತಾಗುತ್ತದೆ. ನೀರಾವರಿಯೂ ಇಲ್ಲ, ಕೈಗಾರಿಕೆಗಳು ಇಲ್ಲ. ಇದರಿಂದ ಜನರಿಗೆ ಯಾವುದೇ ಉದ್ಯೋಗ ಸಿಗುತ್ತಿಲ್ಲ ಎಂದು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.

ADVERTISEMENT

ಸ್ಥಳದಲ್ಲಿ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು, ತಾಲ್ಲೂಕಿನ ಸಾಕಷ್ಟು ಜನರು ಪ್ರತಿ ವರ್ಷ ಉದ್ಯೋಗ ಅರಸಿ ರಾಜ್ಯದ ವಿವಿಧಡೆ ಗುಳೆ ಹೋಗುತ್ತಾರೆ ಎಂದು ಹೇಳಿ ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಹಾಳಾಗಿದ್ದ ಬೆಳೆ, ನೀರಿಲ್ಲದ ಕೆರೆ ಕಟ್ಟೆಗಳ ವಿಡಿಯೋವನ್ನು ತಂಡದೆದರು ಪ್ರದರ್ಶನ ಮಾಡಿದರು.

ನಂತರ ರೈತರಾದ ಬಾಷಾ ಹಾಗೂ ಸಂತೋಷ ಅವರು ತಾಲ್ಲೂಕಿನಲ್ಲಿ ಈ ಹಿಂದೆ ಕಾಣದಷ್ಟು ಬರ ಅವರಿಸಿದೆ. ಪ್ರತಿ ಎಕರೆಗೆ 15ರಿಂದ 20 ಸಾವಿರ ವೆಚ್ಚ ಮಾಡಿ ಬೆಳೆದಿರುವ ಎಲ್ಲಾ ಬೆಳೆಗಳು ಮಳೆ ಇಲ್ಲದೆ ಒಣಗಿವೆ. ಜಾನುವಾರುಗಳಿಗೂ ಮೇವು ನೀರು ಸಿಗದ ಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ಕುರಿ ಮೇಕೆಗಳನ್ನು ಸಾಕುವುದು ದುಸ್ತರವಾಗಿದೆ ಎಂದು ತಂಡದೆದರು ತಮ್ಮ ಅಳಲನ್ನು ತೋಡಿಕೊಂಡು, ಶೀಘ್ರದಲ್ಲಿ ಗೋಶಾಲೆ ಆರಂಭ ಮಾಡಬೇಕು, ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಸದಾಶಿವ ಪ್ರಭು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದ್ಗಲ್, ತಹಶೀಲ್ದಾರ್ ಟಿ. ಜಗದೀಶ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವೈ. ರವಿಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಟಿ. ಸುನಿಲ್ ಕುಮಾರ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.