ADVERTISEMENT

ಮರಿಯಮ್ಮನಹಳ್ಳಿ | ಅವಧಿಗೆ ಮೊದಲೇ ಮಳೆ: ಆದಾಯಕ್ಕೆ ಬರೆ

ತುಂಗಭದ್ರ ಜಲಾಶಯದ ಹಿನ್ನೀರಿನ ಒಡಲಿನಲ್ಲಿ ನೂರಾರು ರೈತರಿಂದ ಅಲಸಂದಿ, ಉದ್ದು ಕೃಷಿ

ಎಚ್.ಎಸ್.ಶ್ರೀಹರಪ್ರಸಾದ್
Published 27 ಮೇ 2025, 5:03 IST
Last Updated 27 ಮೇ 2025, 5:03 IST
ಮರಿಯಮ್ಮನಹಳ್ಳಿ ಸಮೀಪದ ವ್ಯಾಸನಕೆರೆ ಹಿಂಭಾಗದ ತುಂಗಭದ್ರ ಜಲಾಶಯದ ಹಿನ್ನೀರಿನ ಅಂಗಳದಲ್ಲಿ ಬೆಳೆದ ಅಲಸಂದಿ ಬೆಳೆಯಲ್ಲಿ ಕಾಯಿಗಳನ್ನು ಬಿಡಿಸುತ್ತಿರುವ ರೈತ ಮಹಿಳೆಯರು 
ಮರಿಯಮ್ಮನಹಳ್ಳಿ ಸಮೀಪದ ವ್ಯಾಸನಕೆರೆ ಹಿಂಭಾಗದ ತುಂಗಭದ್ರ ಜಲಾಶಯದ ಹಿನ್ನೀರಿನ ಅಂಗಳದಲ್ಲಿ ಬೆಳೆದ ಅಲಸಂದಿ ಬೆಳೆಯಲ್ಲಿ ಕಾಯಿಗಳನ್ನು ಬಿಡಿಸುತ್ತಿರುವ ರೈತ ಮಹಿಳೆಯರು    

ಮರಿಯಮ್ಮನಹಳ್ಳಿ: ಪಟ್ಟಣದಿಂದ ಅನತಿ ದೂರದಲ್ಲಿ ಕಾಣ ಬರುವ ತುಂಗಭದ್ರ ಜಲಾಶಯದ ಹಿನ್ನೀರಿನ ಒಡಲಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ನೂರಾರು ರೈತರು ಅಲಸಂದಿ, ಉದ್ದು ಬೆಳೆದಿದ್ದು, ಮುಂಗಾರು ಪೂರ್ವ ಮಳೆ ಸುರಿಯುತ್ತಿರುವುದರಿಂದ ರೈತರ ಲಾಭಕ್ಕೆ ಖೋತಾ ಬೀಳುವ ಲಕ್ಷಣಗಳು ಕಂಡು ಬರುತ್ತಿವೆ.

ಮೇ ತಿಂಗಳ ಆರಂಭದಿಂದ ಒಂದೂವರೆ ತಿಂಗಳಷ್ಟು ಅವಧಿಯಲ್ಲಿ ಉದ್ದು, ಅಲಸಂದಿ ಬೆಳೆಗಳು ಕಟಾವಿಗೆ ಬರುತ್ತವೆ. ಆದರೆ ಈ ಬಾರಿ ಜಲಾನಯನ ಪ್ರದೇಶದಲ್ಲಿ ಅವಧಿಗೆ ಮುನ್ನವೇ ಆರಂಭವಾಗಿರುವ ಮುಂಗಾರಿನಿಂದಾಗಿ ನೀರು ಬೇಗ ಹರಿದು ಬರುತ್ತಿರುವುದರಿಂದ ಫಸಲು ನೀರು ಪಾಲಾಗುವ ಆತಂಕದಲ್ಲಿದ್ದಾರೆ ರೈತರು.

ಜಲಾಶಯದ ಹಿನ್ನೀರಿನ ಬರಿದಾದ ಒಡಲಿನ ಅಂಗಳವೇ ಈ ಭಾಗದ, ಅದರಲ್ಲೂ ಬಹುತೇಕ ಭೂಮಿಯಿಲ್ಲದೆ ನೂರಾರು ರೈತರ ಒಡಲು ತುಂಬುವ ಆಧಾರವಾಗಿದ್ದು, ಇದನ್ನೇ ನಂಬಿ ಹಲವಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ಪ್ರತಿ ವರ್ಷ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಹಿನ್ನೀರು ಹಿಂದೆ ಸರಿಯುತ್ತಿದ್ದಂತೆ ಟಿಬಿ ಬೋರ್ಡ್‍ಗೆ ಸೇರಿದ ನೂರಾರು ಎಕರೆ ವಿಶಾಲವಾದ ಅಂಗಳ ಬರಿದಾಗುತ್ತದೆ. ಈ ಅಂಗಳವೇ ಭಾಗದ ಹಲವಾರು ರೈತರಿಗೆ ವರವಾಗಿದೆ.

ADVERTISEMENT

ಇನ್ನು ಕಣ್ಣು ಹಾಯಿಸಿದಷ್ಟು ದೂರ ಬರಿದಾದ ಒಡಲು ಅಲಸಂದಿ, ಉದ್ದಿನ ಬೆಳೆಗಳ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವುದು ಕಂಡು ಬರುತ್ತಿದ್ದು, ಹಿನ್ನೀರಿನ ಪ್ರದೇಶಕ್ಕೆ ಹೊಂದಿಕೊಂಡ ಪಟ್ಟಣ ಸೇರಿದಂತೆ ಹಂಪಿನಕಟ್ಟೆ, ವೆಂಕಟಾಪುರ, ವ್ಯಾಸನಕೆರೆ, ಅಯ್ಯನಹಳ್ಳಿ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಲೋಕಪ್ಪನಹೊಲ, ಕೆಂಚಟನಹಳ್ಳಿ, ವರದಾಪುರ ಸೇರಿದಂತೆ ಹತ್ತಾರು ಹಳ್ಳಿಯ ನೂರಾರು ರೈತರ ಜೀವನಾಧಾರವಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಅಲಸಂದಿ ಕ್ವಿಂಟಲ್‍ಗೆ ₹6,800 ದರವಿದ್ದು, ಈ ಬಾರಿ ಮುಂಗಾರು ಪೂರ್ವ ಮಳೆ ಆರಂಭವಾಗಿರುವದರಿಂದ ಹಿನ್ನೀರಿನ ಪ್ರದೇಶದಲ್ಲಿ ಬೆಳೆದ ಅಲಸಂದಿ ಹಾಗೂ ಉದ್ದಿನ ಬೆಳೆಗಳು ನೀರು ಪಾಲಾಗುತ್ತಿರುವುದು ಕೆಲ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

‘ನೋಡ್ರಿ ನಮಗೆ ಭೂಮಿ ಇಲ್ಲ. ನಮಗೆ ಈ ಅಂಗಳವೇ ಆಧಾರ, ಈ ಬಾರಿ ನಾಲ್ಕೈದು ಎಕರೆಯಲ್ಲಿ 60 ಕೆ.ಜಿಯಷ್ಟು ಅಲಸಂದಿ ಎರಚಿದ್ದೆವು. ಆದರೆ ನೀರು ಬೇಗ ಹರಿದು ಬರುತ್ತಿರುವುದರಿಂದ ಬೆಳೆಗಳು ನೀರು ಪಾಲಾಗುತ್ತಿವೆ. ಏನು ಮಾಡುವುದು ಬಂದಷ್ಟೇ ಲಾಭ’ ಎನ್ನುತ್ತಾರೆ ಹಿನ್ನೀರಿನ ರೈತರಾದ ಮಾಳಮ್ಮ, ದುರುಗಪ್ಪ, ಹನುಮಂತಪ್ಪ, ಪರಶುರಾಮ ಹಾಗೂ ಇತರರು.

ಬಿತ್ತನೆ ಬೀಜಕ್ಕೆ, ಕೂಲಿಗೆ ಮಾತ್ರ ಹಣ ವ್ಯಯ

ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದಂತೆ ತಮ್ಮ ತಮ್ಮ ಕೃಷಿಭೂಮಿಗಳಿಗೆ ಗಡಿ ಗುರುತು ಮಾಡಿ ಬರುವ ರೈತರು ಮಾರ್ಚ್ ತಿಂಗಳಲ್ಲಿ ಹಿನ್ನೀರು ಸರಿಯುತ್ತಿದ್ದಂತೆ ತಾವು ಹಿಡಿದಿಟ್ಟು ಬಂದ ಎಕರೆಗಟ್ಟಲೆ ಭೂಮಿಯಲ್ಲಿ ಅಲಸಂದಿ ಉದ್ದಿನ ಕಾಳುಗಳನ್ನು ಎರಚಿ ಬರುತ್ತಾರೆ. ಉದ್ದು ಅಲಸಂದಿ ಬೆಳೆಗೆ ಫಲವತ್ತಾದ ಭೂಮಿಯಾಗಿರುವುದರಿಂದ ರೈತರು ಬಿತ್ತನೆ ಬೀಜಕ್ಕೆ ಕೂಲಿಗೆ ಮಾತ್ರ ಹಣ ವ್ಯಯಿಸುತ್ತಾರೆ. ಇನ್ನು ದಂಡೆಯಲ್ಲಿರುವ ಕೆಲ ರೈತರು ಪಂಪ್‍ಸೆಟ್‍ಗಳನ್ನು ಹಾಕಿಸಿಕೊಂಡು ಮುಸುಕಿನ ಜೋಳ ಜೋಳ ಸೇರಿದಂತೆ ಇತರೆ ಬೆಳೆಗಳನ್ನು ಸಹ ಬೆಳೆಯುತ್ತಾರೆ. ಮೇ ತಿಂಗಳ ಮಧ್ಯ ಭಾಗದಿಂದ ಕಾಯಿ ಬಿಡಲು ಆರಂಭವಾಗುತ್ತಿದ್ದಂತೆ ಆ ಕಡೆ ಮುಖ ಮಾಡುತ್ತಾರೆ. ದೊಡ್ಡ ಮಟ್ಟದ ಭೂಮಿ ಹಿಡಿದಿಟ್ಟುಕೊಂಡ ಕೆಲ ರೈತರು ಕ್ವಿಂಟಲ್ ಗಟ್ಟಲೆ ಅಲಸಂದಿ ಉದ್ದು ಬೆಳೆದು ಲಾಭ ಮಾಡಿಕೊಂಡರೆ ಬಹುತೇಕ ರೈತರು ಜೀವನ ನಿರ್ವಹಣೆಗೆ ಸಾಕಗುವಷ್ಟು ಫಸಲು ಕೈಗೆ ಬರುತ್ತದೆ ಎನ್ನುತ್ತಾರೆ.

ಮರಿಯಮ್ಮನಹಳ್ಳಿ ಸಮೀಪದ ವ್ಯಾಸನಕೆರೆ ಹಿಂಭಾಗದ ತುಂಗಭದ್ರ ಜಲಾಶಯದ ಹಿನ್ನೀರಿನ ಅಂಗಳದಲ್ಲಿ ಬೆಳೆದ ಅಲಸಂದಿ ಬೆಳೆಯಲ್ಲಿ ಕಾಯಿಗಳನ್ನು ಬಿಡಿಸುತ್ತಿರುವ ರೈತ ಮಹಿಳೆಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.