
ಹೊಸಪೇಟೆ (ವಿಜಯನಗರ): ನರೇಗಾ ಹೆಸರನ್ನು ಬದಲಿಸಿ ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ ರಚಿಸಿದ್ದಕ್ಕೆ ಹಾಗೂ ಇದರಲ್ಲಿ ಉದ್ಯೋಗ ಪಡೆಯಲು ವಿಧಿಸಿರುವ ನೂರೆಂಟು ಷರತ್ತುಗಳಿಗೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸಂಘಟನೆಯ ಜಿಲ್ಲಾ ಕಾರ್ಯಕರ್ತೆ ಶೈನಾಜ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹೊಸ ಮಸೂದೆ ಬಡವರ ಉದ್ಯೋಗದ ಹಕ್ಕನ್ನು ಕಸಿಯುತ್ತದೆ. 125 ದಿನ ಉದ್ಯೋಗ ನೀಡುವುದಾಗಿ ಹೇಳುತ್ತಲೇ ನೂರೆಂಟು ಷರತ್ತುಗಳನ್ನು ವಿಧಿಸಿದ್ದಾರೆ. ನರೇಗಾ ಮೇಟಿಗಳನ್ನೇ ಇಲ್ಲವಾಗಿಸಿ, ಕೂಲಿಕಾರ್ಮಿಕರೇ ಆನ್‌ಲೈನ್ ಮೂಲಕ ವ್ಯವಹರಿಸುವಂತೆ ಮಾಡಿದ್ದಾರೆ. ಇದರಿಂದ ಕೂಲಿ ಕೆಲಸ ಬಿಟ್ಟು ಗುಳೆ ಹೋಗುವ ಪರಿಸ್ಥಿತಿಯನ್ನು ಕೇಂದ್ರ ತಂದಿತ್ತಿದೆ’ ಎಂದರು.
‘ಸದ್ಯದ ಸ್ಥಿತಿಯಲ್ಲಿ 50 ದಿನದ ಕೆಲಸವನ್ನೂ ಒದಗಿಸಲು ಸಾಧ್ಯವಾಗದ ಸ್ಥಿತಿ ಇದೆ. ಇದೀಗ ಆರ್ಥಿಕ ಹೊರೆಯುನ್ನು ರಾಜ್ಯಗಳ ಮೇಲೆ ಹೊರಿಸಲಾಗಿದೆ. ಕೇಂದ್ರ ಸರ್ಕಾರ ಸೂಚಿಸಿದ ಆಯ್ದ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕೆಲಸ ಮಾಡಬೇಕೆಂಬ ನಿಯಮ ರೂಪಿಸಲಾಗಿದೆ. ಇದೆಲ್ಲವೂ ಗ್ರಾಮೀಣ ಕೂಲಿಕಾರ್ಮಿಕ ವಿರೋಧಿ ನೀತಿಗಳು, ಹೀಗಾಗಿ ಈ ಮಸೂದೆಯನ್ನು ಗ್ರಾಕೂಸ್ ಪ್ರಬಲವಾಗಿ ವಿರೋಧಿಸುತ್ತದೆ’ ಎಂದರು.
‘ಸರ್ಕಾರದ ನಡೆಯನ್ನು ವಿರೋಧಿಸಿ ಡಿ.22ರಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು, ಸಂಸದರ ಕಚೇರಿ ಇರುವ ಕಡೆಗಳಲ್ಲಿ ಅಂತಹ ಕಚೇರಿಗಳ ಬಳಿ ಪ್ರತಿಭಟನೆ ನಡೆಸಲಾಗುವುದು. ಸಂಸದರು ಈ ಮಸೂದೆಯನ್ನು ತಿರಸ್ಕರಿಸುವಂತೆ ಒತ್ತಾಯಿಸಲಾಗುವುದು. ಇದು ನಮ್ಮ ಪ್ರತಿಭಟನೆಗೂ ಮಿಗಿಲಾಗಿ ಹಕ್ಕೊತ್ತಾಯ’ ಎಂದರು.
ಸಂಘಟನೆಯ ಸದಸ್ಯರಾದ ನೇತ್ರಾವತಿ, ಎಲ್ಲಮ್ಮ, ಕುಮಾರಸ್ವಾಮಿ, ರತ್ನಮ್ಮ, ಗೋವಿಂದರಾಜ, ದುರ್ಗಮ್ಮ, ಶ್ರುತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.