ADVERTISEMENT

ಕೊಟ್ಟೂರೇಶ್ವರ ಸ್ವಾಮಿ: ಕೋಟ್ಯಂತರ ಆದಾಯ, ಸೌಕರ್ಯಕ್ಕೆ ಬಡತನ

ಕೊಟ್ಟೂರೇಶ್ವರನ ದರ್ಶನಕ್ಕೆ ನಿತ್ಯ ಸಾವಿರಾರು ಮಂದಿ ಭೇಟಿ

ಗುರುಪ್ರಸಾದ್‌ ಎಸ್‌.ಎಂ
Published 13 ಅಕ್ಟೋಬರ್ 2025, 4:58 IST
Last Updated 13 ಅಕ್ಟೋಬರ್ 2025, 4:58 IST
ಕೊಟ್ಟೂರೇಶ್ವರಸ್ವಾಮಿ ದೇವಸ್ಥಾನದ ಹೊರನೋಟ
ಕೊಟ್ಟೂರೇಶ್ವರಸ್ವಾಮಿ ದೇವಸ್ಥಾನದ ಹೊರನೋಟ   

ಕೊಟ್ಟೂರು: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಇಲ್ಲಿನ ಕೊಟ್ಟೂರೇಶ್ವರ ಸ್ವಾಮಿ ದರ್ಶನಕ್ಕೆ ನಿತ್ಯ ಅಸಂಖ್ಯಾತ ಭಕ್ತರು ಆಗಮಿಸುತ್ತಿದ್ದರೂ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿರುವುದು ದೇವಸ್ಥಾನದ ಆಡಳಿತ ಮಂಡಳಿಯ ನಿರ್ಲಕ್ಷತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮುಜರಾಯಿ ಇಲಾಖೆಯ ಸ್ವಾಧೀನದಲ್ಲಿರುವ ಈ ದೇವಸ್ಥಾನವು ‘ಎ‘ ಶ್ರೇಣಿ ದರ್ಜೆಗೆ ಸೇರಿದ್ದು, ವಾರ್ಷಿಕ ಕೋಟ್ಯಂತರ ರೂಪಾಯಿ ಕಾಣಿಕೆ ಸಂಗ್ರಹವಾಗುತ್ತಿದ್ದರೂ ಸೌಕರ್ಯಗಳು ಮಾತ್ರ ಮರೀಚಿಕೆಯಾಗಿವೆ.

ವಸತಿ ಕೊಠಡಿಗಳ ಕೊರತೆ: ಭಕ್ತರ ವಸತಿಗಾಗಿ ಯಾತ್ರಿ ನಿವಾಸದ ಕೊಠಡಿಗಳು ಸಾಲುತ್ತಿಲ್ಲ, ಅನಿವಾರ್ಯವಾಗಿ ಭಕ್ತರು ಖಾಸಗಿ ವಸತಿ ನಿಲಯಗಳ ಮೊರೆ ಹೋಗಬೇಕಾಗಿದೆ.

ADVERTISEMENT

ಪ್ರಸಾದ ನಿಲಯ ಕೊರತೆ: ದಿನನಿತ್ಯ ಆಗಮಿಸುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರೂ ಪ್ರತ್ಯೇಕ ಪ್ರಸಾದ ನಿಲಯ ನಿರ್ಮಿಸದ ಕಾರಣ ದೇವಸ್ಥಾನದ ಹಿಂಭಾಗದ ಹೊರಾಂಗಣದಲ್ಲಿ ಭಕ್ತರು ಪ್ರಸಾದ ಸ್ವೀಕರಿಸುವಂತಹ ಪರಿಸ್ಥಿತಿ ಇದೆ.

ನೆರಳಿನ ಸೌಲಭ್ಯವಿಲ್ಲ: ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕೆ ಆಗಮಿಸುವ ಭಕ್ತರಿಗೆ ನೆರಳಿನ ಆಶ್ರಯಕ್ಕಾಗಿ ದೇವಸ್ಥಾನದ ಒಂದು ಬದಿ ಮಾತ್ರ ಚಾವಣಿ ನಿರ್ಮಿಸಿರುವುದು ಬಿಟ್ಟರೆ ಮತ್ತೊಂದು ಬದಿ ಕಾಮಗಾರಿ ಇಂದಿಗೂ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಭಕ್ತರು ಬಿಸಿಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ಇದೆ.

ಮಹಿಳೆಯರಿಗಿಲ್ಲ ಮೂಲಸೌಕರ್ಯ: ದೀಡು ನಮಸ್ಕಾರ ಹಾಕುವ ಮಹಿಳಾ ಭಕ್ತರಿಗೆ ಬಟ್ಟೆ ಬದಲಾಯಿಸಲು ಪ್ರತ್ಯೇಕ ಕೊಠಡಿಗಳು ಹಾಗೂ ಜವಳ ತೆಗೆಸಲು ಪ್ರತ್ಯೇಕ ಸ್ಥಳ ಮುಂತಾದ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಹರಕೆ ಗೋವುಗಳಿಗಿಲ್ಲ ಆರೈಕೆ: ಹರಕೆ ಗೋವುಗಳಿಗೆ ಸೂಕ್ತ ಸಂರಕ್ಷಣೆ ದೊರೆಯದ ಕಾರಣ ಮೇವು ಹಾಗೂ ನೀರನ್ನರಿಸಿ ಹೋಗುವ ಹಸುಗಳು ಬೀದಿ ಬದಿಯಲ್ಲಿರುವ ಪ್ಲಾಸ್ಟಿಕ್ ಹಾಗೂ ತ್ಯಾಜ್ಯವನ್ನು ಸಹ ಸೇವಿಸುತ್ತವೆ. ಅನಾರೋಗ್ಯಕ್ಕೀಡಾದ ಹಸುಗಳು ಚಿಕಿತ್ಸೆ ದೊರೆಯದೆ ಅಸು ನೀಗಿರುವುದಲ್ಲದೆ ಕಾಣೆಯಾದ ಪ್ರಸಂಗಗಳೂ ಉಂಟು. ದೇವಸ್ಥಾನಕ್ಕೆ ಉತ್ತಮ ಆದಾಯ ಇದೆ, ಆದರೆ ಹರಕೆಯ ಗೋವುಗಳಿಗೆ ಒಂದು ಸೂರು ಕಲ್ಪಿಸುವುದು ದೇವಸ್ಥಾನದವರಿಗೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆಯನ್ನು ಭಕ್ತರು ಕೇಳುತ್ತಿದ್ದಾರೆ.

ದೇವಸ್ಥಾನದಲ್ಲಿ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲು ಧಾರ್ಮಿಕ ಇಲಾಖೆ ಮುಂದಾಗಬೇಕೆಂಬುದು ಸ್ಥಳೀಯರು ಹಾಗೂ ಭಕ್ತರ ಒತ್ತಾಯ.

ಕೊಟ್ಟೂರೇಶ್ವರಸ್ವಾಮಿ ದೇವಸ್ಥಾನದ ದ್ವಾರಬಾಗಿಲಿನ ಸಮೀಪದಲ್ಲಿ ಅಡ್ಡಾದಿಡ್ಡಿ ನಿಂತಿರುವ ವಾಹನಗಳು
ಹರಕೆಯ ಗೋವುಗಳಿಗೆ ಗೋಶಾಲೆ ಇಲ್ಲದ ಕಾರಣ ರಸ್ತೆಯಲ್ಲಿ ರಾತ್ರಿ ವೇಳೆ ವಿಶ್ರಮಿಸುತ್ತಿರುವುದು.
16ನೇ ಶತಮಾನದ ದೇವಸ್ಥಾನ | 2018ರ ನಂತರ ಭಕ್ತರ ಸಂಖ್ಯೆ ಅಧಿಕ | ₹2 ಕೋಟಿಗೂ ಅಧಿಕ ಆದಾಯ
ಕೊಟ್ಟೂರಲ್ಲಿ ಭಕ್ತರಿಗೆ ಆಗುತ್ತಿರುವ ತೊಂದರೆಗಳ ಅರಿವಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು
ಹನುಮಂತಪ್ಪ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ
ಧಾರ್ಮಿಕ ಇಲಾಖೆ ಹಾಗೂ ಭಕ್ತರ ನೆರವಿನಿಂದ ಸ್ವಾಮಿಗೆ ಬಂಗಾರದ ಮುಖವಾಡ ಗೋಪುರದ ಕಳಸಕ್ಕೆ ಚಿನ್ನದ ಲೇಪನ ದ್ವಾರ ಬಾಗಿಲಿಗೆ ಬೆಳ್ಳಿ ಕವಚ ಅಳವಡಿಸಲಾಗುವುದು
ಎಂ.ಕೆ.ಶೇಖರಯ್ಯ ದೇವಸ್ಥಾನದ ಧರ್ಮಕರ್ತ
ದೇವಸ್ಥಾನಕ್ಕೆ ಅದೆಷ್ಟೋ ದೂರದಿಂದ ಬಂದಿರುತ್ತೇವೆ ಮಹಿಳೆಯರಿಗೆ ಬಟ್ಟೆ ಬದಲಾಯಿಸುವ ಸ್ಥಳದಂತಹ ಕೆಲವು ಅಗತ್ಯ ಸೌಲಭ್ಯ ಇಲ್ಲಿ ತುರ್ತಾಗಿ ಕಲ್ಪಿಸಬೇಕು
ಎಂ.ಗೀತಾ ದಾವಣಗೆರೆಯ ಭಕ್ತೆ
ಗೋವುಗಳ ಸಂತತಿ ಹಾಗೂ ದೇಶದ ಸನಾತನ ಸಂಸ್ಕೃತಿಯನ್ನು ಉಳಿಸಲು ಮುಜರಾಯಿ ಇಲಾಖೆ ಗೋಶಾಲೆ ತೆರೆಯಲು ಮುಂದಾಗಬೇಕು
ಎ.ಎಚ್.ಎಂ.ಷಡಾಕ್ಷರಯ್ಯ ಸ್ಥಳೀಯ ಹಿರಿಯ ನಾಗರಿಕ

ವಾಹನಗಳಿಗಿಲ್ಲ ಪಾರ್ಕಿಂಗ್ ವ್ಯವಸ್ಥೆ

ವಾಹನ ನಿಲುಗಡೆ ಸಮಸ್ಯೆ ಬಹಳ ವರ್ಷಗಳ ಗೋಳು. ದೇವಸ್ಥಾನದ ಮುಂಭಾಗದಲ್ಲಿರುವ ಅಂಗಡಿ ಮುಂಗಟ್ಟುಗಳು ರಸ್ತೆಯನ್ನು ಆಕ್ರಮಿಸಿರುವುದು ಹಾಗೂ ವಾಹನಗಳ ಸವಾರರು ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವುದರಿಂದ ಭಕ್ತರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಮಾವಾಸ್ಯೆ ಕಾರ್ತಿಕ ಮತ್ತು ರಥೋತ್ಸವ ಸಂದರ್ಭಗಳಲ್ಲಿ ನೂರಾರು ವಾಹನಗಳು ಬರುತ್ತವೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆಯೇ ಇಲ್ಲ. ಇದರತ್ತ ಸರ್ಕಾರ ಇನ್ನೂ ಗಮನ ಹರಿಸದೆ ಇರುವುದು ಸೋಜಿಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.