ಟ್ರಕ್ ಟರ್ಮಿನಲ್ ಉದ್ಘಾಟಿಸಿದ ಸಚಿವ ರಾಮಲಿಂಗಾ ರೆಡ್ಡಿ
–ಪ್ರಜಾವಾಣಿ ಚಿತ್ರ
ಹೊಸಪೇಟೆ (ವಿಜಯನಗರ): ‘ರಾಜ್ಯದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಜೀವ ತುಂಬಿದ್ದೇ ಕಾಂಗ್ರೆಸ್ ಸರ್ಕಾರ. ಅದರಂತೆ ಕೇಂದ್ರವೂ ಅಗತ್ಯ ಇರುವಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ನಗರದ ಹೊರವಲಯದ ಅಮರಾವತಿ ಗ್ರಾಮದಲ್ಲಿ ಚಿತ್ರದುರ್ಗ–ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ದೇವರಾಜ ಅರಸ್ ಟ್ರಕ್ ಟರ್ಮಿನಲ್ ಸಂಸ್ಥೆಯ (ಡಿಡಿಟಿಟಿಎಲ್) ವತಿಯಿಂದ ₹37.11 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಟ್ರಕ್ ಟರ್ಮಿನಲ್ ಅನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಹೊಸಪೇಟೆಯ ಈ ಟ್ರಕ್ ಟರ್ಮಿನಲ್ ರಾಜ್ಯದ ಮೂರನೇ ಅತಿ ದೊಡ್ಡ ಸುಸಜ್ಜಿತ ಟ್ರಕ್ ಟರ್ಮಿನಲ್ ಆಗಿದೆ. ಇದರ ಜತೆಗೆ ಇನ್ನೂ ಆರು ಟ್ರಕ್ ಟರ್ಮಿನಲ್‌ಗಳನ್ನು ನಿರ್ಮಿಸಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಟ್ರಕ್ ಟರ್ಮಿನಲ್ ಅಭಿವೃದ್ಧಿಗೆ ಗಮನ ಹರಿಸಿದ್ದು ಕಡಿಮೆ, ಇಲ್ಲವಾಗಿದ್ದರೆ ಇನ್ನಷ್ಟು ಟರ್ಮಿನಲ್‌ಗಳ ನಿರ್ಮಾಣ ಸಾಧ್ಯವಾಗಿರುತ್ತಿತ್ತು. 45 ವರ್ಷಗಳ ಡಿಡಿಟಿಟಿಎಲ್ ಇತಿಹಾಸದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಷ್ಟೇ ಟರ್ಮಿನಲ್‌ಗಳಿಗೆ ಜೀವ ತುಂಬುವ ಕೆಲಸ ಆಗಿದೆ’ ಎಂದು ಹೇಳಿದರು.
ಲಾರಿ ಚಾಲಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಅವರು ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಲಾರಿ ಚಾಲಕರು, ಕ್ಲೀನರ್‌ಗಳ ಕುರಿತಂತೆ ಇರುವ ಕಾಳಜಿಯನ್ನು ಬಹಿರಂಗವಾಗಿಯೇ ಶ್ಲಾಘಿಸಿದರೆ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ನವೀನ್ ರೆಡ್ಡಿ ಅವರು ರಾಜ್ಯದಲ್ಲಿ ಸಾರಿಗೆ ಮಂಡಳಿ ರಚಿಸುವ ಮತ್ತು ಸಾರಿಗೆ ಕುಂದುಕೊರತೆ ಘಟಕ ತೆರೆಯುವ ಅಗತ್ಯವನ್ನು ಒತ್ತಿ ಹೇಳಿದರು.
ಶಾಸಕ ಎಚ್.ಆರ್.ಗವಿಯಪ್ಪ ಅವರು ತಮ್ಮ ಕ್ಷೇತ್ರದಲ್ಲಿ ಆಗಿರುವ ಈ ಸುಸಜ್ಜಿತ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯ ರಾಮೋಜಿ ಇದ್ದರು.
ಒಂದು ತಿಂಗಳು ಉಚಿತ: 37.82 ಎಕರೆಯ ಪೈಕಿ 20 ಎಕರೆ ಪ್ರದೇಶದಲ್ಲಿ ಮೊದಲ ಹಂತದ ಟ್ರಕ್ ಟರ್ಮಿನಲ್ ನಿರ್ಮಾಣವಾಗಿದ್ದು, ಸುಮಾರು 400 ಟ್ರಕ್‌ಗಳಿಗೆ ಏಕಕಾಲದಲ್ಲಿ ತಂಗುವ ವ್ಯವಸ್ಥೆ ಇದೆ. 128 ಬೆಡ್‌ಗಳ ಡಾರ್ಮೆಟರಿ, ಕ್ಯಾಂಟೀನ್, ಶೌಚಾಲಯ, 39 ಏಜೆಂಟ್ ಕೊಠಡಿಗಳು, 9 ಗ್ಯಾರೇಜ್ ಮಳಿಗೆಗಳು, 22 ಗೋಡೌನ್ ಸಹಿತ ಹಲವು ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ ಎಂದು ಡಿಡಿಟಿಟಿಎಲ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ತಿಳಿಸಿದರು.
ಸಚಿವರ ಸೂಚನೆಯಂತೆ ಇಲ್ಲಿ ಒಂದು ತಿಂಗಳ ಅವಧಿಗೆ ಟ್ರಕ್‌ಗಳು ಉಚಿತವಾಗಿ ನಿಲುಗಡೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಸಾರಿಗೆ ಇಲಾಖೆಗೆ ಈ ಬಾರಿ ₹15 ಸಾವಿರ ಕೋಟಿ ವರಮಾನದ ಗುರಿ ಹಾಕಿಕೊಳ್ಳಲಾಗಿದೆ. ಅದನ್ನು ತಲುಪುವ ವಿಶ್ವಾಸ ಇದೆ. ಕಳೆದ ಬಾರಿ ₹13,500 ಕೋಟಿ ಗುರಿ ನಿಗದಿಪಡಿಸಲಾಗಿತ್ತು ಎಂದು ಸಚಿವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.