
ಹೊಸಪೇಟೆ (ವಿಜಯನಗರ): ಮೂರು ರಾಜ್ಯಗಳ ಲಕ್ಷಾಂತರ ರೈತರು ಕಾತರದಿಂದ ಕಾಯುತ್ತಿದ್ದಂತಹ ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್‌ಗೇಟ್ ಅಳವಡಿಸುವ ಕೆಲಸ ಬುಧವಾರ ಬೆಳಿಗ್ಗೆಯಿಂದ ಆರಂಭವಾಗಿದೆ.
ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ, ಅಧೀಕ್ಷಕ ಎಂಜಿನಿಯರ್‌ಗಳು, ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ಉಪಸ್ಥಿತಿಯಲ್ಲಿ ಅಹಮದಾಬಾದ್‌ನ ಹಾರ್ಡ್‌ವೇರ್ ಟೂಲ್ಸ್ ಆ್ಯಂಡ್ ಮೆಷಿನರಿ ಪ್ರೊಜೆಕ್ಟ್ ಕಂಪನಿಯ ನುರಿತ ತಜ್ಞರು ಗೇಟ್ ಅಳವಡಿಸುವ ಕೆಲಸ ಆರಂಭಿಸಿದರು.
ಸಾಂಪ್ರದಾಯಿಕವಾಗಿ ಪೂಜಾ ಕಾರ್ಯವನ್ನು ನಡೆಸಿದ ಬಳಿಕ ಮೊದಲಿಗೆ 18ನೇ ಗೇಟ್‌ಗೆ ಕ್ರೆಸ್ಟ್‌ಗೇಟ್ ಅಳವಡಿಸುವ ಕೆಲಸ ಆರಂಭವಾಗಿದ್ದು, ಕ್ರೇನ್ ಮೂಲಕ ಎಂಡ್ ಗೇಟ್‌ಗಳನ್ನು ತರುವ ಕೆಲಸ ನಡೆಯಿತು.
ಈ ಮೊದಲೇ ನಿರ್ಧರಿಸಿದಂತೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಇದೀಗ 43 ಟಿಎಂಸಿ ಅಡಿಗೆ ಕುಸಿದಿದೆ. ನೀರಿನ ಮಟ್ಟ 1,612.62 ಅಡಿಗೆ (ಗರಿಷ್ಠ 1,633) ಕುಸಿದಿದೆ. ಈ ಮೂಲಕ ಕ್ರೆಸ್ಟ್‌ಮಟ್ಟದ ಕೆಳಗಡೆಯೇ ಇದೀಗ ನೀರು ಸಂಗ್ರಹವಾಗಿದ್ದು, ಗೇಟ್ ಅಳವಡಿಕೆಗೆ ಇರುವ ಎಲ್ಲಾ ಅಡ್ಡಿಯೂ ನಿವಾರಣೆಯಾಗಿದೆ.
ನೀರಿನ ಮಟ್ಟ ಕೆಳಗೆ ಇಳಿದಿರುವ ಕಾರಣ ನದಿಗೆ ನೀರು ಹರಿಸುವುದನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಇದೀಗ ಕಾಲುವೆಗಳಿಗೆ ಮಾತ್ರ ನೀರು ಹರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.